ಅಂಕಣಗಳು

ನೂರರ ಹೊಸ್ತಿಲಲ್ಲಿ ಕಸಾಪ

Published On :

ಕನ್ನಡ ಸಾಹಿತ್ಯ ಪರಿಷತ್ತು ನೂರರ ಹರೆಯ ಮತ್ತು ಸಂಭ್ರಮದ ಹೊಸ್ತಿಲಿಗೆ ಬಂದು ನಿಂತಿದೆ. ಮೈಸೂರು ಅರಸರ ಒತ್ತಾಸೆಯ ಮೇರೆಗೆ 5-5-1915ರಲ್ಲಿ ಕಸಾಪ ಸ್ಥಾಪನೆ ಆಯಿತು.
ಕನ್ನಡ ನೆಲ-ಜಲ, ಭಾಷೆ-ಗಡಿ ಹೀಗೆ ರಾಜ್ಯದ ಸಮಸ್ಯೆಗಳಿಗೆ (ಕರ್ನಾಟಕ ಏಕೀಕರಣ, ಗೋಕಾಕ್ ಚಳವಳಿ ಇತ್ಯಾದಿ) ತನ್ನದೇ ಆದ ಬಳವಳಿ ನೀಡಿ, ಹೋರಾಟದ ಮುಂಚೂಣಿಯಲ್ಲಿರುವ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು. ಈವರೆಗೆ ಇಪ್ಪತ್ನಾಲ್ಕು ಅಧ್ಯಕ್ಷರುಗಳನ್ನು ಕಂಡಿರುವ ಸಂಸ್ಥೆ, ಎಂಬತ್ತು ಅಖಿಲ ಭಾರತ ಕನ್ನಡ ಸಮ್ಮೇಳನಗಳನ್ನು ರಾಜ್ಯದ ಒಳಗೆ- ಹೊರಗೆ (ದೆಹಲಿ, ಹೈದ್ರಾಬಾದ್, ಬಾಂಬೆ ಮುಂತಾದ ಕಡೆ) ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳುತ್ತ, ಜನರಲ್ಲಿ ಭಾಷಾಭಿಮಾನ- ದೇಶಾಭಿಮಾನ ಮೂಡಿಸುತ್ತ ಬಂದಿದೆ.
ಎಚ್. ವಿ. ನಂಜುಂಡಯ್ಯನವರೇ ಈ ಸಂಸ್ಥೆಯ ಪ್ರಥಮ (ಸಂಸ್ಥಾಪಕ) ಅಧ್ಯಕ್ಷರೂ ಹೌದು. ಹಾಗೆಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೂ ಹೌದು. ಸತತ ಮೂರು ಬಾರಿ ಅವರೇ ಪರಿಷತ್ತಿನ, ಸಮ್ಮೇಳನಗಳ ಅಧ್ಯಕ್ಷರಾದದ್ದೂ ದಾಖಲೆಯೇ ಸರಿ. ಕನ್ನಂಬಾಡಿ ಅಣೆಕಟ್ಟು, ಮೈಸೂರು ಬ್ಯಾಂಕ್, ಮೈಸೂರು ವಿಶ್ವವಿದ್ಯಾಲಯ ಹೀಗೆ ಜನೋಪಯೋಗಿ ಕೆಲಸಗಳಿಗೆ ಮುಂದಾಳುವಾಗಿದ್ದ ಸರ್. ಎಂ. ವಿಶ್ವೇಶ್ವರಯ್ಯನವರ ಪಾಲೂ ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನಂಥ ಮಹಾನ್ ಸಂಸ್ಥೆಯ ಹುಟ್ಟಿಗೆ ಕಾರಣವಾಗಿದೆ ಎಂಬುದೂ ಗಮನಾರ್ಹ.
ಬೆಂಗಳೂರಿನ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿ ದಾನಿಯೊಬ್ಬರ ಸ್ಥಳದಾನದಿಂದ ಅಂದು ತನ್ನ ಪುಟ್ಟ ಕಚೇರಿ ಆರಂಭಿಸಿ, ತದನಂತರ ಇಂದು ಬೃಹದಾಕಾರವಾಗಿ ಬೆಳೆದಿರುವ ಸಂಸ್ಥೆ ಕ. ಸಾ.ಪ. ಧಾರವಾಡದ ವಿದ್ಯಾವರ್ಧಕ ಸಂಘದಂತೇ ಐತಿಹಾಸಿಕ, ಚಾರಿತ್ರಿಕ ಘಟನೆಗಳಿಗೆ ಕಸಾಪ ಸಾಕ್ಷಿಯಾಗಿದೆ. ಕಸಾಪ ಸ್ಥಾಪನೆಗೊಂಡ ನಂತರ ಅವೆಷ್ಟೋ ಕನ್ನಡಪರ ಸಂಘಟನೆಗಳು ಹುಟ್ಟಿಕೊಂಡರೂ ಕನ್ನಡ ಸಾಹಿತ್ಯ ಪರಿಷತ್ತಿನಂತೆ ಘನತೆ, ಗೌರವವನ್ನು ಕಾಪಾಡಿಕೊಂಡು ಬಂದಿರುವ ಸಂಸ್ಥೆಗಳೂ ವಿರಳ.  ತನ್ನದೇ ಆದ ನಿಬಂಧನೆಗಳನ್ನು ರಚಿಸಿಕೊಂಡಿರುವ (ಸಹಕಾರಿ ತತ್ತ್ವದ ಆಧಾರದ ಮೇಲೆ) ಕಸಾಪವು ಕಾಲಕ್ಕೆ ತಕ್ಕಂತೆ ತನ್ನ ಸಂವಿಧಾನದಲ್ಲಿ ಆಗಾಗ ತಿದ್ದುಪಡಿಗಳನ್ನು ಮಾಡಿಕೊಳ್ಳುತ್ತ ಬಂದಿದೆ. ಸುಮಾರು ಎರಡು ಲಕ್ಷ ಆಜೀವ ಸದಸ್ಯರನ್ನು ಹೊಂದಿರುವ ಈ ಸಂಸ್ಥೆಯಲ್ಲಿ ಸದಸ್ಯತ್ವ ಪಡೆಯುವುದೇ ಒಂದು ಹೆಮ್ಮೆಯ ಹಾಗೂ ಅಭಿಮಾನದ ಸಂಗತಿ. ಈವರೆಗೆ ಇಪ್ಪತ್ನಾಲ್ಕು ಅಧ್ಯಕ್ಷರುಗಳನ್ನು ಕಂಡಿರುವ ಕಸಾಪಕ್ಕೆ ಈವರೆಗೆ ಮಹಿಳೆ ಅಧ್ಯಕ್ಷ ಗಾದಿಗೆ ಏರಿಲ್ಲ ನಿಜ. ಆದರೆ ಈವರೆಗೆ ಜರುಗಿರುವ ಎಂಬತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ನಾಲ್ಕು ಬಾರಿ ಸಮ್ಮೇಳನಾಧ್ಯಕ್ಷರಾಗುವ ಅವಕಾಶ ಮಹಿಳೆಗೆ ಸಿಕ್ಕಿದೆ. ಈ ಅಂಶಗಳನ್ನು ಪರಿಗಣಿಸಿದಾಗ ಕಸಾಪ ತನ್ನ ನಿಬಂಧನೆಯಲ್ಲಿ ತಿದ್ದುಪಡಿ ತರಬೇಕಾದ ಔಚಿತ್ಯ ಇದೆ.
ಕಸಾಪ ಪ್ರತಿವರ್ಷ ನಡೆಸುವ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಬೇಡಿಕೆ ಹಾಗೂ ಮಾನ್ಯತೆಗಳೆರಡೂ ಇವೆ. ಪ್ರತಿ ಮೂರು ವರ್ಷಕ್ಕೊಮ್ಮೆ ರಾಜ್ಯಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷರ ಹುದ್ದೆಗಳಿಗೆ ಏಕಕಾಲದಲ್ಲಿ ಚುನಾವಣೆ ಜರುಗುತ್ತದೆ. 30 ಜಿಲ್ಲಾಧ್ಯಕ್ಷರು, 4 ಗಡಿನಾಡ ಅಧ್ಯಕ್ಷರು ಹಾಗೂ ಒಬ್ಬ ರಾಜ್ಯಾಧ್ಯಕ್ಷ ಹುದ್ದೆ ಇವೆ. ರಾಜ್ಯ ಸರ್ಕಾರದ ಅನುದಾನ ಹಾಗೂ ಆಜೀವ ಸದಸ್ಯರ ಸದಸ್ಯತ್ವದ ಹಮದ ಮೇಲೆ ಪರಿಷತ್ತು ಅವಲಂಬಿತವಾಗಿದೆ. ಕಸಾಪದ ನಿಬಂಧನೆಯಲ್ಲಿ ಆಗಾಗ ತಿದ್ದುಪಡಿ ಆಗುತ್ತದೆ. ಸೆಪ್ಟೆಂಬರ್‌ನ ಸರ್ವಸದಸ್ಯರ ಸಾಮಾನ್ಯಸಭೆಯಲ್ಲಿ ಈ ತಿದ್ದುಪಡಿಗಳಿಗೆ ಅಂಗೀಕಾರ ದೊರೆತ ನಂತರ ನಿಬಂಧನೆಯ ತಿದ್ದುಪಡಿ ಪ್ರಕ್ರಿಯೆ ಆರಂಭವಾಗುತ್ತದೆ. ರಾಜ್ಯದಲ್ಲಿ ಎಷ್ಟೋ ಅಕಾಡೆಮಿಗಳು, ಪ್ರಾಧಿಕಾರಗಳು ಇದ್ದರೂ ಅವೆಲ್ಲವೂ ಸರ್ಕಾರಗಳ ಅಧೀನದಲ್ಲಿ ಬರುವ ಸಂಸ್ಥೆಗಳೇ. ಆದರೆ ಕಸಾಪ ಮಾತ್ರ ಸರ್ಕಾರದಿಂದ ಅನುದಾನ ಪಡೆದುಕೊಳ್ಳುತ್ತಿದ್ದರೂ ಸ್ವತಂತ್ರವಾಗಿ, ಸ್ವಾಯತ್ತವಾಗಿ ಇರುವ ಸಂಸ್ಥೆ. ಪ್ರಾಧಿಕಾರಗಳಿಗೆ ಅಧ್ಯಕ್ಷರುಗಳು ಮತ್ತು ಸದಸ್ಯರನ್ನು ಸರ್ಕಾರವೇ ನಾಮಕರಣ ಮಾಡಿದರೆ, ಕಸಾಪ ಅಧ್ಯಕ್ಷರನ್ನು ಅದರ ಆಜೀವ ಸದಸ್ಯರೇ ನೇರವಾಗಿ ಆಯ್ಕೆ ಮಾಡುತ್ತಾರೆ.
ಕನಿಷ್ಠ 500 ರುಪಾಯಿಯಿಂದ ಗರಿಷ್ಠ ಒಂದೂವರೆ ಕೋಟಿ ರುಪಾಯಿಗಳವರೆಗೆ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ದತ್ತಿಗಳನ್ನು ಹೊಂದಿದೆ ಕಸಾಪ. ಈ ಮೂಲಕ ದತ್ತಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಪ್ರಶಸ್ತಿಗಳನ್ನೂ ನೀಡುತ್ತಿದೆ. ಬಿಎಂಟಿಸಿ ಸಹಯೋಗದಲ್ಲಿ ಪ್ರತಿವರ್ಷ ನೀಡುವ ನೃಪತುಂಗ ಪ್ರಶಸ್ತಿಯು ಅತ್ಯಂತ ಹೆಚ್ಚಿನ ಮೊತ್ತದ ದತ್ತಿ. ಪುಸ್ತಕ ಪ್ರಕಟಣೆ, ಪುಸ್ತಕ ಮಾರಾಟ ವ್ಯವಸ್ಥೆಯನ್ನೂ ಹೊಂದಿರುವ ಕಸಾಪ, ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಮಾರುಕಟ್ಟೆಗೆ ವೇದಿಕೆ ಒದಗಿಸಿ ಲೇಖಕ-ಪ್ರಕಾಶಕ- ಓದುಗರ ಕೊಂಡಿ ಬೆಸೆದಿದೆ.
ಇವತ್ತಿಗೆ 99 ವರ್ಷಗಳನ್ನು ಪೂರೈಸಿ ನೂರನೇ ವಸಂತಕ್ಕೆ ಕಾಲಿಡುತ್ತಿದೆ ಕಸಾಪ.


 -ಸಿರಿಗೆರೆ ಯರಿಸ್ವಾಮಿ
ಅಧ್ಯಕ್ಷರು, ಕಸಾಪ ಜಿಲ್ಲಾ ಘಟಕ ಬಳ್ಳಾರಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.