

ನನ್ನ 14 ವರ್ಷಗಳ ಒಡನಾಡಿ, ಸಹೋದ್ಯೋಗಿ ಮಿತ್ರ ಕೆ.ಎಸ್. ಜಗನ್ನಾಥ್ ಅವರನ್ನು 'ಕನ್ನಡ ಪ್ರಭ'ದಿಂದ ಬೀಳ್ಕೊಡಬೇಕಾಗಿದೆ ಎಂಬುದು ತ್ರಾಸದ ವಿಷಯವೇ ಆದರೂ, ಅವರು 'ಸಂಯುಕ್ತ ಕರ್ನಾಟಕ'ದಂತಹ ಐತಿಹಾಸಿಕ ಹಿನ್ನೆಲೆಯ ಪತ್ರಿಕೆಗೆ ಸಂಪಾದಕರಾಗಿ ಹೋಗುತ್ತಿದ್ದಾರೆ ಎಂಬುದು ಹರ್ಷ, ಹೆಮ್ಮೆ...
ಸದಾ ಬ್ರೇಕಿಂಗ್ ನ್ಯೂಸ್ ಹಾಗೂ ಬಿಸಿ ಸುದ್ದಿಗಳನ್ನು ಉಣಬಡಿಸುವ ಮಾಧ್ಯಮ ಜಗತ್ತಿಗೇ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್ ಒಂದನ್ನು ಓದುಗರಿಗೆ ಇಲ್ಲಿ ನೀಡುತ್ತಿದ್ದೇನೆ. ಈ ಸುದ್ದಿಯನ್ನು ಹಂಚಿಕೊಳ್ಳುವುದು ನನ್ನ ಪಾಲಿಗೆ ತುಸು ಕಷ್ಟದ ಹಾಗೂ ಬಹಳ ಸಂತೋಷದ ಸಂಗತಿ ಎಂದರೆ ನಿಮಗೆ ವಿಚಿತ್ರವೆನಿಸಬಹುದು!
ನನ್ನ ಹದಿನಾಲ್ಕು ವರ್ಷಗಳ ಒಡನಾಡಿ, ಸಹೋದ್ಯೋಗಿ ಮಿತ್ರ ಕೆ. ಎಸ್. ಜಗನ್ನಾಥ್ ಅವರನ್ನು 'ಕನ್ನಡ ಪ್ರಭ'ದಿಂದ ಬೀಳ್ಕೊಡಬೇಕಾಗಿದೆ ಎಂಬುದು ಬಹಳ ತ್ರಾಸದ ವಿಷಯವೇ ಆದರೂ, ಅವರು 'ಸಂಯುಕ್ತ ಕರ್ನಾಟಕ'ದಂತಹ ಐತಿಹಾಸಿಕ ಹಿನ್ನೆಲೆಯ ಪತ್ರಿಕೆಗೆ ಸಂಪಾದಕರಾಗಿ ಹೋಗುತ್ತಿದ್ದಾರೆ ಎಂದು ತಿಳಿಸುವುದಕ್ಕೆ ಹರ್ಷ, ಹೆಮ್ಮೆ, ಗರ್ವ ಎಲ್ಲವೂ ಉಮ್ಮಳಿಸಿವೆ.
ದೇಶದ ಸ್ವಾತಂತ್ರ್ಯ ಹೋರಾಟದ ದಿನಗಳಿಂದ ಆರಂಭಿಸಿ 'ಸಂಯುಕ್ತ ಕರ್ನಾಟಕ'ಕ್ಕೆ ಪತ್ರಿಕೋದ್ಯಮದಲ್ಲೊಂದು ವಿಶಿಷ್ಟ ಸ್ಥಾನವಿದೆ. ಈ ಪತ್ರಿಕೆಯ ಹೆಸರು ಕನ್ನಡ ನಾಡಿನ ಮನೆ- ಮನಗಳಲ್ಲಿ ಛಾಪೊತ್ತಿರುವಂಥದ್ದು. ಮೊಹರೆ ಹನುಮಂತರಾಯರು, ಶಾಮರಾಯರೇ ಮೊದಲಾದ ಪತ್ರಿಕೋದ್ಯಮ ದಿಗ್ಗಜರನ್ನು ಸಂಪಾದಕರನ್ನಾಗಿ ಹೊಂದಿದ್ದ ಕೀರ್ತಿ ಸಂಯುಕ್ತ ಕರ್ನಾಟಕದ್ದು. ನಾನೂ ಸೇರಿದಂತೆ ಹಲವು ಪತ್ರಕರ್ತರು ನಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದು ಸಂಯುಕ್ತ ಕರ್ನಾಟಕದಿಂದಲೇ. ಅಂಥ ಭವ್ಯ ಪತ್ರಿಕೆಗೆ ಕೆ. ಎಸ್. ಜಗನ್ನಾಥ್ ಸಂಪಾದಕರಾಗಿ ಹೋಗುತ್ತಿದ್ದಾರೆ. ಬಹಳ ಮುಖ್ಯವಾಗಿ ಜಗನ್ನಾಥರ ವೃತ್ತಿಜೀವನ ರೂಪುಗೊಂಡಿದ್ದೂ ಆ ಪತ್ರಿಕೆಯಿಂದಲೇ. ತಾನು ವೃತ್ತಿ ಪ್ರಾರಂಭಿಸಿದ ಪತ್ರಿಕೆಗೆ ಸಂಪಾದಕನಾಗಿ ಹೋಗುವ ಅಭಿಮಾನದ ಕ್ಷಣ ಎಷ್ಟು ಪತ್ರಕರ್ತರಿಗೆ ಸಿಗುತ್ತದೆ ಹೇಳಿ? ಹೀಗಾಗಿ ಜಗನ್ನಾಥ್ ಬದುಕಿನಲ್ಲಿ ಇದು ಅತ್ಯಂತ ಸಾರ್ಥಕ್ಯದ ಗಳಿಗೆ ಎಂದೇ ನನ್ನ ಅಭಿಪ್ರಾಯ.
ಸುದ್ದಿಮನೆ ಎಂದರೆ ಅದೊಂದು ನಿತ್ಯವೂ ಸದ್ದು ಮಾಡುವ ಜಗತ್ತು. ಸುದ್ದಿವಾಹಿನಿಗಳು ಬಂದ ನಂತರವಂತೂ ಗಟ್ಟಿ ಸದ್ದು ಮಾಡುವವನೇ ಗಟ್ಟಿಗ ಎಂಬ ವಾತಾವರಣ ನೆಲೆಯಾಗಿದೆ. ಇಂಥ ಸುದ್ದಿಜೀವನದಲ್ಲಿ ಸಾಮಾನ್ಯ ಓದುಗರಿಗೆ ಪರಿಚಿತರಾಗುವವರು ವಾಹಿನಿಗಳ ಸುದ್ದಿ ನಿರೂಪಕರು, ವಿಶ್ಲೇಷಕರು ಹಾಗೂ ಪತ್ರಿಕೆಗಳಲ್ಲಿ ಬೈಲೈನ್ ಪಡೆಯುವ ವರದಿಗಾರರು ಮತ್ತು ಅಂಕಣಕಾರರು. ಇವರೆಲ್ಲರ ಯೋಗದಾನ ಅತಿ ಮುಖ್ಯವಾದದ್ದೇ. ಆದರೆ ಹೀಗೆ ಪ್ರಸಿದ್ಧಿಗೆ ಬರುವವರ ಹಿಂದೆ, ಈ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡುವ ಸೃಜನಶೀಲ ಹಾಗೂ ಶ್ರಮನಿರತರ ಸಣ್ಣ ಪಡೆಯೊಂದಿರುತ್ತದೆ. ಅವರು ಯಾರೋ ಬರೆದ ಸುದ್ದಿಗೆ ಅನನ್ಯವಾದ ಆ್ಯಂಗಲ್ ಕೊಡುತ್ತಾರೆ. ಸುದ್ದಿ ಜನಿಸುವುದಕ್ಕೂ ಮೊದಲು ಅದು ಹೀಗೆಯೇ ಹೊರಬರಬೇಕು ಎಂಬ ಸ್ಪಷ್ಟ ರೂಪರೇಷೆಗಳನ್ನು ನೇಪಥ್ಯದಲ್ಲಿದ್ದುಕೊಂಡೇ ನಿಭಾಯಿಸಿರುತ್ತಾರೆ. ಹತ್ತೆಂಟು ಕಿರಿಯರನ್ನು ತಿದ್ದಿ ಮುನ್ನಡೆಸಿರುತ್ತಾರೆ. ಸಂಪಾದಕನಿಗೆ ತಲೆಬೇನೆ ತರಬಹುದಾದ ಎಷ್ಟೋ ಪರಿಸ್ಥಿತಿಗಳನ್ನು ಅವರ ಮೇಜಿನವರೆಗೆ ತೆಗೆದುಕೊಂಡು ಹೋಗದೇ ತಾವೇ ಪರಿಹರಿಸಿರುತ್ತಾರೆ. ಹೀಗೆ ಪ್ರಸಿದ್ಧಿಯ ಹಿಂದೆ ಹೆಚ್ಚಿನವರಿಗೆ ಕಾಣಿಸದ ಸಿದ್ಧಿಯೊಂದಿರುತ್ತದಲ್ಲ, ಆ ಶಕ್ತಿಯೇ ಯಾವುದೇ ಸುದ್ದಿಮನೆಯನ್ನು ಪರಿಣಾಮಕಾರಿಯಾಗಿ ಮುನ್ನುಗ್ಗಿಸುವ ಇಂಧನ. ಕೆ. ಎಸ್. ಜಗನ್ನಾಥ್ ಇಂಥ ಸಿದ್ಧಶಕ್ತಿಗೊಂದು ದೊಡ್ಡ ಮಾದರಿ. ಅವರು ಹಿನ್ನೆಲೆಯಲ್ಲಿದ್ದುಕೊಂಡೇ ಎಲ್ಲವನ್ನೂ ನಿಭಾಯಿಸಿದವರು. ಘಟನೆಯೊಂದನ್ನು ನೆನಪಿಸಿಕೊಂಡರೆ ನಿಮಗೆ ಜಗನ್ನಾಥ್ ಅವರ ಕರ್ತವ್ಯಪರತೆಯನ್ನು ಮನದಟ್ಟು ಮಾಡಿಸಿದಂತಾಗುತ್ತದೆ.
ಅದು ಅವರ ತಂದೆಯವರು ತೀರಿಕೊಂಡ ಸಂದರ್ಭ. ಬೆಳಗ್ಗೆ ನಾನೂ ಅಂತಿಮ ಕಾರ್ಯಕ್ಕೆ ಸಾಕ್ಷಿಯಾಗಲು ತೆರಳಿದ್ದೆ. ಸಂತಾಪ ಸೂಚಿಸಿ, ವಿಧಿಗಳೆಲ್ಲ ಮುಗಿದ ಮೇಲೆ ನಾನು ಮನೆಗೆ ಬಂದೆ. ಪುನಃ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ 'ವಿಜಯ ಕರ್ನಾಟಕ' ಪ್ರವೇಶಿಸಿದಾಗ ಅಚ್ಚರಿ ಕಾಯ್ದಿತ್ತು. ಜಗನ್ನಾಥ್ ಅದಾಗಲೇ ಕಚೇರಿಗೆ ಬಂದು ಸುದ್ದಿ ಪರಿಷ್ಕರಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು! ಇವತ್ತಿಗೂ ಅಷ್ಟೆ. ಕಚೇರಿಯಿಂದ ತಡರಾತ್ರಿ ನಿರ್ಗಮಿಸುವ ವ್ಯಕ್ತಿ ಅವರೇ. ಪ್ರಾರಂಭದಲ್ಲಿ ಕ್ರೀಡಾ ವಿಭಾಗದ ಹೊಣೆ ಹೊತ್ತಿದ್ದ ಅವರು ನಂತರದಲ್ಲಿ ಸುದ್ದಿ ಸಂಪಾದನೆಯ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತ ಇದೀಗ ಕನ್ನಡ ಪ್ರಭದ ಸಹ ಸಂಪಾದಕರಾಗಿರುವವರೆಗಿನ ಅವರ ಪ್ರಯಾಣ ಬಹಳ ಶ್ರದ್ಧೆ ಮತ್ತು ಶಿಸ್ತಿನದ್ದು. ವಾಸ್ತವದಲ್ಲಿ ಅವರು ಯಾವೆಲ್ಲ ಹುದ್ದೆಗಳನ್ನು ದಾಟಿ ಬಂದಿದ್ದಾರೆ ಎಂಬುದು ಅವರ ಮುಂದಾಳತ್ವದಲ್ಲಿ ಕೆಲಸ ಮಾಡಿದ ಯುವ ಪತ್ರಕರ್ತರಿಗೆ ಗೊತ್ತಾಗುವ ಸಂದರ್ಭವೇ ಬಂದಿರಲಿಕ್ಕಿಲ್ಲ. ಏಕೆಂದರೆ ಹುದ್ದೆ ಯಾವುದಾದರೂ ಕಚೇರಿಯ ಪ್ರತಿಯೊಬ್ಬನನ್ನೂ ಅದೇ ಸಲಿಗೆ, ತಮಾಷೆಯಲ್ಲಿ ಮಾತನಾಡಿಸುವ ಅವರ ವ್ಯಕ್ತಿತ್ವ ಎಲ್ಲರೊಳಗೆ ಒಬ್ಬರನ್ನಾಗಿ ಬೆರೆಸಿಬಿಟ್ಟಿದೆ.
ಈ ಎಲ್ಲ ಹಿನ್ನೆಲೆಯಲ್ಲಿ, ಹೊಸ ಕಾಲಘಟ್ಟಕ್ಕೆ ಹೊಂದಿಕೊಳ್ಳಬೇಕಾದ ಹವಣಿಕೆಯಲ್ಲಿರುವ 'ಸಂಯುಕ್ತ ಕರ್ನಾಟಕ'ಕ್ಕೆ ಜಗನ್ನಾಥ್ ತುಂಬ ಮುಖ್ಯರೆನಿಸುತ್ತಾರೆ. ಜಗನ್ನಾಥ್ ನಮ್ಮ ಸಂಸ್ಥೆ ತೊರೆಯುತ್ತಿರುವುದು ಅವರ ಜತೆ ಲಾಗಾಯ್ತಿನಿಂದ ಕೆಲಸ ಮಾಡಿಕೊಂಡು ಬಂದವರಿಗೆ ಮಾತ್ರವಲ್ಲದೇ, ನಮ್ಮ ಸುದ್ದಿಮನೆಯ ಇತ್ತೀಚಿನ ತಲೆಮಾರಿಗೂ 'ಮಿಸ್ ಯೂ' ಎಂಬ ಆರ್ದ್ರಭಾವ ಹುಟ್ಟುಹಾಕಿದೆ. ತಮ್ಮ ಹೊಸ ಕರ್ತವ್ಯದ ಛಾಪಿನಲ್ಲಿ ಅವರು ನಮ್ಮೆಲ್ಲರ ಈ ಕಳೆದುಕೊಳ್ಳುತ್ತಿರುವ ಭಾವವನ್ನು ಹೋಗಲಾಡಿಸುವಂತಾಗಲಿ ಎಂಬ ಹಾರೈಕೆ ನನ್ನದು.
-----
ಸಿಂಹನ ಸಾವು ಬದುಕಿನ ನಶ್ವರತೆಗೆ ಹೊಡೆದ ಮತ್ತೊಂದು ಮೊಳೆ!
'ಸಿ.ಆರ್. ಸಿಂಹ ದೇಹಸ್ಥಿತಿ ಗಂಭೀರ' ಎಂಬ ಸುದ್ದಿಯನ್ನು ನಾವು ಮುಖಪುಟದಲ್ಲಿಯೇ ಪ್ರಕಟಿಸಿದ್ದೆವು. ಯಾವ ಕ್ಷಣದಲ್ಲಾದರೂ ನಿಧನವಾರ್ತೆ ಬರಬಹುದೆಂದು ಅವರ ಆತ್ಮೀಯರು, ಸಮೀಪವರ್ತಿಗಳು ತಿಳಿಸಿದ್ದರು. ಮೊನ್ನೆ ಶುಕ್ರವಾರ (ಫೆ.28) ಮಧ್ಯಾಹ್ನ ಮೂರೂವರೆ ಗಂಟೆ ಹೊತ್ತಿಗೆ 'ಸಿಂಹ ನಿಧನರಾದರಂತೆ' ಎಂದು ನಮ್ಮ ವರದಿಗಾರರು ತಿಳಿಸಿದರು. ಅಷ್ಟೊತ್ತಿಗೆ ಟಿವಿಯಲ್ಲಿ ಈ ಸುದ್ದಿ ಬಿತ್ತರವಾಗಲಾರಂಭಿಸಿತು. ಆ ಕ್ಷಣ ಕರುಳು ಕಿವುಚಿದಂತಾಯಿತು. ಭಾವಕೋಶಗಳು ಮಿಡಿದುಕೊಂಡವು.
ನಮ್ಮ ಸಂಪಾದಕೀಯ ಹಿರಿಯ ಸಹೋದ್ಯೋಗಿಗಳನ್ನು ಕರೆದು ಸಿಂಹ ನೆನಪಿನಲ್ಲಿ ಒಂದು ವಿಶೇಷ ಪುಟ ಮಾಡುವುದೆಂದೂ, ಗಣ್ಯರಿಂದ ಲೇಖನ, ಅನಿಸಿಕೆ, ಶೋಕ ಸಂದೇಶ ತರಿಸಬೇಕೆಂದೂ ನಿರ್ಧರಿಸಿದೆವು. ನಮ್ಮ ತ್ಯಾಗರಾಜ್, ರಾಧಾಕೃಷ್ಣ ಭಡ್ತಿ ಹಾಗೂ ಪ್ರತಾಪಸಿಂಹ ಬಂದು 'ಸಾರ್, ನಿಮ್ಮದು ಸಿಂಹ ಅವರದು ಎರಡು ದಶಕಗಳ ಗೆಳೆತನ. ನಿಮಗೆ ಅವರೊಂದಿಗೆ ಆತ್ಮೀಯತೆ, ಸಲುಗೆಯಿತ್ತು. ನೀವು ಮುಖಪುಟದಲ್ಲಿ ಅವರ ಬಗ್ಗೆ ಬರೆಯಬೇಕು' ಎಂದರು. 'ನನಗೆ ಅದಕ್ಕಿಂತ ಮುಖ್ಯವಾಗಿ ಅವರ ಅಂತಿಮ ದರ್ಶನ ಪಡೆಯಬೇಕಿದೆ. ಅವರ ಬಗ್ಗೆ ಯಾವಾಗ ಬೇಕಾದರೂ ಬರೆಯಬಹುದು' ಎಂದೆ. ಆದರೆ ನನ್ನ ಸಹೋದ್ಯೋಗಿ ಮಿತ್ರರು ಅವರ ಅಂತಿಮ ದರ್ಶನ ಪಡೆದು ಬಂದು ಬರೆಯಿರಿ ಎಂದರು. ನಾನು ಆಯಿತು ಎಂದೆ.
ಆದರೆ ಅದಾದ ನಂತರ ಎಂದೂ ಬರದಿದ್ದ, ಹಲವಾರು ವರ್ಷಗಳಿಂದ ಭೇಟಿ ಮಾಡಿರದ, ಸುದ್ದಿಗಾಗಿ ತಲೆ ತಿನ್ನುವ ಹತ್ತಾರು ಸ್ನೇಹಿತರು ಸಾಲು ಹಿಡಿದು ಬಂದರು. ಜತೆಗೆ ರಾಜ್ಯದ ಮೂರು ಜಿಲ್ಲೆಗಳಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಕರೆದಿದ್ದೆ. ಈ ಮಧ್ಯೆ ಸಾಯಂಕಾಲದ ಎಡಿಟೋರಿಯಲ್ ಮೀಟಿಂಗ್, ಫೋನ್, ಎಸ್ಸೆಮ್ಮೆಸ್, ಟ್ವಿಟರ್... ರಾತ್ರಿ ಎಂಟೂವರೆಯಾದರೂ ಆಫೀಸಿನಿಂದ ಕದಲಲು ಆಗಲಿಲ್ಲ. ಅಷ್ಟೊತ್ತಿಗೆ ಡೆಡ್‌ಲೈನ್ ಸಮೀಪಿಸುತ್ತಿತ್ತು.
'ರಾತ್ರಿ ಎಂಟೂವರೆ ಹೊತ್ತಿಗೆ ನನ್ನ ಸೆಕ್ರೆಟರಿ ಬಂದು ಆನಂದ ಸಂಕೇಶ್ವರರ ಪಾರ್ಟಿಯಿದೆ' ಎಂದು ನೆನಪಿಸಿದರು. ಸಿಂಹ ಅವರ ಅಂತ್ಯಕ್ರಿಯೆ ಮರುದಿನ ಶನಿವಾರ ಎಂಬುದು ತಿಳಿಯಿತು.
'ಸಾರ್, ಸಿಂಹ ಬಗ್ಗೆ ನೀವು ಬರೆಯಬಹುದು ಎಂದು ಪುಟ ಖಾಲಿ ಇಟ್ಟುಕೊಂಡಿದ್ದೆವು' ಎಂದರು ಭಡ್ತಿ. 'ಈ ಅವಸರದಲ್ಲಿ ಏನು ಬರೆಯೋದು? ಹರಿಬಿರಿಯಲ್ಲಿ ಬರೆದರೆ ಸಿಂಹಗೆ ನ್ಯಾಯ ಕೊಟ್ಟಂತಾಗಲಿಕ್ಕಿಲ್ಲ. ಅಲ್ಲದೇ ಸಿಂಹನ ಬಗ್ಗೆ ಬರೆಯಲು ಹಲವಾರು ವಿಷಯಗಳಿವೆ. ನಮ್ಮ 'ಖುಷಿ ಮ್ಯಾಗಜಿನ್‌ನಲ್ಲೋ', 'ಬೈಟು ಕಾಫಿ'ಯಲ್ಲೋ ವಿವರವಾಗಿ ಬರೆಯುತ್ತೇನೆ. ಇಂದು ಬರೆಯಲು ಮನಸ್ಸಿಲ್ಲ ಬಿಡಿ' ಎಂದು ಒಂಭತ್ತು ಗಂಟೆಗೆ ಸಂಕೇಶ್ವರರ ಪಾರ್ಟಿಗೆ ಹೋದೆ. ಅಲ್ಲಿ ಕೇವಲ 20-25 ನಿಮಿಷಗಳಷ್ಟೇ ಇದ್ದು, ಸ್ನೇಹಿತರ ಮಗನ
ಬರ್ಥ್‌ಡೇ ಪಾರ್ಟಿಗೂ ಹಾಜರಿ ಹಾಕಿ ಮನೆಗೆ ಬರುವಷ್ಟರಲ್ಲಿ ರಾತ್ರಿ ಹನ್ನೊಂದುವರೆಯಾಗಿತ್ತು. ಊಟ ಮಾಡಿ, ರೀಡಿಂಗ್ ರೂಮಿಗೆ ಹೋದರೆ ಮನಸ್ಸಿನಲ್ಲಿ ಏನೋ ಕಸಿವಿಸಿ. 'ಸಿಂಹನ ಬಗ್ಗೆ ಏನೂ ಬರೆಯಲೇ ಇಲ್ಲವಲ್ಲ. ಗಣ್ಯರು, ಆತ್ಮೀಯರು ನಿಧನರಾದಾಗ ಸಂಪಾದಕನಾಗಿ ನಾಲ್ಕು ಮಾತು ಬರೆಯದಿದ್ದರೆ ಹೇಗೆ?' ಎಂಬ ಭಾವ ಗಾಢವಾಗಿ ಕಾಡಲಾರಂಭಿಸಿತು.
ಖ್ಯಾತ ಪತ್ರಕರ್ತ ಸಂತೋಷಕುಮಾರ ಗುಲ್ವಾಡಿಯವರು ನಿಧನರಾದಾಗಲೂ ಹೀಗೇ ಆಗಿತ್ತು. ಗುಲ್ವಾಡಿ ಅವರು ನಿಧನರಾದ ಸುದ್ದಿ (ಡಿಸೆಂಬರ್ 7, 2010ರಂದು) ಗೊತ್ತಾದಾಗ ರಾತ್ರಿ ಹನ್ನೊಂದುವರೆ. ನಾನು ಆಗ ವಿಜಯ ಕರ್ನಾಟಕದಲ್ಲಿದ್ದೆ. ಮನೆಗೆ ಹೊರಡಲು ಆಫೀಸಿನ ಹೊರಗೆ ಬಂದಿದ್ದೆ. ಅಷ್ಟೊತ್ತಿಗೆ ಈ ಸುದ್ದಿ ಗೊತ್ತಾದಾಗ, ಮರಳಿ ನನ್ನ ರೂಮಿಗೆ ಹೋಗಿ ಗುಲ್ವಾಡಿ ಬಗ್ಗೆ ಬರೆದು ಮನೆಗೆ ಹೋಗಿದ್ದೆ.
ಇಷ್ಟು ಆತ್ಮೀಯನಾಗಿದ್ದ ಸಿಂಹನ ಬಗ್ಗೆ ಏನೂ ಬರೆಯಲೇ ಇಲ್ಲವಲ್ಲ ಎಂದು ಬಹಳ ಫೀಲ್ ಆಗತೊಡಗಿತು. ಮುಖಕ್ಕೆ ನೀರು ಚಿಮುಕಿಸಿಕೊಂಡು, ಬರೆಯಲಾರಂಭಿಸಿದೆ. ಆಫೀಸಿಗೆ ಫೋನ್ ಮಾಡಿ ಪ್ರಿಂಟಿಂಗ್ ಹೋಲ್ಡ್ ಮಾಡುವಂತೆ ಸೂಚಿಸಿದೆ. ರಾತ್ರಿ ಒಂದೂವರೆ ಹೊತ್ತಿಗೆ ನನ್ನ ಕೈಬರಹದಲ್ಲಿ ಐದುಪುಟ ಬರೆದು ಕೊಡ್ತೇನೆ ಅಂದೆ. ಒಂದೊಂದು ಪುಟ ಬರೆದು ಮೇಲ್ ಮಾಡಿದೆ. ಮುಂದಿನ ಪುಟ ಬರೆಯುವಷ್ಟರಲ್ಲಿ ಹಿಂದಿನ ಪುಟ ಕಚೇರಿಯಲ್ಲಿ ಕಂಪೋಸ್ ಆಗಿರುತ್ತಿತ್ತು. ರಾತ್ರಿ ಒಂದೂವರೆಗೆ ಬರೆದು ಮುಗಿಸಿದಾಗಲೇ ಸಮಾಧಾನ.
ಮರುದಿನ ಬೆಳಗ್ಗೆ ಎಂಟಕ್ಕೆ (ಅಂದರೆ ನಿನ್ನೆ ಶನಿವಾರ) ಒಂದೇ ಸಮನೆ ಧುಮ್ಮಿಕ್ಕಿ ಬಂದವು. ಪಾರ್ಥಿವ ಶರೀರದ ಮುಂದೆ ಹೆಚ್ಚು ಹೊತ್ತು ನಿಂತುಕೊಳ್ಳಲಾಗಲಿಲ್ಲ. ಸಿಂಹನ ಸಾವು ಬದುಕಿನ ನಶ್ವರತೆಗೆ ಮತ್ತೊಂದು ಮೊಳೆ ಹೊಡೆಯಿತು.
ಸಿಂಹ ನಾಡನ್ನು ಬಿಟ್ಟು ಕಾಡಿನತ್ತ (ಅನಂತದತ್ತ) ಹೊರಟು ಬಿಟ್ಟಿದ್ದ!
- ವಿಶ್ವೇಶ್ವರ ಭಟ್