ಸಂಶಯ ಹುಟ್ಟುಹಾಕಿರುವ ಸಂಪತ್
ಚುನಾವಣಾ ಆಯೋಗ ಭಾರತದ ಪ್ರಬಲ ಸಾಂವಿಧಾನಿಕ ಸಂಸ್ಥೆಗಳಲ್ಲೊಂದು. ಪ್ರಮುಖ ಚುನಾವಣಾ ಸುಧಾರಣೆಗಳನ್ನು ಜಾರಿಗೆ ತಂದು, ಆ ಮೂಲಕ ಅತ್ಯಂತ ಶಾಂತಿಯುತವಾಗಿ, ಸುವ್ಯವಸ್ಥಿತವಾಗಿ ಚುನಾವಣೆ ನಡೆಸಿ ಜಗತ್ತಿನ ಗಮನ ಸೆಳೆದದದ್ದು ಟಿ.ಎನ್.ಶೇಷನ್ ಅವರು. ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಬದಲಾವಣೆಯ ಮುದ್ರೆ ಒತ್ತಿ, ಚುನಾವಣಾ ಆಯೋಗಕ್ಕೆ ಅವರು ಹೆಗ್ಗಳಿಕೆ ತಂದುಕೊಟ್ಟರು. ಆದರೆ ಆ ಸಂಸ್ಥೆಗೀಗ ಕಪ್ಪುಚುಕ್ಕೆ ಹತ್ತಿಕೊಂಡಿತೇ ಎಂಬ ಸಂಶಯ ಮೂಡದೇ ಇರದು. ಇದಕ್ಕೆ ಕಾರಣವೂ ಇಲ್ಲವೆಂದಲ್ಲ.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ವಿಚಾರದಲ್ಲಿ ದೇಶದ ಮೊದಲ ರಾಜಕೀಯ ಕುಟುಂಬದ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಹಾಲಿ ಮುಖ್ಯ ಚುನಾವಣಾ ಆಯುಕ್ತ ವೀರವಲ್ಲಿ ಸುಂದರಂ ಸಂಪತ್ ನೇತೃತ್ವದ ಆಯೋಗ ಹಿಂದೇಟು ಹಾಕಿದೆಯೇ ಎಂಬ ಪ್ರಶ್ನೆಗಳೇಳುತ್ತಿವೆ. ಅಮೇಠಿಯಲ್ಲಿ ಮೇ 7ರಂದು ಮತದಾನದ ಸಂದರ್ಭದಲ್ಲಿ ಫೂಲಾ ಎಂಬಲ್ಲಿಯ ಹಲವು ಮತಗಟ್ಟೆಗಳಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತೆರಳಿ, ವಿದ್ಯುನ್ಮಾನ ಮತಯಂತ್ರಗಳನ್ನು ವೀಕ್ಷಿಸಿದ್ದು ದೊಡ್ಡ ಸುದ್ದಿಯಾಯಿತು. ಈ ಬಗ್ಗೆ ದೂರು ಸ್ವೀಕರಿಸಿದ್ದ ಆಯೋಗ ತನಿಖೆ ಕೂಡ ನಡೆಸಿತ್ತು. ಆದರೆ, ಮುಖ್ಯ ಚುನಾವಣಾ ಆಯುಕ್ತ ಸಂಪತ್ ಹಲವು ಸಂದರ್ಶನಗಳಲ್ಲಿ "ರಾಹುಲ್ ಗಾಂಧಿ ಯಾವುದೇ ತಪ್ಪೆಸಗಿಲ್ಲ. ಅವರು ಭೇಟಿ ನೀಡಿದ ವೇಳೆ ವಿದ್ಯುನ್ಮಾನ ಮತ ಯಂತ್ರ ಕಾರ್ಯವೆಸಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಮತಗಟ್ಟೆಗೆ ಭೇಟಿ ನೀಡಿದ್ದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಆಗುವುದಿಲ್ಲ" ಎಂದು ಹೇಳಿ ಅವರ ತಪ್ಪನ್ನು ಮಾಫಿ ಮಾಡಿದ್ದರು.
ಆದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತದಾನ ಮಾಡಿದ ಬಳಿಕ ಮತಗಟ್ಟೆಯಿಂದ 100 ಮೀಟರ್ ವ್ಯಾಪ್ತಿಯ ಒಳಗೆ ಮಾತನಾಡಿದರೆಂದು, ಮೊಬೈಲ್ ಫೋನಿನಿನಲ್ಲಿ ಫೊಟೋ (ಸೆಲ್ಫಿ) ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದರೆಂದು ಸುದ್ದಿವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಸಾರವಾಗುತ್ತಲೇ ತನಿಖೆಗೆ ಆದೇಶ ಮಾಡಿ ಎಫ್ ಐಆರ್ ದಾಖಲಿಸುವಂತೆ ಆದೇಶಿಸಿತ್ತು ಚುನಾವಣಾ ಆಯೋಗ. ಇಂಥ ತರಾತುರಿ ಯಾಕೆ ಎನ್ನುವುದು ಅರ್ಥವಾಗುತ್ತಿಲ್ಲ.
ಇಲ್ಲಿ ನಾನು ಸಾಂವಿಧಾನಿಕ ಸ್ವಾಯತ್ತ ಸಂಸ್ಥೆ ಎಂದು ಹೇಳಿಕೊಳ್ಳುವ ಸಂಸ್ಥೆಯೊಂದರ ಕಾರ್ಯನಿರ್ವಹಣೆಯ ಬಗ್ಗೆ ಎದ್ದಿರುವ ಸಂಶಯಗಳನ್ನು ಚರ್ಚಿಸುತ್ತಿದ್ದೇನಷ್ಟೆ. ಶುಕ್ರವಾರವಷ್ಟೇ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವ ಮಾತನಾಡಿದ್ದ ಆಯೋಗ ಕೆಲವೇ ಗಂಟೆಗಳಲ್ಲಿ ತನ್ನ ನಿಲುವನ್ನು ಬದಲಿಸಿತ್ತು. ರಾಹುಲ್ ಗಾಂಧಿ ಮತಗಟ್ಟೆ ಪ್ರವೇಶ ನೀತಿ ಸಂಹಿತೆ ಉಲ್ಲಂಘನೆ ಆಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯ ಇದೆ. ಇದಕ್ಕಾಗಿ ಅದು ಆ ದಿನ ಬಿರುಸಿನ ಸರಣಿ ಸಭೆಗಳನ್ನು ನಡೆಸಿತ್ತೂ ಕೂಡ. ಇದೇ ಮಾದರಿಯನ್ನು ನರೇಂದ್ರ ಮೋದಿಯವರ ವಿಚಾರದಲ್ಲಿ ಆಯೋಗ ಏಕೆ ಅನುಸರಿಸಲಿಲ್ಲ?
"ಇದು 100 ಮೀಟರ್ ವ್ಯಾಪ್ತಿಯ ವಿಚಾರ ಅಲ್ಲ. 48 ಗಂಟೆಗಳೊಳಗಾಗಿ ಮತಗಟ್ಟೆ ಸಮೀಪ ನರೇಂದ್ರ ಮೋದಿಯವರು ಪ್ರಚಾರ ಭಾಷಣ ಮಾಡಿದ್ದರು" ಎನ್ನುವುದು ಸಂಪತ್ ಅವರ ವಾದ. ಈ ಪ್ರಕರಣದಲ್ಲಿ ಗುಜರಾತ್ ಪೊಲೀಸ್ ಇಲಾಖೆ ಮೋದಿಯವರಿಗೆ ಕ್ಲೀನ್ ಚಿಟ್ ಕೊಟ್ಟಿತ್ತು.
ರಾಹುಲ್ ಗಾಂಧಿಯವರ ವಿಚಾರಕ್ಕೇ ಬಂದರೆ ಯಾವುದೇ ಪಕ್ಷದ ಅಭ್ಯರ್ಥಿ, ಆತ ಯಾರೇ ಇರಲಿ ಮತಗಟ್ಟೆ ಪ್ರವೇಶಕ್ಕೇ ಅಲ್ಲಿನ ಅಧಿಕಾರಿಯ ಅನುಮತಿ ಬೇಕು ಎಂದೇ ನಿಯಮ ಇರುವಾಗ ಕಾಂಗ್ರೆಸ್ ಉಪಾಧ್ಯಕ್ಷರಿಗೆ ಫೂಲಾದಲ್ಲಿನ ಮತಗಟ್ಟೆಗೆ ಪ್ರವೇಶಿಸಿ ಮತಯಂತ್ರಗಳನ್ನು ಪರೀಕ್ಷಿಸುವ ಅಥವಾ ನೋಡುವ ಅವಕಾಶ ಕೊಡುವ ಅಗತ್ಯವಾದರೂ ಏನಿತ್ತು? ಆಯೋಗದ ನಿಯಮದ ಪ್ರಕಾರ ಕೆಟ್ಟುಹೋದ ಅಥವಾ ಕಾರ್ಯವೆಸಗದ ಮತಯಂತ್ರ ವೀಕ್ಷಿಸಲೂ ಅಭ್ಯರ್ಥಿಗೆ ಮತಗಟ್ಟೆ ಅಧಿಕಾರಿ ಅಥವಾ ಚುನಾವಣೆ ಸಂಬಂಧಿತ ಅಧಿಕಾರಿಯ ಪರವಾನಗಿ ಬೇಕು. ಅದನ್ನು ರಾಹುಲ್ ಗಾಂಧಿಯವರು ಪಾಲಿಸಲಿಲ್ಲ ಎಂಬ ವಿಚಾರ ಘನ ಚುನಾವಣಾ ಆಯೋಗ ಮರೆತಿದೆ.
ರಾಹುಲ್ ನೀತಿ ಸಂಹಿತೆ ಉಲ್ಲಂಘಿಸಿದ್ದು ಕೇವಲ ಫೂಲಾದಲ್ಲಷ್ಟೇ ಅಲ್ಲ. ಇತರ ಎರಡು ಮತಗಟ್ಟೆಗೆ ತೆರಳಿ ಅಲ್ಲಿಯೂ ಇದೇ ರೀತಿ ಮಾಡಿದ್ದಾರೆ. ಆದರೂ ಆಯೋಗವೇಕೆ ಈ ಕುರಿತು ಮೌನವಾಗಿದೆ? ಈಗ ರಾಹುಲ್ ಗಾಂಧಿ ಹಿಮಾಚಲಪ್ರದೇಶದ ಸೋಲನ್ನಲ್ಲಿ ಪ್ರಚಾರದ ಸಂದರ್ಭದಲ್ಲಿ "ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಇಪ್ಪತ್ತೆರಡು ಸಾವಿರ ಜನರು ಸಾಯುತ್ತಾರೆ" ಎಂದು ಹೇಳಿದ್ದಾರೆ. ಅದನ್ನು ಖಂಡಿಸಿ ಬಿಜೆಪಿ ದೂರು ನೀಡಿದೆ. ಆಯೋಗ ರಾಹುಲ್ರಿಗೆ ನೋಟಿಸ್ ಕೊಟ್ಟಿದೆ. ಮೇ 12ರಂದು ಉತ್ತರಿಸುವಂತೆ ಸೂಚನೆ ನೀಡಿದೆ. ಇದು ಕೇವಲ ಕಣ್ಣೊರೆಸುವ ತಂತ್ರವೇ ಎಂದು ಕೇಳಬೇಕಾಗುತ್ತದೆ.
ಇನ್ನು ಪ್ರಿಯಾಂಕಾ ವಾದ್ರಾ ಅವರ ಕಾರ್ಯದರ್ಶಿ ಪ್ರಿಯಾ ಸಹಾಯ್ ಮತಗಟ್ಟೆಗಳಲ್ಲಿ ಓಡಾಡಿ ಕಾಂಗ್ರೆಸ್ ಪರ ವಕಾಲತ್ತು ನಡೆಸುತ್ತಿದ್ದರು ಎಂದು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಆರೋಪ ಮಾಡಿದ್ದರು. ಅವರನ್ನು ಕ್ಷೇತ್ರದಿಂದ ಹೊರಕ್ಕೆ ಕಳುಹಿಸುವಂತೆ ಅವರು ಮನವಿ ಮಾಡಿದ್ದರೂ ಕಿಂಚಿತ್ ಪರಿಣಾಮ ಬೀರಲಿಲ್ಲ. ಕೊನೆಗೆ ಬಿಜೆಪಿ ಅಭ್ಯರ್ಥಿ ಮತಗಟ್ಟೆ ಅಧಿಕಾರಿಗಳ ಜತೆ ವಾಗ್ವಾದ ನಡೆಸಿ, ನವದೆಹಲಿಯಲ್ಲಿರುವ ಭಾರತದ ಚುನಾವಣಾ ಆಯೋಗಕ್ಕೆ ಪ್ರಕರಣದ ಬಗ್ಗೆ ಗಮನ ಸೆಳೆದಾಗ ಸಹಾಯ್ ಅವರನ್ನು ಕ್ಷೇತ್ರ ಬಿಟ್ಟು ತೆರಳುವಂತೆ ಅಧಿಕೃತ ಆದೇಶ ಹೊರಡಿಸಲಾಯಿತು. ಹಾಗಿದ್ದರೆ ಸೋನಿಯಾ ಗಾಂಧಿ ಕುಟುಂಬಕ್ಕೊಂದು, ಉಳಿದವರಿಗೊಂದು ನೀತಿಯನ್ನು ಅನುಸರಿಸಿತೇ ಆಯೋಗ?
ಹಾಲಿ ಮುಖ್ಯ ಚುನಾವಣಾ ಆಯುಕ್ತರನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟದ್ದೇ ಆಂಧ್ರಪ್ರದೇಶದ ಮಾಜಿ ಸಿಎಂ ದಿ.ಡಾ.ವೈ.ಎಸ್.ರಾಜಶೇಖರ ರೆಡ್ಡಿ. ಅವರಿಗೆ ಅತ್ಯಂತ ಆಪ್ತರಾಗಿದ್ದ ಸಂಪತ್ ಅವರಿಗೆ ರೆಡ್ಡಿಯವರಿಂದಾಗಿ ಹಲವು ಪ್ರಮುಖ ಹುದ್ದೆಗಳು ಸಿಕ್ಕಿದವು. ಸಂಪತ್ ಅವುಗಳನ್ನು ಸಮರ್ಥವಾಗಿ, ಯಾವುದೇ ಚ್ಯುತಿ ಬಾರದಂತೆ ನಿಭಾಯಿಸಿದ್ದರು. ಆದರೆ ಹಾಲಿ ಹುದ್ದೆಯಲ್ಲಿ ರಾಹುಲ್ ಗಾಂಧಿಯವರ ಬಗ್ಗೆ ಬಂದಿರುವ ಆರೋಪಗಳ ಬಗ್ಗೆ ಅವರ ನಿರ್ಧಾರ ಪ್ರಶ್ನಾರ್ಹವಾಗಿದೆ. ಏಕೆಂದರೆ ವೈ.ಎಸ್. ಆರ್. ಸೋನಿಯಾಗೆ ಆಪ್ತರಾಗಿದ್ದರು. ಅವರ ಮಾತಿಗೆ ದೆಹಲಿ ವಲಯದಲ್ಲಿ ಮಾನ್ಯತೆ ಇತ್ತು ಎನ್ನುವುದು ನಿರ್ವಿವಾದ.
ರಾಹುಲ್ ಗಾಂಧಿಯವರು ತಪ್ಪೇ ಎಸಗಿಲ್ಲ ಎಂದಾದರೆ ಟ್ವಿಟರ್, ಫೇಸ್ಬುಕ್ ಮತ್ತು ಮಾಧ್ಯಮಗಳಲ್ಲಿ ಸತತ ಚರ್ಚೆ ಅಭಿಪ್ರಾಯ ಮಂಡನೆಗಳಾಗುತ್ತಿತ್ತೇ? ಟ್ವಿಟರ್ ಟ್ರೆಂಡ್ ಗಮನಿಸಿದಾಗ ರಾಹುಲ್ ವಿರುದ್ಧವೇ ಹೆಚ್ಚು ಅಭಿಪ್ರಾಯಗಳಿವೆ. ಹಾಗೆಂದು ಅದನ್ನು ಗಮನಿಸಿ ಆಯೋಗ ಕ್ರಮ ಕೈಗೊಳ್ಳಬೇಕೆನ್ನುತ್ತಿಲ್ಲ. ಆದರೆ ಕಾನೂನು ಯಾವ ರೀತಿ ಹೇಳುತ್ತದೆಯೋ ಆ ಪ್ರಕಾರ ನಡೆದುಕೊಂಡಿದ್ದರೆ ಆಯೋಗದ ಘನತೆ ಮತ್ತು ವಿಶ್ವಾಸಾರ್ಹತೆ ಮತ್ತಷ್ಟು ಹೆಚ್ಚುತ್ತಿತ್ತು.
- ಸದಾಶಿವ ಕೆ., ಕನ್ನಡಪ್ರಭ
khandige29 @gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

