ಯಾವಾಗ ರಾಜಕೀಯ ಹೋಲಸು ಗುಂಡಿಯಾಗಿ ಬದಲಾಗುತ್ತದೋ, ಆಗ ಒಳ್ಳೆಯದು ಕೆಟ್ಟದ್ದಾಗುತ್ತದೆ, ಕೆಟ್ಟದ್ದು ಒಳ್ಳೆಯದಾಗುತ್ತದೆ. ಚುನಾವಣಾ ಹೋರಾಟದಲ್ಲಿ ನಮ್ಮ ನಾಯಕರು ಸೌಜನ್ಯವನ್ನು ಮರೆತು ಹದ್ದು ಮೀರಿ ವರ್ತಿಸತೊಡಗಿದ್ದಾರೆ. ಪರಸ್ಪರ ಮಾತುಗಳಿಗೆ ತಪ್ಪು ಅರ್ಥ ಕಲ್ಪಿಸುವುದರಲ್ಲಿ ಮತ್ತು ಒಂದಿಷ್ಟೂ ಮುಜುಗರವಿಲ್ಲದೆ ಹೀನಾತಿ ಹೀನ ಪದಗಳನ್ನು ಬಳಸುವಲ್ಲಿ ಅವರು ನಿರತರಾಗಿಬಿಟ್ಟಿದ್ದಾರೆ. ಇವರೆಲ್ಲ ನಮ್ಮ ಕಾನೂನನ್ನು ರೂಪಿಸಲು ಹೊರಟವರಂತೆ! ಆದರೆ ಇವರೆಲ್ಲ ಹೀಗೆ ನೀತಿ ನಿಯಮಗಳನ್ನೆಲ್ಲ ತುಳಿದು ಮನಸ್ಸಿಗೆ ತೋಚಿದಂತೆ ವರ್ತಿಸುತ್ತಿರುವುದೇಕೆ? ಇದಕ್ಕೆಲ್ಲ ಚುನಾವಣೆಯ ಕಾವು ಕಾರಣ ಎನ್ನುವ ಉತ್ತರ ಕೊಡಬಹುದಾದರೂ, ಆ ಉತ್ತರ ಅಸಮಂಜಸವಾಗುತ್ತದೆ.
ನರೇಂದ್ರ ಮೋದಿ ಮತ್ತು ಪ್ರಿಯಾಂಕಾ ಗಾಂಧಿಯ ನಡುವಿರುವ ವಿಚಿತ್ರ ಸಾಮ್ಯತೆಯನ್ನು ಗಮನಿಸಿದ್ದೀರಾ? ಇಬ್ಬರೂ ಹೆಡ್ಲೈನ್ಗಳಲ್ಲಿ ಮಿಂಚುವುದರಲ್ಲಿ ಸಿದ್ಧಹಸ್ತರು. ಇಬ್ಬರೂ ಮಾಧ್ಯಮಗಳನ್ನು ಉನ್ಮಾದಕ್ಕೆ ತಳ್ಳಿಬಿಡುತ್ತಾರೆ. ದೇಶ ತಮ್ಮದೇ ಸ್ವತ್ತು ಎನ್ನುವ ಧಾಟಿಯಲ್ಲೇ ಮಾತನಾಡುತ್ತಾರೆ. ಇಬ್ಬರೂ ತಮ್ಮ ಶಕ್ತಿಪ್ರದರ್ಶನ ಮಾಡುತ್ತಾರೆ.
ಮೊದಿಯವರಲ್ಲಿ ಆಗಾಗ ಬೆದರಿಸುವ ಪ್ರವೃತ್ತಿ ಎದ್ದು ಕೂಡುತ್ತದೆ. ಒಬ್ಬ ಸುದ್ದಿ ವಾಹಿನಿಯ ಸಂದರ್ಶಕ ತುಸು ಇರಿಸುಮುರಿಸುಂಟು ಮಾಡುವ ಒಂದೆರಡು ಪ್ರಶ್ನೆಯನ್ನು ಅವರಿಗೆ ಕೇಳಿದ. ಕೂಡಲೇ ಎದ್ದು ಕುಳಿತ ಮೋದಿ, "ನೆನಪಿಡಿ, ನೀವು ಮೋದಿಯೊಂದಿಗೆ ಮಾತನಾಡುತ್ತಿದ್ದೀರಿ" ಎಂದು ಆ ಸಂದರ್ಶಕನಿಗೆ ಹೇಳಿದರು!
ಪ್ರಿಯಾಂಕಾ ಈ ಮಟ್ಟಕ್ಕೆ ಬೆಳೆದಿಲ್ಲ ಬಿಡಿ. ಆದರೆ ಇಡೀ ದೇಶ ತಮ್ಮ ಕುಟುಂಬಕ್ಕೇ ಹೆಚ್ಚು ಮಹತ್ವ ಕೊಡಬೇಕು ಎನ್ನುವ ವಿಕ್ಷಿಪ್ತ ಬಯಕೆ ಆಕೆಯಲ್ಲಿದೆ. ಹಿಂದಿನ ಚುನಾವಣೆಯಲ್ಲಿ ಅರುಣ್ ನೆಹರು, ಗಾಂಧಿ ಕುಟುಂಬದ ವಿರುದ್ಧ ಪ್ರಚಾರ ಕೈಗೊಂಡಾಗ, ಪ್ರಿಯಾಂಕಾ ಸಾರ್ವಜನಿಕ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ. "ರಾಯ್ ಬರೇಲಿಯಲ್ಲಿ ಕಾಲಿಡಲು ಈ ವ್ಯಕ್ತಿಗೆ(ಅರುಣ್ ನೆಹರು) ಹೇಗಾದರೂ ಅವಕಾಶ ಕೊಡುತ್ತೀರಿ?" ಎಂದಿದ್ದರು. ಅದರಂತೆಯೇ ಇತ್ತೀಚೆಗೆ "ನನ್ನ ಹುತಾತ್ಮ ತಂದೆಯನ್ನು ಮೋದಿ, ಅಮೇಠಿಯ ನೆಲದಲ್ಲಿ ಅವಮಾನಿಸಿದ್ದಾರೆ. ಅಮೇಠಿಯ ಜನರು ಈ ನೀಚ ರಾಜಕಾರಣಕ್ಕೆ ಸರಿಯಾದ ಉತ್ತರ ಕೊಡಲಿದ್ದಾರೆ" ಎಂದು ಅಬ್ಬರಿಸಿದ್ದರು.
ನರೇಂದ್ರ ಮೋದಿಯವರು ರಾಜೀವ್ರನ್ನು ಅವಮಾನಿಸಿದರೆಂಬುದು ಪ್ರಿಯಾಂಕಾರ ವಾದ. ಆದರೆ ಮೋದಿ ರಾಜೀವ್ರ ರಾಜಕೀಯ ನಡೆಯೊಂದನ್ನು ಪ್ರಶ್ನಿಸಿದ್ದರೇ ಹೊರತು, ವೈಯಕ್ತಿಕ ದಾಳಿಯನ್ನೇನೂ ಮಾಡಿರಲಿಲ್ಲ.
ಆದರೆ ಈ ದಾಳಿ-ಪ್ರತಿದಾಳಿಯ ಆಟದಲ್ಲಿ ಮೋದಿ ಇನ್ನಷ್ಟು ಕೆಳಮಟ್ಟಕ್ಕೆ ಇಳಿದದ್ದಂತೂ ಸತ್ಯ. ಪ್ರಿಯಾಂಕಾ ನೀಚ ರಾಜಕಾರಣ ಎಂದದ್ದು 'ಕೀಳು' ಮಟ್ಟದ ರಾಜಕೀಯ ಎಂಬರ್ಥದಲ್ಲಿ ಎನ್ನುವುದು ತಿಳಿದಿದ್ದರೂ, ಆ ಪದವನ್ನು ತಿರುಚಿ 'ನೀಚ್' ಅಂದರೆ "ಕೆಳ ಜಾತಿ" ಎಂದು ಮೋದಿ ಬದಲಿಸಿಬಿಟ್ಟರು! ಈ ಪದವನ್ನು ತಪ್ಪಾಗಿ ಗ್ರಹಿಸಲಾಯಿತು ಎಂದು ಮೋದಿ ಬೆಂಬಲಿಗರು ಸ್ಪಷ್ಟನೆ ನೀಡಿ ಸುಮ್ಮನಾದರು.
ಜಾತಿ ರಾಜಕೀಯವನ್ನು ಎರಡು ಮಟ್ಟದಲ್ಲಿ ನಿರ್ವಹಿಸಬಹುದು. ಅಂಬೇಡ್ಕರ್ ಅವರು ಮೇಲ್ಮಟ್ಟದಲ್ಲಿ ಅದನ್ನು ನಿರ್ವಹಿಸಿದ್ದರೆ, ಈಗಿನ ರಾಜಕಾರಣಿಗಳು, ಅದರಲ್ಲೂ ಮುಖ್ಯವಾಗಿ ಅಮಿತ್ ಶಾ ರಂಥ ನಾಯಕರು ಉತ್ತರಪ್ರದೇಶದಲ್ಲಿ ಅತ್ಯಂತ ಹೀನ ಮಟ್ಟದಲ್ಲಿ ಅದನ್ನು ನಿರ್ವಹಿಸುತ್ತಿದ್ದಾರೆ. ವ್ಯಂಗ್ಯವೆಂದರೆ ಮೋದಿಯವರ ಜಾತಿ ರಾಜಕಾರಣವನ್ನು ಮಾಯಾವತಿಯವರು ಖಂಡಿಸಿದ್ದಾರೆ ಎನ್ನುವುದು! ಉತ್ತರಪ್ರದೇಶದಲ್ಲಿ ಜಾತಿ ರಾಜಕಾರಣ ನಡೆಸುವ ಹಕ್ಕು ತಮಗಷ್ಟೇ ಇದೆ ಎಂದು ಮಾಯಾವತಿ ಭಾವಿಸುತ್ತಾರಲ್ಲವೇ?!
ಆದರೆ ಒಂದಂತೂ ನಿಜ. ಕೆಟ್ಟ ಪದಗಳನ್ನು ಬಳಸುವುದಕ್ಕಿಂತಲೂ ತಪ್ಪಾಗಿ ಗ್ರಹಿಸಿ ತಪ್ಪು ಮಾಡಿದರೆ ಅದರಲ್ಲಿ ತಪ್ಪಿಲ್ಲ. ಈ ಚುನಾವಣೆಯಲ್ಲಂತೂ ಮೋದಿಯವರನ್ನು ಕತ್ತೆ, ಕೋತಿ ಎಂದೆಲ್ಲ ಕರೆಯಲಾಯಿತು. ಇನ್ನೊಂದೆಡೆ ರಾಹುಲ್ ಗಾಂಧಿಗೆ ಸುಳ್ಳುಗಳ ವರ್ತಕ ಎಂಬ ಪಟ್ಟ ಸಿಕ್ಕರೆ, ಆಮ್ ಆದ್ಮಿಗೆ 'ಐಟಂ ಗರ್ಲ್" ಎನ್ನಲಾಯಿತು. ಎಲ್ಲದಕ್ಕಿಂತಲೂ ಅತಿ ಹೇಯವೆನಿಸಿದ್ದು, ರಾಹುಲ್ ಗಾಂಧಿ ಕುರಿತು ಬಾಬಾ ರಾಮ್ದೇವ್ರ ಹೇಳಿಕೆ.
300ಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇನೆಂದು ಹೇಳುತ್ತಿರುವ ಬಿಜೆಪಿ, ಚುನಾವಣಾ ನಿಯಮಗಳನ್ನು ಮುರಿಯಬಹುದು ಎಂದು ಭಾವಿಸುತ್ತಿದೆ. ಧರ್ಮದ ಹೆಸರನ್ನು ಮುಂದಿಟ್ಟುಕೊಂಡು ಪ್ರಚಾರಕ್ಕಿಳಿದಿದ್ದು ಇದಕ್ಕೊಂದು ಉದಾಹರಣೆ. ನರೇಂದ್ರ ಮೋದಿಯವರ ವಾರಾಣಸಿ ರ್ಯಾಲಿಗಳಲ್ಲಿ ಆ ಕ್ಷೇತ್ರದ ಪವಿತ್ರ ಸ್ಥಳಗಳ ಫೋಟೋಗಳೆಲ್ಲವನ್ನೂ ಹಿನ್ನೆಲೆಯಲ್ಲಿ ಬಳಸಲಾಗಿತ್ತು. ಇನ್ನು ಅಯೋಧ್ಯಾದ ಅವಳಿ ನಗರಗಳಾದ ಫೈಜಾಬಾದ್ನಲ್ಲಿ ಮೋದಿ ತಮ್ಮ ಬ್ಯಾಕ್ಗ್ರೌಂಡ್ನಲ್ಲಿ ಶ್ರೀರಾಮನ ಪೋಸ್ಟರ್ ಹಾಕಿಕೊಂಡು ಭಾಷಣ ಮಾಡಿದರು. ಇದು ಜನ ಪ್ರಾತಿನಿಧ್ಯ ಕಾಯ್ದೆಗೆ ವಿರುದ್ಧವಾದ ಕೆಲಸ. ಯಾವುದೇ ರೀತಿಯ ಧಾರ್ಮಿಕ ಚಿಹ್ನೆಗಳನ್ನು ಬಳಸುವಂತಿಲ್ಲ ಎಂದು ಆ ಕಾಯ್ದೆ ಹೇಳುತ್ತದೆ. 300 ಸ್ಥಾನಗಳಿಗೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆಂಬ ಭರವಸೆಯಲ್ಲಿರುವ ನಾಯಕನಿಗೆ ಹೀಗೆ ನಿಯಮ ಮುರಿಯುವ ಅವಶ್ಯಕತೆ ಇತ್ತೇ?
ಬಹುಶಃ ಆ 300 ಅಂಕಿಯಲ್ಲಿ ಏನೋ ಗೊಂದಲವಿದೆ ಎನಿಸುತ್ತಿದೆ!
-ಟಿಜೆಎಸ್ ಜಾರ್ಜ್