ಮುಳುಗುತ್ತಿರುವ ಹಡಗಿನಿಂದ ಇಲಿಗಳು ಓಡುವ ಸಂಬಂಧದಲ್ಲಿ ಎರಡು ಸಿದ್ಧಾಂತಗಳು ಪ್ರಚಲಿತದಲ್ಲಿವೆ. ಅವುಗಳಲ್ಲಿ ಒಂದು, ಮುಂದಾಗುವ ದುರಂತವನ್ನು ಅರಿಯುವ ಒಂದು ದೈವಿಕವಾದ ಇಂದ್ರಿಯಾತೀತವಾದ ಶಕ್ತಿ ಅವುಗಳಲ್ಲಿ ಇದೆ ಎಂಬುದು. ಇನ್ನೊಂದು, ಸ್ವಾಭಾವಿಕವಾಗಿಯೇ ಅವು ಬಿಲ ಕೊರೆಯುವ ಪ್ರಾಣಿಗಳು. ಬಿಲ ಕೊರೆಯುವುದರಲ್ಲಿ ಕುಶಲಿಗಳಾದ ಅವು ತಮ್ಮ ನೆಲೆಗೆ ತಳಕ್ಕೇ ಹೋಗುವುದು. ಹೀಗೆ ತಳಕ್ಕೆ ಇಳಿಯುವ ಅವು ಸೋರಿಕೆಯನ್ನು ಎಲ್ಲರಿಗಿಂತ ಮೊದಲು ಕಂಡು ಸುರಕ್ಷತೆಯನ್ನೂ ಮೊದಲಿಗೆ ಕಂಡುಕೊಳ್ಳಲು ತವಕಿಸುವುದು.
ಹಡಗು ಖಂಡಿತವಾಗಿಯೂ ಮುಳುಗುತ್ತದೆ ಎಂಬುದನ್ನು ಅರಿತು ಅದರಿಂದ ಪಾರಾಗುವ ಇಲಿಗಳ ಹಾಗೆಯೇ, ರಾಜಕಾರಣಿಗಳು ಪಕ್ಷವನ್ನು ತೊರೆಯುತ್ತಿದ್ದಾರೆ ಎಂದರೆ ಆ ಪಕ್ಷವು ಕಷ್ಟದಲ್ಲಿದೆ ಎಂಬುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಪಕ್ಷವು ಮುಳುಗುತ್ತಿದೆ ಎಂಬುದನ್ನು ಅರಿಯುವುದಕ್ಕೆ ಇಂಥ ಯಾವುದೇ ಸಂಕೇತಗಳ ಅಗತ್ಯವಿಲ್ಲ. ಅದೇನೇ ಇರಲಿ, ಅದೊಂದು ಕತೆ ಅಥವಾ ಅದನ್ನು ಕತ್ತೆಬಾಲವೆಂದೇ ಹೇಳಿ, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮಿತ್ರರೆನ್ನಿಸಿಕೊಂಡ ಪಕ್ಷಗಳ ನಾಯಕರು ಕಾಂಗ್ರೆಸ್ಸಿನ ವೈರತ್ವದ ಶಪಥ ತೊಟ್ಟವರೊಂದಿಗೆ ಸಲುಗೆಯ ಸಲ್ಲಾಪ ನಡೆಸುತ್ತಿದ್ದಾರೆ.
ಒಮರ್ ಅಬ್ದುಲ್ಲಾ ಇದಕ್ಕೊಂದು ಉದಾಹರಣೆ. ಅವರದ್ದು ಈ ದೇಶದಲ್ಲಿ ರಾಜಕೀಯವಾಗಿ ಭದ್ರವಾಗಿ ತಳವೂರಿರುವ ಎರಡನೆಯ ವಂಶ. ಅಬ್ದುಲ್ಲಾಗಳು ಕಾಂಗ್ರೆಸ್‌ನೊಂದಿಗೆ ಬಹಳ ದೀರ್ಘಕಾಲದಿಂದ ತಮ್ಮ ಸಂಬಂಧವನ್ನು ಬೆಸೆದುಕೊಂಡವರು. ಒಮರ್ ರಾಹುಲ್ ಗಾಂಧಿಗೆ ತುಂಬಾ ಆಪ್ತರಾದವರು. ಪೈಲಟ್‌ರಂಥ ಜನಪ್ರಿಯ ಕಾಂಗ್ರೆಸ್ ಕುಟುಂಬದೊಂದಿಗೆ ಸಂಬಂಧ ಹೊಂದಿದವರು. ಮದುವೆಯಿಂದಾಗಿ ಈ ಸಂಬಂಧ ಕೂಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಆಡಳಿತಾತ್ಮಕ ಘಟಕಗಳನ್ನು ತೆರೆಯುವುದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದನ್ನು ಪ್ರತಿಭಟಿಸಿ ರಾಜೀನಾಮೆಯನ್ನು ನೀಡುವ ಮತ್ತು ಕಾಂಗ್ರೆಸ್‌ನೊಂದಿಗೆ ಸಂಬಂಧವನ್ನು ಕಡಿದುಕೊಳ್ಳುವ ಬೆದರಿಕೆಯನ್ನು ಹಾಕುತ್ತಿದ್ದಾರೆ. ಈ ಘಟಕಗಳಿಗೆ ಜನರು ವಿರೋಧಿಸುತ್ತಿದ್ದಾರೆ. ಬಿಜೆಪಿಯೂ ಈ ವಿಷಯದಲ್ಲಿ ಆಕ್ರಮಣಕಾರಿಯಾಗಿದೆ. ಕಾಂಗ್ರೆಸ್ ಬೆಂಬಲ ನೀಡಿದರೆ ಆ ಪಕ್ಷದೊಂದಿಗೆ ಗುರುತಿಸಿಕೊಳ್ಳುವುದು ತಮಗೆ ಅನುಕೂಲಕರವಲ್ಲ ಎಂಬುದು ಒಮರ್ ಲೆಕ್ಕಾಚಾರ.
ಶರದ್ ಪವಾರ್ ನರೇಂದ್ರ ಮೋದಿಯವರೊಂದಿಗೆ ಒಂದು ರಹಸ್ಯ ಸಭೆ ನಡೆಸಿದರು ಮತ್ತು ಆ ಸಭೆ ನಡೆದ ವಿಷಯ ರಹಸ್ಯವಾಗಿ ಇರದಂತೆ ನೋಡಿಕೊಂಡರು. ಆ ಬಳಿಕ ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷವು ಕಾಂಗ್ರೆಸ್‌ನೊಂದಿಗೆ ಮೈತ್ರಿಯನ್ನು ಮುಂದುವರಿಸುತ್ತದೆ ಎಂದೂ ಸಾರಿದರು. ಹೀಗಿದ್ದಾಗ ರಹಸ್ಯ ಸಭೆಯ ನಾಟಕವಾದರೂ ಏಕೆ? ಈ ಬಾರಿಯ ಅವರ ನಾಟಕವನ್ನು ಗಮನಿಸಿ, ದೆಹಲಿಯಲ್ಲಿ ತಮ್ಮ ದಾಳ ಉರುಳಿಸಲು ಅವರು ಸುರಕ್ಷಿತವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ನಾಯಕತ್ವದಲ್ಲಿ ತುಂಬಿದ ವ್ಯಾಪಕ ಭ್ರಷ್ಟಾಚಾರದಿಂದಾಗಿ ತನ್ನ ಜನಪ್ರಿಯತೆ ಕುಂದಿದೆ ಎಂಬುದು ಎನ್‌ಸಿಪಿಗೆ ಗೊತ್ತಾಗಿದೆ. ಭ್ರಷ್ಟಾಚಾರದ ಕಾರಣದಿಂದಾಗಿಯೇ ಶರದ್ ಪವಾರ್ ಅವರು ಸಾಂಪ್ರದಾಯಿಕ ಹಿಡಿತವನ್ನು ಹೊಂದಿದ್ದ ಕಬ್ಬು ಬೆಳೆಯುವ ಪ್ರದೇಶವಾದ ಪಶ್ಚಿಮ ಮಹಾರಾಷ್ಟ್ರದಲ್ಲಿಯೂ ಬಲ ಕಳೆದುಕೊಂಡಿದ್ದಾರೆ. ಶೇತ್ಕರಿ ಸಂಘಟನೆಯು ಬಲಶಾಲಿಯಾಗಿಯೇ ಉಳಿದಿದ್ದು ಅದು ಬಿಜೆಪಿ-ಶಿವಸೇನೆ ಮೈತ್ರಿಕೂಟದ ಕಡೆ ಮುಖ ಮಾಡಿದೆ.
ಶರದ್ ಪವಾರ್ ಅವರು ಗೆಲ್ಲುವ ಪಕ್ಷದ ಕಡೆಯೇ ತಮ್ಮನ್ನು ಇರಿಸಿಕೊಳ್ಳುವ ಮೂಲಕ ತಮ್ಮ ಇಡೀ ಜೀವನ ಕಳೆದಿದ್ದಾರೆ. ಸೋನಿಯಾ ಗಾಂಧಿಯವರ ವಿದೇಶೀ ಮೂಲವನ್ನು ಕೆದಕಿ ಹೇಗೆ ಕಾಂಗ್ರೆಸ್ ಪಕ್ಷವನ್ನು ಅವರು ತ್ಯಜಿಸಿದರು ಎಂಬುದನ್ನು ನೆನಪಿಸಿಕೊಳ್ಳಿ. ಅಧಿಕಾರ ಹಂಚಿಕೊಳ್ಳಲು ಕಾಂಗ್ರೆಸ್ ಮುಂದೆ ಬಂದಾಗ ಅದನ್ನು ಅಪ್ಪಿಕೊಂಡರು. ಸಮಯ ಸಂದರ್ಭ ಒದಗಿದರೆ ಸೋನಿಯಾ ಪಾಳಯ ತಮ್ಮನ್ನು ಮುಗಿಸಿಬಿಡಬಹುದು ಎಂಬುದು ಅವರಿಗೆ ತಿಳಿದಿದೆ. (ಇದಕ್ಕೆ ತೀರ ಇತ್ತೀಚಿನ ಸುಳುಹು ಎಂದರೆ ಪವಾರ್ ಜೊತೆಯಲ್ಲಿಯೇ ಸಚಿವರಾಗಿರುವ ಕೆ.ವಿ.ಥಾಮಸ್ ಅವರು ತಮ್ಮ ಪುಸ್ತಕದಲ್ಲಿ ಮರಾಠಾ ಸರದಾರನನ್ನು 'ಬೆನ್ನಿಗೆ ಇರಿಯುವವರು' ಎಂದು ವರ್ಣಿಸಿದ್ದಾರೆ. ಪುಸ್ತಕದ ಶೀರ್ಷಿಕೆ 'ಸೋನಿಯಾ, ದಿ ಬಿಲವ್ಡ್ ಆಫ್ ಮಾಸಸ್' ಎನ್ನುವ ಕಾರಣಕ್ಕಾಗಿ ಅದನ್ನು ತಿರಸ್ಕರಿಸಬೇಡಿ. ಕಾಂಗ್ರೆಸ್‌ನಲ್ಲಿಯ ಭಟ್ಟಂಗಿತನವು ಯಾವ ಪ್ರಮಾಣದ ಪ್ರಭಾವವನ್ನು ಹೊಂದಿದೆ ಎಂಬುದನ್ನು ಇದು ಸೂಚಿಸುತ್ತದೆ.) ಕಾಂಗ್ರೆಸ್ಸಿನೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡರೂ ಪವಾರ್ ತಮ್ಮ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳಲು ಬಯಸಿದ್ದು ಇದರಿಂದ ಸಿದ್ಧವಾಗುತ್ತದೆ.
ಹಾಗೇ, ರಾಮವಿಲಾಸ ಪಾಸ್ವಾನ್, ಬಿಜೆಪಿಯ ಇತ್ತೀಚಿನ ಮಿತ್ರ ಆಗಿದ್ದಾರೆ. ಅಧಿಕಾರದ ಮೇಲೆ ಆಸೆ ಇಟ್ಟುಕೊಂಡು ಕೆಲವು ನಿವೃತ್ತ ಐಪಿಎಸ್-ಐಎಎಸ್ ಪ್ರಭಾವಿ ವ್ಯಕ್ತಿಗಳು, ಸೇನೆಯ ಒಬ್ಬ ಮಾಜಿ ಮುಖ್ಯಸ್ಥ, ಸಿಬಿಐನ ಒಬ್ಬ ಹಿಂದಿನ ಮುಖ್ಯಸ್ಥ, ಒಬ್ಬ ಹಿಂದಿನ ರಾಯಭಾರಿ ಮತ್ತಿತರರು ಬಿಜೆಪಿಗೆ ಜಿಗಿದಿದ್ದಾರೆ. ಕೆಲವು ಭಾರೀ ಧೈರ್ಯವಂತರು ತಮ್ಮನ್ನು ತಡೆದುಕೊಳ್ಳಲು ಆಗದೆ ಕಾಂಗ್ರೆಸ್ ಪಕ್ಷವನ್ನೂ ಸೇರಿದ್ದಾರೆ. ಮಿತ್ರಪಕ್ಷಗಳ ಅವಕಾಶವಾದಿ ಲೆಕ್ಕಾಚಾರಗಳು ಒಂದೆಡೆಯಾದರೆ ಕಾಂಗ್ರೆಸ್ ಪಕ್ಷದಲ್ಲಿಯೇ ಭಿನ್ನಧ್ವನಿಗಳು ಎದ್ದಿವೆ. ರಾಹುಲ್ ಅಥವಾ ಸೋನಿಯಾ ಅವರ ಮಾತನ್ನು ಅಲ್ಲಗಳೆಯುವುದು ನಿನ್ನೆಯವರೆಗೂ ಕಾಂಗ್ರೆಸ್ಸಿಗರಿಗೆ ಯೋಚಿಸಲೂ ಅಸಾಧ್ಯವಾದ ಮಾತೇ ಆಗಿತ್ತು. ಆದರೆ ಮಧ್ಯಪ್ರದೇಶ ಕಾಂಗ್ರೆಸ್ಸಿನ ಅಧ್ಯಕ್ಷರಾಗುವಂತೆ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ರಾಹುಲ್ ಕೇಳಿದಾಗ ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪದ ಸ್ವೀಕರಿಸಲು ಆರ್‌ಪಿಎನ್ ಸಿಂಗ್ ಒಪ್ಪಲಿಲ್ಲ. ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದ್ದ ಕಾಂಗ್ರೆಸ್ಸಿಗರನ್ನು ಕರ್ನಾಟಕದ ಸಂಪುಟದಿಂದ ದೂರ ಇಡುವಂತೆ ರಾಹುಲ್ ಆದೇಶ ನೀಡಿದ್ದರೂ ಅವರು ಸಚಿವರಾಗುವಲ್ಲಿ ತಮ್ಮ ದಾರಿ ಕಂಡುಕೊಂಡರು. ರಾಷ್ಟ್ರಮಂಡಲ ಕ್ರೀಡಾಕೂಟದ ಕಪ್ಪುಚುಕ್ಕೆಯಾಗಿದ್ದ ಸುರೇಶ್ ಕಲ್ಮಾಡಿ ಕೂಡ ತಮ್ಮ ಮಾತನ್ನು ನಡೆಸಬಲ್ಲವರಾಗಿದ್ದಾರೆ. ಮಾಯಾವತಿ ಮತ್ತು ಲಾಲೂಪ್ರಸಾದ್ ಅಂಥವರನ್ನು ಸಂತೈಸುವ ಮಟ್ಟಕ್ಕೆ ರಾಹುಲ್ ಕುಗ್ಗಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಅಷ್ಟೊಂದು ಹೇಳಿಕೊಳ್ಳುತ್ತಿತ್ತಲ್ಲ.
ಕೆಲವು ಅಂತರ್ಜಾಲದ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ 75ರಷ್ಟು ಕಡಿಮೆ ಸೀಟುಗಳನ್ನು ಪಡೆಯಲಿವೆ ಎಂದು ಹೇಳಿವೆ. ರಾಹುಲ್ ಅವರಿಂದಲೇ ನೇಮಕಗೊಂಡ ಸಮೀಕ್ಷಕರು ಈ ಅಂಕಿಗಳನ್ನು 110ರ ವರೆಗೆ ಎಳೆದಿದ್ದಾರೆ. ದಿಗ್ವಿಜಯ ಸಿಂಗ್ ಮತ್ತು ಸೋನಿಯಾರಂಥ ಹಿರಿಯರು ಸುರಕ್ಷಿತವಾದ ರಾಜ್ಯಸಭೆಯನ್ನು ತಪ್ಪಿಸಿ ಅಪಾಯಕಾರಿ ಚುನಾವಣೆಗೆ ಕುಮಾರಿ ಸೆಲ್ಜಾರನ್ನು ಏಕೆ ತಳ್ಳಿದರು? ಐರ್ಲೆಂಡಿನ ಒಂದು ರಾಕ್ ಸಮೂಹ ಗೀತೆ ಹೀಗಿದೆ: ಮುಳುಗುತ್ತಿರುವ ಹಡಗಿನಲ್ಲಿ ನನಗೆ ಭಯವಾಗಿದೆ, ನನಗೆ ಭಯವಾಗಿದೆ/ ನಾನು ಬಹಳ ಕಾಲ ಕಳೆದುಕೊಂಡೆ, ಬಹಳ ಕಾಲ ಅದರಲ್ಲಿ ಕಳೆದುಕೊಂಡೆ/ ಅದು ಪೂರ್ತಿ ಮುಳುಗುವುದನ್ನು ನಾನು ನೋಡುವೆ.
ಟಿ.ಜೆ.ಎಸ್ ಜಾರ್ಜ್