ಮನಗೆಲ್ಲುವ ಶೀರ್ಷಿಕೆಗಳು
ವಿಚಾರ ತೋರಣ (14.06.14) ದಲ್ಲಿ ಫಣಿ ರಾಮಚಂದ್ರ ಅವರು ನಮ್ಮ ಕುಖ್ಯಾತ ಬುದ್ಧಿಜೀವಿಗಳ ಪೆಂಗಾಟಗಳನ್ನು ಸ್ವಾರಸ್ಯಕರವಾಗಿ ಬರೆದಿದ್ದಾರೆ. 'ಯಾವುದೋ ಒಂದು ಕಲ್ಲಿನಲ್ಲಿ ದೇವರಿದ್ದಾನೆಂದು ನಂಬಿ, ಅದನ್ನು ಪೂಜಿಸಿ, ಸ್ವನಿಯಂತ್ರಣಕ್ಕೊಳಪಡಿಸಿಕೊಳ್ಳುವ, ಮುಂದೆ ಒಳ್ಳೆಯ ದಿನಗಳು ಬರಬಹುದೆಂಬ ನಂಬಿಕೆಯಲ್ಲಿ ಬದುಕುವ ಒಂದು ಉತ್ತಮ ವ್ಯವಸ್ಥೆಗೆ ಕೊಳ್ಳಿ ಇಡುವುದರಿಂದ ಈ ಸ್ವಯಂಘೋಷಿತ ಬುದ್ಧಿಜೀವಿಗಳಿಗೆ ಅದೇನು ಲಾಭವಿದೆಯೋ' ಎಂದು ವಿಷಾದಿಸುತ್ತಾರೆ ಲೇಖಕರು. ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಗುರುಗಳು 'ಭಾರತವನ್ನು ಒಗ್ಗೂಡಿಸುವ ಶಕ್ತಿ ಯಾವುದು' ಲೇಖನದಲ್ಲಿ (14.6.14) 'ಬುಜೀ'ಗಳನ್ನು ಎಚ್ಚರಿಸಿರುವುದು ಸ್ವಾಗತಾರ್ಹ.
-ಹಾಡ್ಯ ಬ. ಜಯಾನಂದ, ಮೈಸೂರು
ದೂ. 0821-2333 278
ಜೂನ್ 14ರ ತಮ್ಮ ಅಂಕಣದಲ್ಲಿ ಫಣಿರಾಮಚಂದ್ರರು- 'ಅನಂತಮೂರ್ತಿಯವರು ದೇವತಾಮೂರ್ತಿಯ ಮೇಲೆ ವಿಸರ್ಜನೆ ಮಾಡಿದ್ದು, ಅದರಿಂದ ಅವರಿಗೇನು ಕೇಡಾಗದಿದ್ದದ್ದು ಅದನ್ನು ಅವರು ಪುಸ್ತಕದಲ್ಲಿ ದಾಖಲಿಸಿದ್ದು' ಎಂದು ಬರೆಯುತ್ತಾರೆ. ಇವರು ಅನಂತಮೂರ್ತಿಯವರನ್ನು ಟೀಕಿಸುವ ಭರದಲ್ಲಿ ಸಾಕ್ಷಿಯನ್ನು 'ಪುಸ್ತಕವನ್ನು' ಗಮನಿಸದೆ ಬರೆದಂತ ಬರಹ ಇದಾಗಿದೆ. ಅನಂತಮೂರ್ತಿಯವರ ವಾಕ್ಯ ಪುಸ್ತಕದಲ್ಲಿರುವುದು ಹೀಗೆ ಗಮನಿಸಿ- 'ಮರಗಳ ಕೆಳಗಿದ್ದ ದೆವ್ವಗಳ ಕಲ್ಲುಗಳ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿದ್ದಿದೆ' ಎಂದೇ ವಿನಹ ಯಾವುದೇ ಧರ್ಮದ ದೇವರ ಮೂರ್ತಿಯ ಮೇಲೆ ಅಥವಾ ವಿಗ್ರಹದ ಮೇಲೆ ಎಂದಲ್ಲ ಎಂದು ಗಮನಿಸಬೇಕಾಗಿದ್ದು ಅತ್ಯವಶ್ಯಕ. ಒಬ್ಬ ವ್ಯಕ್ತಿಯನ್ನು ಟಾರ್ಗೆಟ್ ಮಾಡಿ ಅವರ ತೇಜೋವಧೆ ಮಾಡಿದ್ದು ಸರಿಯೇ?
-ವಿಶ್ವನಾಥ ಬಿ.ಎಮ್.
vishwanathvishu952@gmail.com
ಜೂನ್ 18ರ ಕ್ರೀಡಾಪುಟದ ಕ್ರಿಕೆಟ್ ವರದಿಯ ಶೀರ್ಷಿಕೆ 'ಬಿದ್ದ ಮಳೆ ಒದ್ದೆ ಬಾಂಗ್ಲಾ ಗೆದ್ದ ಭಾರತ' ಓದಿದೆ. ಇಂಥ ಶೀರ್ಷಿಕೆ ನೀಡಿದರೆ ಮತ್ತೆ ವಿವರಣೆಯ ಅಗತ್ಯವೇ ಇರುವುದಿಲ್ಲ. ಅಷ್ಟೊಂದು ಸೂಕ್ಷ್ಮವಾಗಿ ಪ್ರಾಸಬದ್ಧವಾಗಿ ಶೀರ್ಷಿಕೆ ನೀಡಿದ್ದೀರಿ. ಇಂಥ ಶೀರ್ಷಿಕೆಗಳು, ಮೋಡಿ ಮಾಡುವ ಶಬ್ದಗಳು 'ಕನ್ನಡಪ್ರಭ'ದಲ್ಲಿ ಮಾತ್ರ ಲಭ್ಯ.
-ಮ.ರಾ. ಹೆಗಡೆ, ಸಂಪ
94 49170212
'ಪದ ಪದರ' ಬರೆಯುವ ವಿಶ್ವನಾಥ ಸುಂಕನಾಳ ಅವರಿಗೆ ಅಭಿನಂದನೆಗಳು. ಸಾವಿರ ಪದಗಳ ಸರದಾರರಾಗಿದ್ದಕ್ಕಾಗಿ. 'ಸ್ತ್ರೀ' ಪದದ ಬಗ್ಗೆ ಅವರು ಬರೆದ ಒಂದು ಪದರಕ್ಕೆ ನಾನು ಆಕ್ಷೇಪಿಸಿದ್ದೆ. ನಂತರ ನೀವು ಸಮಜಾಯಿಷಿ ನೀಡಿದ್ದೀರಿ. ಸಾವಿರ ಪದವಾಗಿ ಬಂದ 'ಜನನಿ'ಯ ಎಲ್ಲಾ ಪದರಗಳು ಸುಂದರವಾಗಿದ್ದವು. ಸ್ತ್ರೀ ಬಗ್ಗೆ ಆಕ್ಷೇಪಿಸುವ ಹಾಗೆ ಬರೆಯಬಹುದೇನೋ. ಆದರೆ ಜನಿನಿಯ ಬಗ್ಗೆ ಹಾಗೆ ಬರೆಯಲು ಸಾಧ್ಯವೇ ಇಲ್ಲವೇನೋ?! ಟಿವಿಯನ್ನು ನೋಡದ ನಾನು ಅಂದು ನನ್ನ ಪತಿಗೆ ಅರ್ನಬ್ ಗೋಸ್ವಾಮಿ ಹಾಗೂ ಬ (ಖು)ರ್ಖಾ ದತ್ರನ್ನು ಒಮ್ಮೆ ನೋಡಬೇಕು ತೋರಿಸಿ ಅಂದಿದ್ದೆ. ಮಾರನೆ ದಿನವೆ ಪದಪದರದಲ್ಲಿ ಅರ್ನಬ್ ಗೋಸ್ವಾಮಿಯವರ ಬಗ್ಗೆ ಬರೆದದ್ದು ಓದಿ ಬಿದ್ದು ಬಿದ್ದು ನಕ್ಕೆವು.
-ಗೀತಾ ಎಸ್.ಕೆ., ಹಾಸನ
ಜೂನ್ 16ರ ಪತ್ರಿಕೆಯ ಬೈಟೂ ಕಾಫಿಯನ್ನು ಸವಿಯುತ್ತಿದ್ದಾಗ ರೇಶ್ಮಾ ರಾವ್ ಸೊನ್ಲೆ ಇವರ 'ನೀ ತೊರೆದ ಗಳಿಗೆಯಲ್ಲಿ...' ಲೇಖನ ಓದಿದೆ. ಸಂಸಾರ ಸಾಗರದಿ ಯಶಸ್ವಿಯಾಗಿ ಈಜಿ ದಡ ತಲುಪುವ ಇಳಿ ವಯಸ್ಸಿನ ಸಮಯದಲ್ಲಿ ಅರ್ಧಾಂಗಿಯನ್ನು ಕಳೆದುಕೊಂಡು ಪರಿತಪಿಸುವ ವಿದುರನ ಬಾಳಿನ ಅನಿಸಿಕೆಗಳನ್ನು ಅಕ್ಷರಗಳಲ್ಲಿ ಯಶಸ್ವಿಯಾಗಿ ಭಟ್ಟಿ ಇಳಿಸಿ, ಸಹೃದಯ ಓದುಗರ ಸುಪ್ತ ಮನಸ್ಸಿನಲ್ಲಿ ಅಡಗಿರುವ ಭಾವನೆಗಳನ್ನು ಸುಂದರವಾಗಿ ಬಡಿದೇಳಿಸುವಲ್ಲಿ ಈ ಲೇಖನ ಗೆದ್ದಿದೆ.
-ಡಾ. ಎಂ.ಎಸ್. ಸುಬ್ಬಣ್ಣ, ಮೇಗರವಳ್ಳಿ
ಮೊ. 9844 214521
ಕ.ಪ್ರ.ದಲ್ಲಿ ಮೂಡಿ ಬರುವ ಓದುಗರ ಪತ್ರಗಳು ಮತ್ತು ಪೌರ ಸಮಸ್ಯೆಯಲ್ಲಿ ಬರುವ ನಿವಾಸಿಗಳ ಮತ್ತು ಬಡಾವಣೆಯ ಕುಂದು ಕೊರತೆಗಳು ಸಂಬಂಧಿಸಿದವರಿಗೆ ಮುಟ್ಟುತ್ತದೆ ಎಂಬುದಕ್ಕೆ ನನ್ನ ಪತ್ರವೇ ಸಾಕ್ಷಿ.
ದಿ.9ರ ಸಂಚಿಕೆಯಲ್ಲಿ 'ಪೌರ ಸಮಸ್ಯೆ'ಯ ಅಡಿಯಲ್ಲಿ 'ಮೂಲ ಸೌಕರ್ಯವಿಲ್ಲದ ಮಕ್ಕಳ ಕೂಟ' ಎಂಬ ಪತ್ರ ಬರೆದಿದ್ದೆ. ಇದನ್ನು ಓದಿ ಬಡಾವಣೆಯ ನಗರಸಭಾ ಸದಸ್ಯರು ಅಂದೇ ದೂರವಾಣಿಯ ಮೂಲಕ ಸಂಪರ್ಕಿಸಿ ಎರಡು-ಮೂರು ದಿನಗಳಲ್ಲಿ ದುರಸ್ತಿಗೊಳಿಸುವುದಾಗಿ ತಿಳಿಸಿದ್ದು ಸಂತಸದ ಸಂಗತಿಯಲ್ಲವೇ?
-ಎನ್.ಪಿ. ರಾಘವೇಂದ್ರರಾವ್
ಮೊ. 9448 223204
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

