ಸಮವಸ್ತ್ರ ಸಂಹಿತೆ ಎಂಬ ಬೂಟಾಟಿಕೆ

ಇತ್ತೀಚಿನ ವರ್ಷಗಳಲ್ಲಿ ಹೊಸದಾಗಿ ಕಾಲೇಜುಗಳು ಆರಂಭವಾಗುವ ಸಮಯದಲ್ಲಿ ಅನೇಕ ವಿದ್ಯಾ ಸಂಸ್ಥೆಗಳು ಅಲ್ಲಿ ಓದ ಬಯಸುವ ಮತ್ತು ಓದುತ್ತಿರುವ ವಿದ್ಯಾರ್ಥಿಗಳಿಗೆ ವಿಧಿಸುತ್ತಿರುವ ವಸ್ತ್ರ ಸಂಹಿತೆ ಮತ್ತಿತರ ಕಠಿಣ ನಿಯಮಗಳಿಂದಾಗಿ ಸುದ್ದಿಯಲ್ಲಿರುತ್ತವೆ. ಹುಡುಗ, ಹುಡುಗಿಯರ ಫ್ಯಾಷನ್ಗೆ ಕಡಿವಾಣ ಹಾಕುತ್ತೇವೆ ಎನ್ನುವುದಷ್ಟೇ ಅಲ್ಲದೆ ಅವರುಗಳು ಕಾಲೇಜು ಆವರಣದಲ್ಲಿ ಒಟ್ಟಿಗೆ ಕಲೆಯಬಾರದು ಎನ್ನುವ ನಿಯಮ ಕೆಲವೆಡೆ ಜಾರಿಯಾಗುತ್ತಿರುತ್ತದೆ. ಇನ್ನೂ ಕೆಲವೆಡೆಯಂತೂ ಅವರುಗಳು ಬೇರೆ ಮೆಟ್ಟಿಲುಗಳನ್ನೇ ಬಳಸಬೇಕೆಂಬ ನಿಯಮ ಮಾಡಲಾಗುತ್ತದೆ!
ಈಗಷ್ಟೇ ಹೈಸ್ಕೂಲ್ ಮುಗಿಸಿ ಮೊದಲ ಬಾರಿ ಕಾಲೇಜಿಗೆ ಹೆಜ್ಜೆ ಇಟ್ಟು ಬರುವ ಹುಡುಗರಿಗಂತೂ ಇದೊಂದು ಹಿಂದಿನ ವಾತಾವರಣಕ್ಕೇ ವಾಪಸಾದ ಅನುಭವ. ಏಕೆಂದರೆ, ಇಷ್ಟು ಕಾಲ ಅವರುಗಳು ಶಾಲಾ ಸಮಯದಲ್ಲಿ ಕಡ್ಡಾಯವಾಗಿ ಸಮವಸ್ತ್ರ ಧರಿಸುವುದೇ ಅಲ್ಲದೇ ಇನ್ನೂ ಅನೇಕ ಕಟ್ಟುಪಾಡುಗಳಲ್ಲಿ ಬೆಳೆದು ಬಂದಿರುತ್ತಾರೆ. ಈಗ ಕಾಲೇಜಿಗೆ ಸೇರುತ್ತಿದ್ದಂತೆಯೇ ಮೊದಲು ಸಮವಸ್ತ್ರ ಕಳಚಿ ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಇಡೀ ವಾತಾವರಣವನ್ನು ರಂಗೇರಿಸಬೇಕೆಂಬ ಅವರ ಕನಸಿಗೆ ಕೊಡಲಿಯೇಟು!
ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಸಮವಸ್ತ್ರ ಕಡ್ಡಾಯ ಮಾಡಿರುವುದು ಅವರುಗಳು ಸಮಾಜದ ಯಾವುದೇ ಸ್ತರದಲ್ಲಿ ಬೆಳೆಯುತ್ತಿರುವವರಾದರೂ ಸಮಾನತೆಯ ಭಾವನೆ ಬೆಳೆಸಿಕೊಳ್ಳಬೇಕು ಎಂಬ ಉತ್ತಮ ಉದ್ದೇಶದಿಂದ. ಕೆಲವು ವರ್ಷಗಳ ಹಿಂದೆ ಸಮವಸ್ತ್ರಗಳು ಒಂದೇ ರೀತಿಯ ವಿನ್ಯಾಸ ಮತ್ತು ಕೆಲವೇ ಬಣ್ಣಗಳಿಗೆ ಮೀಸಲಾಗಿದ್ದವು. ಅಂದರೆ, ನೀಲಿ-ಬಿಳಿ, ಪೂರ್ತಿ ಬಿಳಿ, ಖಾಕಿ ಅಥವಾ ಖಾಕಿ-ಬಿಳಿ. ಆದರೆ, ಇತ್ತೀಚಿನ ದಿನಗಳಲ್ಲಿ ಇಲ್ಲೂ ಕೂಡ ಬ್ರಾಂಡೆಡ್ ಬಟ್ಟೆಗಳು ಮತ್ತು ವಿನ್ಯಾಸಗಳು ಕಾಣುಸುತ್ತಿವೆ. ಅದನ್ನು ಬಳಕೆಗೆ ತರುವ ವಿದ್ಯಾ ಸಂಸ್ಥೆಗಳಿಗೆ ಪ್ರತಿಷ್ಠೆಯಯನ್ನು ತೋರುವುದೇ ಮುಖ್ಯವಾಗಿರುತ್ತದೆ. ಪ್ರತಿ ಶಾಲೆಯೂ ತಮಗೆ ಬೇಕಾದ ಬಣ್ಣ ಮತ್ತು ವಿನ್ಯಾಸ ರೂಪಿಸಿಕೊಂಡಿವೆ. ಅದಲ್ಲದೇ, ಅವೇ ಸೂಚಿಸುವ ಮಳಿಗೆಗಳಲ್ಲಷ್ಟೇ ಬಟ್ಟೆಯನ್ನು ಖರೀದಿಸಬೇಕು. ಜೊತೆಗೆ, ಆಗಿಂದಾಗ್ಗೆ ಬದಲಾವಣೆಗಳೂ ಆಗುತ್ತಿರುತ್ತವೆ. ಇದು ಮಾರಾಟಗಾರರು ಮತ್ತು ವಿದ್ಯಾ ಸಂಸ್ಥೆಗಳ ನಡುವಿನ ಲಾಭದಾಯಕ ವ್ಯವಹಾರ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಹೀಗಾಗಿ ಮಕ್ಕಳೆಲ್ಲ ಒಂದೇ ಎಂಬ ಭಾವನೆಯನ್ನು ಸಾರಬೇಕಿದ್ದ ಸಮವಸ್ತ್ರಗಳು ಈಗ ಆಯಾ ವಿದ್ಯಾ ಸಂಸ್ಥೆಗಳ ಹೆಚ್ಚುಗಾರಿಕೆಯನ್ನು ಮೆರೆಸುವ ಅಸ್ತ್ರಗಳಾಗಿವೆ.
ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಕಾಲೇಜುಗಳಲ್ಲಿ ಶಿಸ್ತು ಕಾಪಾಡಲು ವಿದ್ಯಾರ್ಥಿಗಳಿಗೆ ಕಟ್ಟುಪಾಡುಗಳನ್ನು ಹಾಕಿಕೊಳ್ಳುವುದು ಅನಿವಾರ್ಯ ಮತ್ತು ಸರಿಯಾದ ಕ್ರಮ ಕೂಡ. ಅದಿಲ್ಲದಿದ್ದರೆ, ಅವು ವಿದ್ಯೆ ನೀಡುವ ತಾಣಗಳಾಗದೇ ಫ್ಯಾಷನ್ ಶೋಗಳ ರ್ಯಾಂಪ್ ಆಗಿಬಿಡುವ ಅಪಾಯವೂ ಇರುತ್ತದೆ. ಆದರೆ, ಕಟ್ಟುಪಾಡಿನ ಹೆಸರಿನಲ್ಲಿ ತರುತ್ತಿರುವ ವಸ್ತ್ರ ಸಂಹಿತೆ ಒಂದು ರೀತಿಯ ಬಾಲಿಶ ಪ್ರಯತ್ನ ಎನ್ನಲೇಬೇಕಾಗುತ್ತದೆ. ಏಕೆಂದರೆ, ಶಿಕ್ಷಣ ಸಂಸ್ಥೆಗಳ ಮುಖ್ಯ ಕೆಲಸ ಯಾವ ವಿದ್ಯಾರ್ಥಿ ಯಾವ ಬಟ್ಟೆ ಧರಿಸಿದ್ದಾನೆ ಎನ್ನುವುದನ್ನು ನೋಡುತ್ತಾ ಕೂಡುವುದಲ್ಲ. ಏಕೆಂದರೆ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಬೇಕಾದ ಇಲ್ಲಿ ಇಂತಹ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಅಸಮಂಜಸ. ಬದಲಿಗೆ, ಸುಲಭವಾಗಿ ಅವು ಒಂದು ನಮೂನೆಯ ಮತ್ತು ಬಣ್ಣದ ವಸ್ತ್ರಗಳನ್ನು ಧರಿಸುವಂತೆ ಹೇಳುವುದು ಉತ್ತಮ. ಈಗಾಗಲೇ ನರ್ಸಿಂಗ್ ಕಲಿಯುವವರು, ಹೊಟೆಲ್ ಮ್ಯಾನೇಜಮೆಂಟ್ ಶಿಕ್ಷಣ ಪಡೆಯುವವರಿಗೆ ಸಮವಸ್ತ್ರ ಕಡ್ಡಾಯ. ಹೀಗಿರುವಾಗ ಇಂತಹ ಒಂದು ಸಮವಸ್ತ್ರ ಉಳಿದ ವಿದ್ಯಾರ್ಥಿಗಳಿಗೂ ಏಕೆ ಅಳವಡಿಸಬಾರದು. ಪ್ರತಿದಿನ ತಮ್ಮ ವಸ್ತ್ರಗಳ ಮೇಲೆ ಹರಿಹಾಯುವ ಕಾಲೇಜು ಸಿಬ್ಬಂದಿ ವರ್ಗದಿಂದ ಆಗುವ ಮುಜುಗರ ವಿದ್ಯಾರ್ಥಿಗಳಿಗೆ ಇದರಿಂದ ಇರುವುದಿಲ್ಲ. ಆದ್ದರಿಂದ ಅವರೂ ಇದಕ್ಕೆ ಹೆಚ್ಚಿನ ಪ್ರತಿರೋಧ ತೋರಲಾರರು.
ಇನ್ನು ಮೊಬೈಲ್ಗಳ ಬಳಕೆಯ ಬಗ್ಗೆ ಹೇಳಬೇಕಾದರೆ ಮೊಬೈಲನ್ನು ಪ್ರತಿದಿನ ತಪಾಸಣೆ ಮಾಡುವುದು ಅತಿರೇಕವೇ ಸರಿ. ಇದರ ಸರಿಯಾದ ಬಳಕೆಯನ್ನು ಎಲ್ಲರೂ ತಂತಾನೇ ಸ್ವ ಇಚ್ಚೆಯಿಂದ ಮಾಡಿಕೊಂಡರೆ ಈ ರೀತಿಯ ಉಪದ್ರವಗಳಿರುವುದಿಲ್ಲ. ಅದು ಸಾಧ್ಯವಿಲ್ಲವಾದ್ದರಿಂದ ಪ್ರತಿ ಕಾಲೇಜಿನಲ್ಲೂ ಮೊಬೈಲ್ ಜಾಮರ್ ಅಳವಡಿಸುವುದು ಒಳ್ಳೆಯದು. ಇದರಿಂದಾಗಿ ಹುಡುಗರಷ್ಟೇ ಅಲ್ಲದೇ ಉಳಿದ ಸಿಬ್ಬಂದಿ ವರ್ಗದವರೂ ಸಹ ಕಾಲೇಜು ನಡೆಯುವ ಸಮಯದಲ್ಲಿ ಮೊಬೈಲ್ ಬಳಕೆ ಮಾಡುವುದನ್ನು ತಡೆದಂತಾಗುತ್ತದೆ.
ಇನ್ನು ಹುಡುಗ, ಹುಡುಗಿಯರು ಕಾಲೇಜು ಆವರಣದಲ್ಲಿ ಒಟ್ಟಿಗೆ ಬೆರೆಯಬಾರದು ಮತ್ತಿತರ ವಿಷಯಗಳಲ್ಲಿ ಹೆಚ್ಚು ಕಟ್ಟುಪಾಡುಗಳನ್ನು ಹೇರದಿರುವುದೇ ಸೂಕ್ತ. ಇದರಿಂದಾಗಿ ಹುಡುಗರಲ್ಲಿ ವಿನಾಕಾರಣ ತಿರುಗಿ ಬೀಳುವ ಮನಸ್ಥಿತಿಯನ್ನು ಬೆಳೆಯಬಹುದು. ಅದಲ್ಲದೇ, ಆ ವಯಸ್ಸಿನಲ್ಲಿ ಪರಸ್ಪರ ಆಕರ್ಷಣೆ ಸಾಮಾನ್ಯ ಸಂಗತಿ. ಅದು ಅತಿರೇಕಕ್ಕೆ ಹೋಗಬಾರದಷ್ಟೆ. ವಿದ್ಯಾ ಸಂಸ್ಥೆಗಳು ಇಂತಹ ಅನುಪಯುಕ್ತ ಕ್ರಮಗಳ ಬಗ್ಗೆ ತಮ್ಮ ಸಮಯ ಮತ್ತು ಬುದ್ಧಿ ವ್ಯಯ ಮಾಡುವುದರ ಬದಲಿಗೆ ಯುವಕರ ಬೌದ್ಧಿಕ ಕ್ಷಮತೆಯನ್ನು ಯಾವ ರೀತಿ ಹೆಚ್ಚಿಸಬೇಕು ಮತ್ತು ಅದು ಅವರ ಏಳಿಗೆಗೆ ಹೇಗೆ ಸಹಕಾರಿಯಾಗಬೇಕು ಎಂಬುದನ್ನು ಚಿಂತಿಸುವುದೊಳಿತು. ಈ ಸಮಸ್ಯೆಗಳಿಗೆಲ್ಲ ಪರಿಹಾರವಿದೆ. ಅದೇನೆಂದರೆ ಪೋಷಕರ ಪಾತ್ರ. ತಮ್ಮ ಮಕ್ಕಳು ಯಾವ ರೀತಿಯ ಬಟ್ಟೆ ಧರಿಸುತ್ತಾರೆ ಮತ್ತು ಅವರು ಕಾಲೇಜು ವೇಳೆಯಲ್ಲಿ ಏನು ಮಾಡುತ್ತಾರೆ ಎಂಬುದರ ಅರಿವೇ ಇಲ್ಲದವರು ಹೇಗೆ ಜವಾಬ್ದಾರಿಯುತ ಪೋಷಕರಾಗುತ್ತಾರೆ? ಮನೆಯೇ ಮೊದಲ ಪಾಠಶಾಲೆ ಎಂಬುದು ಸರ್ವಕಾಲಕ್ಕೂ ಪ್ರಸ್ತುತ.
- ಕೆ.ಎಸ್.ಸೋಮೇಶ್ವರ, ಬೆಂಗಳೂರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


