ಅಂಕಣಗಳು

ಬಾಲ ಕಾರ್ಮಿಕ ಕಾಯಿದೆ ಇಲ್ಲೇಕಿಲ್ಲ?

Published On :

ಮಕ್ಕಳು ಹೊಟ್ಟೆ ಪಾಡಿಗಾಗಿಯೋ ಜೀವನ ನಿರ್ವಹಣೆಗಾಗಿಯೋ ದುಡಿದರೆ ಅದು ಬಾಲ ಕಾರ್ಮಿಕ ತಡೆ ಕಾಯಿದೆಯನ್ವಯ ಅಪರಾಧ. ದುಡಿಸಿಕೊಂಡವರು ಮತ್ತು ಪೋಷಕರು ದಂಡನಾರ್ಹರು. ಇದು ಕಾನೂನು!
ಶ್ರೀಮಂತರ ಮಕ್ಕಳು ಸಿನೆಮಾ ರಂಗದಲ್ಲಿ ಹಗಲಿರುಳೆನ್ನದೆ ಮೈಬಗ್ಗಿಸಿ ಬೆವರು ಹರಿಸಿ ನಟಿಸಿದರೆ, ಸಿನೆಮಾ ನಿರ್ದೇಶಿಸಿದರೆ ಅದು ಅಪರಾಧವಲ್ಲ! ಹೊಟ್ಟೆ ಪಾಡಿಗಾಗಿ ಬಾಲಕರು ಶ್ರಮ ಪಟ್ಟು ದುಡಿಯುವುದು ಅಪರಾಧವಾದರೆ ಬಾಲ ನಟ ನಟಿಯರಿಂದ ಕೆಲಸ ಮಾಡಿಸುವುದೂ ಅಪರಾಧವಲ್ಲವೇ?
ಮಕ್ಕಳು ಸ್ಪ್ಯಾನರ್, ಸ್ಕ್ರೂ ಡ್ರೈವರ್ ಕಟ್ಟಿಂಗ್ ಪ್ಲೇಯರ್ ಹಿಡಿದು ಮೆಕ್ಯಾನಿಕ್ ಕೆಲಸ ಮಾಡುವ ಮಕ್ಕಳ ಶ್ರಮ ಕಾನೂನು ಬಾಹಿರ. ಹಾಗಿದ್ದರೆ ಕ್ಯಾಮೆರಾ ಹಿಡಿದು ಹಗಲು ರಾತ್ರಿ ಎನ್ನದೆ ಸಿನೆಮಾ ನಿರ್ದೇಶನ ಮಾಡುವವರ ಶ್ರಮವೂ ಅಪರಾಧವಲ್ಲವೇ? ಆತನ ಶ್ರಮಕ್ಕೆ ಕಲೆಯೆಂದು ಹೆಸರಿಟ್ಟು ಆತನಿಗೆ ಸರಕಾರವೇ ಪ್ರಶಸ್ತಿ ಪುರಸ್ಕಾರ ನೀಡುತ್ತದೆ. ಲಕ್ಷಾಂತರ ರುಪಾಯಿ ಸಂಭಾವನೆ ನೀಡಲಾಗುತ್ತದೆ. ಇತ್ತ ಸ್ಪಾನರ್ ಹಿಡಿದು ರಜಾದಿನಗಳಲ್ಲಿ ದುಡಿಯುವ ಮಕ್ಕಳಿಗೆ ಬಾಲಕಾರ್ಮಿಕ ನಿಷೇಧ ಕಾಯ್ದೆಯ ಅಸ್ತ್ರ ಪ್ರಯೋಗಿಸಲಾಗುತ್ತದೆ. ವಿದ್ಯಾಭ್ಯಾಸ ಮಾಡುವುದಕ್ಕಾಗಿ ಮೆಕ್ಯಾನಿಕ್ ಕೆಲಸ ಮಾಡುವ ಬಾಲಕರನ್ನು ಪತ್ತೆ ಹಚ್ಚಿ ಅವರಿಂದ ದುಡಿಸಿಕೊಳ್ಳುವ ಮಾಲೀಕರಿಗೆ ಶಿಕ್ಷೆ ನೀಡಿದ ಮೇಲೆ ಈ ಬಾಲಕರ ವಿಧ್ಯಾಭ್ಯಾಸದ ಹೊಣೆ ಯಾರದ್ದು? ಸರಕಾರದ್ದೇ?
12-13 ವರ್ಷದ ಆ ಪುಟ್ಟ ಬಾಲಕಿ ಬೆವರು ಸುರಿಸುತ್ತಾ ಅಳುತ್ತಾ ಮೈ ಬಗ್ಗಿಸುತ್ತಾ, ಕರುಳು ಹಿಂಡಿದಂತೆ, ಕೊರಿಯೋಗ್ರಾಫರ್ ಹೇಳಿದಂತೆ ಕುಣಿಯುತ್ತಿದ್ದರೆ ಎಂತಹವರಿಗೂ ಮನ ಕರಗದಿರದು. ಅವಳ ಪೋಷಕರಿಗೆ ಪ್ರಚಾರವೇ ಮುಖ್ಯ. ಪಾಪ ಆ ಬಾಲಕಿಯ ಯಾತನೆ ಗೋಳು ಅವರಿಗೆಲ್ಲಿ ಅರ್ಥವಾಗಬೇಕು? ಆ ಬಾಲಕಿಗೆ ಅಶ್ಲೀಲ ಉಡುಗೆ ತೊಡಿಸಿ ರಿಯಾಲಿಟಿ ಶೋನಲ್ಲಿ ಅಸಭ್ಯ ನೃತ್ಯ ಮಾಡಿಸುತ್ತಾ ದೌರ್ಜನ್ಯ ನಡೆಸುತ್ತಿದ್ದರೆ ಅದಕ್ಕೆ ಚಪ್ಪಾಳೆ. ಆಕೆಗೆ ಅವಾರ್ಡ್. ಆಕೆಯ ಪೋಷಕರಿಗೆ ಅಭಿನಂದನೆಯ ಸುರಿಮಳೆ. ಟಿ.ವಿ. ಗೆ ಒಳ್ಳೆಯ ಟಿಆರ್‌ಪಿ! ಬಾಲಕಿಯ ಮೇಲಿನ ಆ ದೌರ್ಜನ್ಯಕ್ಕೆ ಯಾರಿಗೂ ದಂಡವಿಲ್ಲ, ಕಾನೂನು ಕ್ರಮವಿಲ್ಲ. ಅಂಧಾ ಕಾನೂನು!
ಮಕ್ಕಳನ್ನು ದುಡಿಸಿಕೊಳ್ಳುವವರಿಗೆ ಶಿಕ್ಷೆಯಾಗಲೇಬೇಕು ಎನ್ನುವುದಾದರೆ ಕಲೆಯ ಹೆಸರಲ್ಲಿ ಪುಟ್ಟ ಗೌರಿಯರಿಗೆ ಹಾಗೂ ಬಾಲ ಕಿಷನ್‌ರನ್ನು ಶೋಷಿಸುವ ಪೋಷಕರಿಗೂ ಶಿಕ್ಷೆಯಾಗಲಿ.

-ಪಿ.ಜೆ.ರಾಘವೇಂದ್ರ
ನ್ಯಾಯವಾದಿ, ಮೈಸೂರು


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.