ಅಂಕಣಗಳು

ಚುಟುಕು-ಕುಟುಕು

Published On :

ಸಿಕ್ಕ ಕೃಷ್ಣ
ಯಶೋಧೆಯ ಮುಂದೆ
ಕೃಷ್ಣನದ್ಯಾವ ಲೆಕ್ಕ?
ಬೆಣ್ಣೆ ಕದಿಯಲು ಹೋಗಿ
w‌h‌it​e‌hand​ ಆಗಿ ಸಿಕ್ಕ!

ನವ್ಯ ಕವಿ
ಕಥೆಗೆ ಕತ್ತರಿ ಹಾಕಿ, ಪದವ ಪಕ್ಕಕೆ ನೂಕಿ
ಮುಂದೇನೂ ತಿಳಿಯದೆ ಪೆನ್ನನವ ಬಿಟ್ಟ
ಯಾರೋ ಓದಿದರದನು, ಏನೂ ತಿಳಿಯಲೆ ಇಲ್ಲ
ಕೊಟ್ಟರವಗೆ ನವ್ಯ ಕವಿಯೆಂಬ ಪಟ್ಟ!

ಸುದ್ದಿಕತೆ
ಅವರು ಬಹುದೊಡ್ಡ ನಾಟಕಕಾರರು. ಕಾಲಕ್ಕೆ ತಕ್ಕಂತೆ ಪಾತ್ರ, ಪಾತ್ರಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವುದರಲ್ಲಿ ಎತ್ತಿದ ಕೈ. ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವಿಮಿಂಗ್ ಪೂಲ್‌ನಲ್ಲಿ ಹಾಯಾಗಿ ತೇಲುತ್ತಾ ಮಜ ಅನುಭವಿಸಿದವರು.
ಇತ್ತೀಚೆಗೆ ಸೈಕೋ ಸಾಹಿತಿಯೊಬ್ಬ ತನ್ನೊಡಲ ಹಳವಂಡಗಳನ್ನೆಲ್ಲ ಹಾಳೆಯ ಮೇಲೆ ಹರಿಸಿ ಎಷ್ಟೋ ಜನರಿಗೆ ನೋವು ಕೊಟ್ಟು ವಿವಾದಕ್ಕೀಡಾದ. ಆಗ ಈ ನಾಟಕಕಾರರು ಅವನ ಬೆಂಬಲಕ್ಕೆ ನಿಂತು "ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವಾಮಿ...ಅಭಿವ್ಯಕ್ತಿ ಸ್ವಾತಂತ್ರ್ಯ" ಎಂದು ಜನರಿಗೆ ಗದರಿಸಿ ಲೇಖಕನ ಬೆನ್ನು ತಪ್ಪರಿಸಿದರು.
ಈ ಘಟನೆಗಿಂತಲೂ ಕೆಲವು ತಿಂಗಳ ಹಿಂದೆ ಏನಾಗಿತ್ತೆಂದರೆ....
ಇದೇ ನಾಟಕಕಾರರ ನಾಟಕವೊಂದನ್ನು ಯುವಕನೊಬ್ಬ ನಿರ್ದೇಶಿಸಿದ. ಈ ನಾಟಕದಲ್ಲಿ ನಮ್ಮ ಹಿರಿಯ ನಾಟಕಕಾರರದ್ದೇ ಒಂದು ಪಾತ್ರವನ್ನು ಆತ ಸೃಷ್ಟಿಸಿಬಿಟ್ಟ. ಜೋರು ಗದ್ದಲ ಶುರುವಾಯಿತು. ರೊಚ್ಚಿಗೆದ್ದ ಹಿರಿಯ ನಾಟಕಕಾರನ ಹಿತೈಷಿಗಳು(ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರು) ಆ ಯುವಕನ ನಾಟಕಕ್ಕೆ ಇನ್ನೆಂದೂ ಜಾಗ ಕೊಡುವುದಿಲ್ಲ ಎಂದು ಶಪಥ ಮಾಡಿದರು. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ. ಏಕೆಂದರೆ ತುಸು ಅತಿರೇಕವೆನಿಸುವಂತೆಯೇ ಆ ನಾಟಕವನ್ನು ಆತ ರೂಪಾಂತರಿಸಿ ನಾಟಕಕಾರರನ್ನು ಹಂಗಿಸಿದ್ದ.
ಆದರೆ ಅಂದೇಕೋ ನಮ್ಮ ಹಿರಿಯ ನಾಟಕಕಾರರಿಗೆ "ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವಾಮಿ.." ಎಂದು ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಏಕೆಂದರೆ ಅದೇ ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ವಿಮಿಂಗ್ ಪೂಲ್‌ನಲ್ಲೇ ಆ ಯುವಕ ಅವರನ್ನು ಮುಳುಗಿಸಿ ಉಸಿರುಗಟ್ಟಿಸಿದ್ದ!
ಜಗಜಾಲಾಟ
ಇರಾಕ್‌ನಲ್ಲಿ ಶಿಯಾಗಳ ವಿರುದ್ಧ ಸುನ್ನಿ ಮುಸಲ್ಮಾನರು ಮೇಲುಗೈ ಸಾಧಿಸುತ್ತಾ ಹೊರಟಿದ್ದಾರೆ. ಈ ಹುಚ್ಚಾಟವನ್ನು ನೋಡಿ ಪ್ರಪಂಚವೇ ಬೆಚ್ಚಿಬಿದ್ದಿದೆ. ಸಮಯಸಾಧಕ ಅಮೆರಿಕಕ್ಕೂ ಈಗ ಏನಾಗುತ್ತದೋ, ಏನು ಮಾಡಬೇಕೋ ಎನ್ನುವುದು ತೋಚದೆ ಚಡಪಡಿಕೆಯಾಗಿದೆ. ಆದರೆ ಅದಕ್ಕಿಂತಲೂ ಹೆಚ್ಚು ಚಿಂತೆಗೀಡಾಗಿದೆ ಬ್ರಿಟನ್. ಏಕೆಂದರೆ ಅದರ ಒಡಲಲ್ಲೀಗ ಮಾರಣಾಂತಿಕ ವೈರಸ್‌ನಂತಿರುವ ಜಿಹಾದಿ ಮನಸ್ಥಿತಿಗಳು ರೋಗ ಹಬ್ಬಿಸತೊಡಗಿವೆ. ಇನ್ನು ಇಪ್ಪತ್ತು ವರ್ಷಗಳಲ್ಲಿ ಯುಕೆಯಲ್ಲಿ ಮುಸಲ್ಮಾನರ ಸಂಖ್ಯೆ 5.5 ಮಿಲಿಯನ್‌ಗೆ ಏರಲಿದೆ(ಕುವೈತ್‌ಗಿಂತಲೂ ಹೆಚ್ಚು) ಎಂದು ಅಲ್ಲಿನ ಸರ್ಕಾರಿ ಅಂಕಿಸಂಖ್ಯೆಗಳೇ ಹೇಳುತ್ತಿವೆ.
ಅಂಜಮ್ ಚೌಧರಿ ಎಂಬ ಬಲಿಷ್ಠ ಸುನ್ನಿ ಧರ್ಮಗುರು "ಶಿಯಾಗಳೆಲ್ಲ ನಮ್ಮ ಶತ್ರುಗಳು" ಎಂದು ಅಲ್ಲಿನ ಮುಸಲ್ಮಾನ ಯುವಕರ ಬ್ರೇನ್ ವಾಶ್ ಮಾಡುತ್ತಿದ್ದಾನೆ. ಎರಡು ದಿನದ ಹಿಂದೆ ಲಂಡನ್‌ನ ಮಸೀದಿಯೊಂದರಲ್ಲಿ ಪ್ರಾರ್ಥನೆ ಮುಗಿಸಿ ಬಂದ ಕೆಲವು ಸುನ್ನಿ ಯುವಕರು, ಅಲ್ಲೇ ಅಡ್ಡಾಡುತ್ತಿದ್ದ ಶಿಯಾ ಮುಸಲ್ಮಾನ ಯುವಕನೊಬ್ಬನ ಮೇಲೆ ಪ್ರಾಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಅಂಜಮ್ ಚೌಧರಿ ಸಿರಿಯಾದಲ್ಲಿ ಜಿಹಾದ್ ನಡೆಸಬೇಕು ಎಂಬ ಕರೆಯನ್ನೂ ಕೊಟ್ಟಿದ್ದಾನೆ. ಕಟ್ಟರ್‌ಪಂಥಿಗಳಿಗೆ ಸುಲಭವಾಗಿ ಸಿಕ್ಕಿಬೀಳುತ್ತಿರುವ ಬ್ರಿಟಿಷ್ ಯುವಕರೂ ಕೂಡ ಈಗ ಗನ್ನು ಹಿಡಿದು ಜಿಹಾದ್ ಘೋಷಿಸುತ್ತಿದ್ದಾರೆ. ಅಬು-ತಲ್ಹಾ ಅಲ್ ಮುಜಹಿರ್, ಅಬುಹುಸೇನ್ ಅಲ್ ಬ್ರಿಟನಿ, ಅಬು ಅಬ್ದುಲ್ಲಾ ಎಂಬ ಬ್ರಿಟಿಷ್ ಯುವಕರು ಈಗ ಸಿರಿಯಾದಲ್ಲಿ ಹತ್ಯಾಕಾಂಡದಲ್ಲಿ ತೊಡಗಿದ್ದಾರೆ. ಇವರೆಲ್ಲರಿಗೆ ಟ್ವಿಟರ್ ಖಾತೆಗಳೂ ಇದ್ದು, ಪ್ರತಿದಿನ ತಾವು ಕೊಂದವರ ಫೋಟೋಗಳು, ಮಾಡಿದ ದಾಳಿಗಳ ಕುರಿತು ಅಪ್‌ಡೇಟ್ ಮಾಡುತ್ತಿರುತ್ತಾರೆ! ದುರ್ದೈವವೆಂದರೆ ಟ್ವಿಟರ್‌ನಲ್ಲಿ ಸಾವಿರಾರು ಬೆಂಬಲಿಗರನ್ನೂ ಈ ಮತಾಂಧರು ಹೊಂದಿರುವುದು.
ಇವೆಲ್ಲ ಬದಲಾವಣೆಗಳಿಂದ ಬೆಚ್ಚಿಬಿದ್ದಿರುವ ಬ್ರಿಟನ್‌ನ ಜನತೆ ತಮ್ಮ ದೇಶದಲ್ಲಿ ಹಬ್ಬುತ್ತಿರುವ ಈ ರೋಗವನ್ನು ಹತ್ತಿಕ್ಕುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ವ್ಯಂಗ್ಯವೆಂದರೆ ಅಲ್ಲಿನ ರಾಜಕಾರಣಿಗಳು, ಮುಖ್ಯವಾಗಿ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಕೂಡ ವೋಟ್‌ಬ್ಯಾಂಕ್ ರಾಜಕಾರಣದ ರುಚಿ ಹತ್ತಿಸಿಕೊಂಡು ಏನೂ ಆಗಿಲ್ಲವೇನೋ ಎನ್ನುವಂತೆ ಆಕಾಶ ನೋಡುತ್ತಿದ್ದಾರೆ!
 
ಕೊಳವೆಗೆ ಕಣ್ಣು
ದಿನನಿತ್ಯ ಬಳಸುವ ಸಾಮಾನ್ಯ ವಸ್ತುಗಳ ಹಿಂದೆ ವಿಜ್ಞಾನಿಗಳ ಎಷ್ಟೊಂದು ಅಸಾಮಾನ್ಯ ಶ್ರಮವಿದೆ ಎನ್ನುವುದು ನಮಗೆ ತಿಳಿಯದು. ಒಂದು ರುಪಾಯಿಯ ಒಂದು ಗುಳಿಗೆಯನ್ನು ಮಾರುಕಟ್ಟೆಗೆ ತರಲು ಯಾವ ರೀತಿಯ ಪ್ರಯೋಗಗಳನ್ನು ಪಾಸು ಮಾಡಬೇಕಾಗುತ್ತದೆ? ಎಷ್ಟು ವರ್ಷ ಒದ್ದಾಡಬೇಕಾಗುತ್ತದೆ? ಜೈವಿಕ ತಂತ್ರಜ್ಞಾನ ಯಾವ ರಂಗಗಳಲ್ಲಿ ಬಳಕೆಯಾಗುತ್ತಿದೆ? ಮಾನವ ತದ್ರೂಪು ಸೃಷ್ಟಿ ಸಾಧ್ಯವೇ? ಎಂಬ ಜಟಿಲ ಪ್ರಶ್ನೆಗಳಿಗೆ ಉತ್ತರ ಹೇಳುತ್ತಲೇ, ಮಕ್ಕಳನ್ನು ಅಚ್ಚರಿಪಡಿಸಬಲ್ಲ ಅತ್ಯಂತ ಸರಳ ಪ್ರಯೋಗಗಳನ್ನೂ ಕಲಿಸಿಕೊಡುತ್ತಿದೆ ಯೂಟ್ಯೂಬ್‌ನಲ್ಲಿ 'ಕ್ರೇಜೀ ರಷಿಯನ್ ಹ್ಯಾಕರ್‌' ಎಂಬ ಪೇಜ್. ಕೋಕಾ ಕೋಲಾ ಒಳಗೆ ಮೆಂಟೋಸ್ ಕ್ಯಾಂಡಿಯನ್ನು ಹಾಕಿದಾಗ ಬಾಟಲಿ ಸ್ಫೋಟಿಸುವುದೇಕೆ? ಹೀಲಿಯಂ ಗಾಳಿಯನ್ನು ಎಳೆದುಕೊಂಡರೆ ಧ್ವನಿಯೇಕೆ ಬದಲಾಗುತ್ತದೆ? ಎಂಬುದಕ್ಕೆ ವೈಜ್ಞಾನಿಕ ಕಾರಣವನ್ನು ತಿಳಿದುಕೊಳ್ಳಬೇಕೆಂದರೆ ಯೂಟ್ಯೂಬ್‌ನಲ್ಲಿ C‌raz​y​R‌u​s​s‌i​anH​a‌c‌ke‌r ಎಂದು ಟೈಪ್ ಮಾಡಿ.
ವಿರಾಮ-ಲೋಕಾಭಿರಾಮ
ದಿನಕ್ಕೊಂದು ಏರಿಯಾಗಳನ್ನು ಹಡೆಯುತ್ತದೆ ನಿರಂತರ ಬಸುರಿ ಬೆಂಗಳೂರು. ಹುಲ್ಲುಹಾಸಿನಲ್ಲಿ ಸೂಜಿಯನ್ನಾದರೂ ಹುಡುಕಿಬಿಡಬಹುದು, ಆದರೆ ಬೆಂಗಳೂರಿನಲ್ಲಿ ಅಡ್ರೆಸ್ ಹುಡುಕುವುದು ಬಲು ತಿಪ್ಪಲ. ಇಂತಿಪ್ಪ ಬೆಂಗಳೂರೆಂಬೋ ಬೆಂಗಳೂರಿಗೆ ಬಂದ ಹೊಸತರಲ್ಲಿ ಯಾರ ಪರಿಸ್ಥಿತಿಯೇ ಆಗಲಿ, ಜಾತ್ರೆಯಲ್ಲಿ ತಪ್ಪಿಸಿಕೊಂಡ ಮಗುವಿನಂತಾಗಿರುತ್ತದೆ.
ಮೊದಲ ಬಾರಿಗೆ ಇಂಡಿಯನ್ ಎಕ್ಸಪ್ರೆಸ್ ಬಿಲ್ಡಿಂಗ್ ಹುಡುಕುತ್ತಾ ಹೊರಟಾಗ(ಕನ್ನಡಪ್ರಭ ಕಚೇರಿ ಇರುವುದು ಇಲ್ಲಿಯೇ) ನನ್ನ ಪರಿಸ್ಥಿತಿಯೂ ಹೀಗೆಯೇ ಆಗಿತ್ತು. ಅದೇನಾಯಿತು ಅಂತಂದ್ರೆಗಿನಾ...
"ಸರ್ ಇಂಡಿಯನ್ ಎಕ್ಸ್‌ಪ್ರೆಸ್ಸಿಗೆ ಹೋಗ್ಬೇಕಾಗಿತ್ತು..." ಎಂದು ಸಹ ಪಾದಾಚಾರಿಯೊಬ್ಬನನ್ನು ಕೇಳಲಾಗಿ, ಅವನು ತಾನೂ ಅದೇ ದಾರಿಯಲ್ಲಿ ಹೊರಟಿದ್ದೇನೆಂದು ಹೇಳಿ ಜೊತೆಗೆ ಕರೆದೊಯ್ದ..
"ನೀವೇನು ಮಾಡ್ಕೊಂಡಿದೀರಾ, ಯಾವೂರು?" ಎಂಬಿತ್ಯಾದಿ ಅರ್ಥಹೀನ ಪ್ರಶ್ನೆಗಳ ವಿನಿಮಯವೂ ನಡೆಯಿತು. ಹೀಗೆಯೇ ಬೋರು ಮಾತುಕಥೆಯಲ್ಲಿ ದಾರಿಸವೆಸಿ ಕೊನೆಗೆ ನಾವು ಬಂದು ನಿಂತದ್ದು ರೈಲ್ವೆ ಸ್ಟೇಷನ್ನಿನ ಎದುರು. ಆತ ಸ್ಟೇಷನ್ ಕಡೆ ಕೈ ತೋರಿಸಿ ಮುನ್ನಡೆಯುತ್ತಾ ಹೇಳಿದ: "ರಿಸರ್ವೇಷನ್ ಅಲ್ಲಿ ಮಾಡ್ತಾರೆ, ಜನರಲ್ ಟಿಕೆಟ್‌ಗೆ ಆ ಕಡೆಗೆ ಹೋಗಿ. ಯಾವ ಎಕ್ಸ್‌ಪ್ರೆಸ್ ಅಂದ್ರಲ್ಲಾ?!"
ನನ್ನ ಉತ್ತರಕ್ಕೂ ಕಾಯದೇ ದಿಕ್ಸೂಚಕ ಹೊರಟೇಬಿಟ್ಟ.
ಪೆಚ್ಚಾಗಿ ನಿಂತು ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯವನಿಗೆ ಕೇಳಿದೆ. "ಸರ್ ಇಂಡಿಯನ್ ಎಕ್ಸಪ್ರೆಸ್ಸು..."
ಆ ಅಂಗಡಿಯವ ಕನ್ನಡಕ ಮೂಗಿಗೇರಿಸಿಕೊಂಡು ಅಂದ: "ಇಂಡಿಯನ್ ಎಕ್ಸಪ್ರೆಸ್ ಖಾಲಿ ಸರ್, ಟೈಮ್ಸ್ ಆಫ್ ಇಂಡಿಯಾ ಇದೆ....ಕೊಡ್ಲಾ?!"


  - ರಾಘವೇಂದ್ರ ಆಚಾರ್ಯ
raghu.bioastra@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.