ಇದು ಬಾಯ್ಮಾತಿನ ಪ್ರತಾಪವಲ್ಲ!

ನನ್ನ ಸಹೋದ್ಯೋಗಿ ಮಿತ್ರರಾದ ಪ್ರತಾಪ ಸಿಂಹ 'ಕನ್ನಡಪ್ರಭ'ದ ತಮ್ಮ ಸುದ್ದಿ...
ಇದು ಬಾಯ್ಮಾತಿನ ಪ್ರತಾಪವಲ್ಲ!
Updated on: 

ನನ್ನ ಸಹೋದ್ಯೋಗಿ ಮಿತ್ರರಾದ ಪ್ರತಾಪ ಸಿಂಹ 'ಕನ್ನಡಪ್ರಭ'ದ ತಮ್ಮ ಸುದ್ದಿ ಸಂಪಾದಕ ಹುದ್ದೆಗೆ ರಾಜೀನಾಮೆ ಕೊಟ್ಟು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹೊರಟಾಗ ನನ್ನ ಮನಸ್ಸು- ಹೃದಯ ಭಾರವಾಗಿತ್ತು. ಸುಮಾರು ಹದಿನಾಲ್ಕು ವರ್ಷಗಳ ವೃತ್ತಿ ಬಾಂಧವ್ಯ. ವೃತ್ತಿಯನ್ನು ಮೀರಿದ ಅನ್ಯೋನ್ಯತೆ. ಪ್ರತಾಪ ಪತ್ರಿಕೋದ್ಯಮದಿಂದ ಕಳಚಿಕೊಂಡು ಹೋಗಬಹುದೆಂದು ನಾನಾಗಲಿ, ಅವರಾಗಲಿ ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.
ಬೇರೆ ಪತ್ರಿಕೆಯ ಸಂಪಾದಕನಾಗುವ ಆಹ್ವಾನ ಬಂದರೂ ಪ್ರತಾಪ ಅದನ್ನು ಸ್ವೀಕರಿಸಲಿಲ್ಲ. 'ಸಾರ್, ನಾನು ನಿಮ್ಮ ಜತೆಯೇ ಇರುತ್ತೇನೆ. ಅದು ಯಾವ ಪತ್ರಿಕೆಯಾದರೂ ಆದೀತು. ನಿಮ್ಮನ್ನು ಬಿಟ್ಟು ಪತ್ರಿಕೋದ್ಯಮ ಮಾಡೊಲ್ಲ' ಎಂಬುದು ಪ್ರತಾಪ ಅವರ ನಿಷ್ಠೆ. ನಾನು 'ವಿಜಯ ಕರ್ನಾಟಕ' ಕ್ಕೆ ರಾಜೀನಾಮೆ ನೀಡಿದಾಗ ಪ್ರತಾಪ್ ತಕ್ಷಣ ತಾವೂ ರಾಜೀನಾಮೆ ನೀಡಿ ನನ್ನೊಂದಿಗೆ ಹೊರಬಂದರು.
ಮದುವೆಯಾಗಿ ಹದಿನೇಳು ದಿನಗಳಾಗಿದ್ದವು. ಹೊಸ ಬದುಕನ್ನು ಕಟ್ಟಿಕೊಳ್ಳುವ ಸಂಭ್ರಮದಲ್ಲಿದ್ದರು. 'ಪ್ರತಾಪ್, ರಾಜೀನಾಮೆ ನೀಡಬೇಡಿ. ಮೊನ್ನೆ ಮೊನ್ನೆ ಮದುವೆಯಾಗಿದ್ದೀರಿ. ನನ್ನ ಮುಂದೆ ಯಾವ ಆಯ್ಕೆಗಳಿಲ್ಲ. ಅನಿರ್ದಿಷ್ಟಾವಧಿ ನಿರುದ್ಯೋಗಿಯಾಗಿರಬೇಕಾಗುತ್ತದೆ. ಆ ರಿಸ್ಕ್ ಯಾಕೆ ತೆಗೆದುಕೊಳ್ಳುತ್ತೀರಿ? ನಾನು ಬೇರೆ ಪತ್ರಿಕೆ ಸೇರಿದ ನಂತರ ಬರುವಿರಂತೆ. ಅಲ್ಲಿ ತನಕ ವಿಜಯ ಕರ್ನಾಟಕದಲ್ಲಿರಿ' ಎಂದೆ. ಹೂಂ ಎಂದ ಆಸಾಮಿ ರಾಜೀನಾಮೆ ವಗಾಯಿಸಿ ಬಂದು ಬಿಟ್ಟರು. ನಾನು ನಿಜಕ್ಕೂ ಅವರ ಭವಿಷ್ಯ, ಮುಂದಿನ ಹೆಜ್ಜೆ ಕುರಿತು ಕಲ್ಲವಿಲ್ಲಗೊಂಡಿದ್ದೆ. 'ನೀವು ರಾಜೀನಾಮೆ ನೀಡಿ ನನಗೆ ಮತ್ತಷ್ಟು ಭಾರ ಹಾಕಿದಿರಿ' ಎಂದೆ. (ನನ್ನ ಜತೆ ಪ್ರತಾಪ ಅವರಲ್ಲದೇ ಪಿ. ತ್ಯಾಗರಾಜ್, ರಾಧಾಕೃಷ್ಣ ಭಡ್ತಿ ಹಾಗೂ ವಿನಾಯಕ ಭಟ್ ಮೂರೂರು ಸಹ ಹೊರಬಂದರು.) 'ಇರಲಿ ಬಿಡಿ ಸಾರ್, ಎಲ್ಲರೂ ಒಟ್ಟಿಗೆ ಇರೋಣ. ನಿಮಗಾಗಿದ್ದು ಎಲ್ಲರಿಗೂ ಆಗುತ್ತದೆ. ನಾವ್ಯಾಕೆ ಹೆದರಬೇಕು? ಕರ್ನಾಟಕದ ಓದುಗರಿಗೆ ನಮ್ಮ ಬರಹ ಗೊತ್ತು-ನಮ್ಮ ವ್ಯಕ್ತಿತ್ವವೇನು ಎಂಬುದು ಗೊತ್ತು. ಬರೆಯುವುದರ ಹೊರತಾಗಿ ಬೇರೆ ಕಸುಬು ಗೊತ್ತಿಲ್ಲ. ಬೇರೆ ಪತ್ರಿಕೆ ಇಲ್ಲವಾದರೆ ನಾವೇ ಒಂದು ಪತ್ರಿಕೆ ಆರಂಭಿಸಿದರಾಯಿತು' ಎಂದು ಪ್ರತಾಪ್ ನನಗೆ ಧೈರ್ಯ ತುಂಬುತ್ತಿದ್ದರು. ನನಗೆ 'ಕನ್ನಡಪ್ರಭ' ಸೇರಿದಂತೆ ಎರಡು ಪತ್ರಿಕೆಗಳಿಂದ ಆಹ್ವಾನ ಬಂದಿತ್ತು. ಅದನ್ನು ಪ್ರತಾಪ್‌ಗೆ ಹೇಳಿರಲಿಲ್ಲ.
ಎರಡು ತಿಂಗಳೊಳಗೆ ನಾನು 'ಕನ್ನಡಪ್ರಭ'ಕ್ಕೆ ಪ್ರಧಾನ ಸಂಪಾದಕನಾಗಿ ಬಂದಾಗ ತ್ಯಾಗರಾಜ್, ಭಡ್ತಿ, ಮೂರೂರು ಜತೆಗೆ ಪ್ರತಾಪ್ ಸಹ ಬಂದರು. ಅವರು ನಮ್ಮ ಪತ್ರಿಕೆಯ ಸಂಪಾದಕೀಯ ಹಾಗೂ ಅದರ ಮುಂದಿನ ಪುಟ (ಕಠ-ಊಜ ಠಛ್ಜಜ)ವನ್ನು ನಿರ್ವಹಿಸುತ್ತಿದ್ದರು. ಅದರ ಜತೆಗೆ ಶನಿವಾರದ 'ಬೆತ್ತಲೆ ಪ್ರಪಂಚ' ಅಂಕಣ ಬರೆಯುತ್ತಿದ್ದರು. ಇವೆಲ್ಲ ನಿಮಗೆ ಗೊತ್ತೇ ಇದೆ.
ಯಾವುದೇ ಸುದ್ದಿಮನೆಗೆ ಭೂಷಣ ಪ್ರಾಯರಾಗಬಹುದಾದ, ಸಂಪಾದಕರಿಗೆ ಗಟ್ಟಿ ಆಸ್ತಿಯಾಗಬಹುದಾದ, ಒಂದು ಪತ್ರಿಕೆ ಹೆಮ್ಮೆ ಪಡಬಹುದಾದ ಪ್ರತಾಪ್ ಎಂಬ ರಾಜ್ಯದ ಮನೆಮಾತಾದ, ಜನಪ್ರಿಯ ಪತ್ರಕರ್ತ ಹೊಸ ಕ್ಷೇತ್ರ ಬಯಸಿ ರಾಜಕೀಯಕ್ಕೆ ಪ್ರವೇಶಿಸಿ ಚುನಾವಣಾ ಕಣಕ್ಕಿಳಿಯುವ ನಿರ್ಧಾರ ಕೈಗೊಂಡಾಗ, ಅವರನ್ನು ಹೇಗೆ ಬಿಟ್ಟುಕೊಡುವುದು ಎಂದು ನಾನು ವಿಪರೀತ ಚಡಪಡಿಸಿದ್ದೆ. ಅವರು ನನ್ನ ಪಾಲಿಗೆ ಕೇವಲ ಸಹೋದ್ಯೋಗಿಯಷ್ಟೇ ಅಗಿರಲಿಲ್ಲ. ಒಲ್ಲದ ಆದರೆ ಒಳ್ಳೆಯ ಮನಸ್ಸಿನಿಂದ ಕಳಿಸಿಕೊಟ್ಟಿದ್ದೆ. ಪ್ರತಾಪ್, ಪತ್ರಿಕೆಗೆ ರಾಜೀನಾಮೆ ಕೊಟ್ಟು ಮೈಸೂರಿಗೆ ಹೋದಾಗ ಅಸಂಖ್ಯ ಓದುಗರು ಬೇಸರಪಟ್ಟುಕೊಂಡಿದ್ದರು. ಪ್ರತಾಪ್ ಅಂಕಣವಿಲ್ಲದೇ ಪತ್ರಿಕೆ ಸೊರಗುತ್ತಿದೆ ಎಂದು ಅನೇಕರು ಹೇಳಿದರು. 'ಚುನಾವಣೆ ಮುಗಿದ ಬಳಿಕ ಬರೆಯುತ್ತಾರೆ' ಅಂತ ಸಮಜಾಯಿಶಿ ನೀಡಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ. ಸುಮಾರು ಹದಿನೈದಿಪ್ಪತ್ತು ದಿನ ನಾನು ಉತ್ತರ ಹೇಳಿ ಹೇಳಿ ಸುಸ್ತಾಗಿದ್ದೆ. ಈಗಲೂ ಅನೇಕ ಓದುಗರು 'ಪ್ರತಾಪ್ ಯಾಕೆ ಬರೆಯುತ್ತಿಲ್ಲ? ಪ್ರತಾಪ್ ಯಾವಾಗ ಬರೆಯುತ್ತಾರೆ? ಸಂಸದರಾದರೇನಂತೆ ಬರೆಯಬಾರದೇನು? ಬೇಗನೆ ಅವರು ಬರೆಯುವಂತಾಗಲಿ' ಎಂದು ನನ್ನನ್ನು ಅಡ್ಡಹಾಕಿಕೊಂಡು ಪ್ರಶ್ನಿಸುತ್ತಾರೆ.
ಪ್ರತಾಪ್ ಪತ್ರಿಕೆಗೆ ರಾಜೀನಾಮೆ ನೀಡಿದ ಮರುದಿನ ಚೈತನ್ಯ ಹೆಗಡೆ ಅವರನ್ನು ಕರೆದು 'ನಾಳೆಯಿಂದ ಪ್ರತಾಪ್ ಕುಳಿತುಕೊಳ್ಳುತ್ತಿದ್ದ ಕ್ಯಾಬಿನ್‌ನಲ್ಲಿ ಕುಳಿತುಕೊಳ್ಳಿ' ಎಂದೆ. ಚೈತನ್ಯ ಪ್ರತಾಪ್ ಜತೆಯಲ್ಲಿಯೇ ಪಳಗಿದವರು. ಕ್ರಿಯಾಶೀಲ, ಭರವಸೆಯ ಅಂಕಣಕಾರ. ಪ್ರತಾಪ್ ಕ್ಯಾಬಿನ್‌ನಲ್ಲಿ ಹೋಗಿ ಕುಳಿತುಕೊಳ್ಳಲು ಚೈತನ್ಯ ಯಾಕೋ ಹಿಂದೇಟು ಹಾಕಿದರು.
'ಫಲಿತಾಂಶ ಯಡವಟ್ಟಾಗಿ ವಾಪಸ್ ಕನ್ನಡಪ್ರಭಕ್ಕೆ ಬರುವಂತಾದರೆ ಎಂಬ ಅನುಮಾನವಾ?' ಎಂದು ಕೇಳಿದೆ. 'ಹಾಗೇನಿಲ್ಲ...ಆದರೂ...' ಎಂದರು ಚೈತನ್ಯ ಹೆಗಡೆ.
'ಅನುಮಾನ ಬೇಡ. ಪ್ರತಾಪ್ ಕನ್ನಡಪ್ರಭಕ್ಕೆ ವಾಪಸ್ ಬರೊಲ್ಲ. ಅವರು ಅಲ್ಲಿ ಗೆಲ್ಲೋದು ಗ್ಯಾರಂಟಿ. ಅವರ ಜಾಗದಲ್ಲಿ ಕುಳಿತುಕೊಳ್ಳಿ' ಎಂದೆ.
ಮೊನ್ನೆ ಫಲಿತಾಂಶ ಬಂದ ದಿನ ವಿಜಯ ಸಂಕೇಶ್ವರರು ಫೋನ್ ಮಾಡಿ, ಪ್ರತಾಪ್ ಆರಿಸಿ ಬಂದಿದ್ದು ನನಗೆ ಅತೀವ ಸಂತಸ ತಂದಿದೆ. ಆದರೆ ಅವರು ಅಂಕಣ ಬರೆಯುವುದನ್ನು ನಿಲ್ಲಿಸಬಾರದು' ಎಂದರು.
ಕನ್ನಡಪ್ರಭ ಕಚೇರಿಯಲ್ಲಿನ ಅವರ ಕ್ಯಾಬಿನ್ ಭರ್ತಿಯಾಗಿರಬಹುದು. ಆದರೆ ಪತ್ರಿಕೆಯಲ್ಲಿ ಅವರ ಅಂಕಣದ ಜಾಗ ಖಾಲಿಯಾಗಿಯೇ ಇದೆ. ಅದನ್ನು ಪ್ರತಾಪ್ ಅವರು ಭರ್ತಿ ಮಾಡುತ್ತಾರೆ.
ಪ್ರತಾಪ್‌ಗೆ ಈ ಚುನಾವಣೆ ವಿಜಯ ಸುಲಭದ್ದಾಗಿರಲಿಲ್ಲ. ಅವರು ಕಳೆದ ಮೂವತ್ತೈದು ದಿನಗಳಲ್ಲಿ ಸೆಣಸಿದ ಪರಿ, ನಿಭಾಯಿಸಿದ ರೀತಿ ನಿಜಕ್ಕೂ ಅದ್ಭುತ. ಹಿಂದಿನ ದಿನದ ರಾತ್ರಿ ತನಕ ಪತ್ರಿಕಾ ಕಚೇರಿಯಲ್ಲಿ ಬರೆಯುತ್ತಿದ್ದ, ಪುಟ ನಿರ್ವಹಿಸುತ್ತಿದ್ದವರು, ಒಂದು ತಿಂಗಳ ಅವಧಿಯಲ್ಲಿ ಲೋಕಸಭಾ ಸದಸ್ಯರಾಗಿ ಆರಿಸಿ ಬರುತ್ತಾರೆ ಅಂದ್ರೆ ಅದೇನು ಸಣ್ಣ ಮಾತಲ್ಲ. ಈ ಕ್ಷೇತ್ರದ ಸಹವಾಸವೇ ಬೇಡ ಎಂದು ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಹಾಗೂ ಬಿಜೆಪಿ ಸರ್ಕಾರದಲ್ಲಿ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಬೇರೆ ಕ್ಷೇತ್ರಗಳನ್ನು ಆರಿಸಿಕೊಂಡರು. ಸಾಲದ್ದಕ್ಕೆ ಅದು ಮುಖ್ಯಮಂತ್ರಿಗಳ ಪ್ರಾಬಲ್ಯವಿರುವ ಕ್ಷೇತ್ರ. ಜತೆಗೆ ಮೂವರು ಮಂತ್ರಿಗಳ ಬೀಡು. ಅಲ್ಲಿ ಪ್ರತಾಪ್‌ಗೆ ಅನುಕೂಲವಾಗುವ ಯಾವುದೇ ಅಂಶಗಳೂ ಇರಲಿಲ್ಲ. ಅಲ್ಲದೇ ಪ್ರತಾಪ್ ಮೈಸೂರಿಗೆ ಹೊಸಬರು. ನಾಲ್ಕು ಬೀದಿಯ, ಎರಡು ರಸ್ತೆಯ ಹೆಸರೂ ಗೊತ್ತಿರಲಿಲ್ಲ. ಎಂಟು ಜನರ ಪರಿಚಯವೂ ಇರಲಿಲ್ಲ. ಆ ಊರಿನ ಒಡನಾಟ ಅಷ್ಟಕಷ್ಟೆ. ಅಂಥದ್ದರಲ್ಲಿ ಪ್ರತಾಪ್ ಧೈರ್ಯ ಮಾಡಿದ್ದಿದೆಯಲ್ಲ, ರಿಸ್ಕ್ ತೆಗೆದುಕೊಂಡಿದ್ದಿದೆಯಲ್ಲ ಅದು ಗ್ರೇಟ್.
ಈಗ ಅವರ ವಿಜಯವನ್ನು ಹಲವಾರು ರೀತಿಯಲ್ಲಿ ಅರ್ಥೈಸಬಹುದು. ಅದೇನೇ ಇರಲಿ, ಆದರೆ ಪ್ರತಾಪ್ ಒಬ್ಬ ಪತ್ರಕರ್ತನಾಗಿ ಚುನಾವಣೆ ಸೆಣೆಸಿದ್ದು ಹಾಗೂ ಗೆಲವು ಸಾಧಿಸಿದ್ದು ಅಸಾಧಾರಣ ಸಾಧನೆಯೇ. ಮೈಸೂರು-ಕೊಡಗು ಕ್ಷೇತ್ರದ ಜನತೆ ಪ್ರತಾಪ್ ಅವರನ್ನು ಸ್ವೀಕರಿಸಿ, ಗೆಲ್ಲಿಸಿದ್ದು ಅವರು ಇಷ್ಟು ವರ್ಷ ತಪಸ್ಸಿನಂತೆ ಮಾಡಿದ ಪತ್ರಿಕೋದ್ಯಮ ಸೇವೆಗೆ ಸಂದ ಗೌರವವೂ ಹೌದು.
ಪ್ರತಾಪ ಸಿಂಹಗೆ ರಾಜಕೀಯದಲ್ಲೂ ಯಶಸ್ಸು ಸಿಗಲಿ. ಅವರಿಂದ ಮೈಸೂರು -ಕೊಡಗು ಜನತೆಗೆ ಒಳ್ಳೆಯದಾಗಲಿ.
ತೆರೆದ ಪುಸ್ತಕದಂತೆ
ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿದ್ದ ಡಾ. ಮನಮೋಹನ ಸಿಂಗ್ ಶನಿವಾರ ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು. ಹೊಸ ಸರ್ಕಾರ ರಚನೆಯಾಗುವ ತನಕ ಈ ಹುದ್ದೆಯಲ್ಲಿ ಮುಂದುವರಿಯುವಂತೆ ರಾಷ್ಟ್ರಪತಿಯವರು ಅವರಿಗೆ ಸೂಚಿಸಿದರು. ಅದು ಸಂಪ್ರದಾಯ.
ಇದಕ್ಕೂ ಮುನ್ನ ರಾಷ್ಟ್ರವನ್ನುದ್ದೇಶಿಸಿ ಡಾ. ಸಿಂಗ್ ಮಾತಾಡಿದರು. ಈಗಾಗಲೇ ಅವರು ಮೂರು ಬಾರಿ ವಿದಾಯ ಭಾಷಣ ಮಾಡಿದ್ದರಿಂದ ಹೆಚ್ಚಿನ ಮಹತ್ವವೇನೂ ಇರಲಿಲ್ಲ. ಹಿಂದೆ ಹೇಳಿದ್ದನ್ನು ಬಿಟ್ಟರೆ ಅವರಿಗೆ ಇಂದು ಹೇಳಲು ಹೆಚ್ಚಿನ ವಿಷಯಗಳಿರಲಿಲ್ಲ. ಚುನಾವಣೆ ಫಲಿತಾಂಶದ ಬಗ್ಗೆ ಹೇಳಬಹುದಿತ್ತು. ಆದರೆ ಆ ಕುರಿತು ಅವರಿಂದ ನಿರೀಕ್ಷಿಸುವಂತಿರಲಿಲ್ಲ. ಅಧಿಕಾರದಲ್ಲಿದ್ದಾಗಲೇ ಮಾತಾಡದ ಆಸಾಮಿ, ಹೊರ ಹೋಗುತ್ತಿರುವ ಸಮಯದಲ್ಲಿ ಏನು ಮಾತಾಡಿಯಾರು? ಇತಿಹಾಸ ಅವರ ಬಗ್ಗೆ ಅವರ ಕೋರಿಕೆಯಂತೆ ಮೃದು ಧೋರಣೆ ತಳೆಯಬಹುದು.
'ಕಳೆದ ಹತ್ತು ವರ್ಷಗಳಲ್ಲಿ ದೇಶಸೇವೆಗೆ ಕೈಲಾದಷ್ಟು ಶ್ರಮಿಸಿದ್ದೇನೆ. ಭಾರತ ಈ ಅವಧಿಯಲ್ಲಿ ಅದ್ಭುತ ಸಾಧನೆ ಮಾಡಿದೆ. ದೇಶ ಬಲಿಷ್ಠವಾಗಿದೆ. ಜನತೆಯ ತೀರ್ಪನ್ನು ಗೌರವಿಸಲೇಬೇಕು. ನೂತನ ಸರ್ಕಾರಕ್ಕೆ ಒಳ್ಳೆಯದಾಗಲಿ' ಎಂದು ಡಾ. ಸಿಂಗ್ ಹೇಳಿದ್ದು ಸಂದರ್ಭೋಚಿತವಾಗಿತ್ತು.
ಡಾ. ಸಿಂಗ್ ತಮ್ಮ ಮಾತಿನಲ್ಲಿ, ಇನ್ನೊಂದು ಸಂಗತಿಯನ್ನು ಹೇಳಿದರು. ಅದೇನೆಂದರೆ, 'ಹತ್ತು ವರ್ಷಗಳ ನನ್ನ ಅಧಿಕಾರಾವಧಿ ಒಂದು ತೆರೆದ ಪುಸ್ತಕ ಇದ್ದಂತೆ' ಎಂದು.
ಅದಕ್ಕೆ ನಮ್ಮ ಸಹೋದ್ಯೋಗಿಯೊಬ್ಬರು ಪ್ರತಿಕ್ರಿಯಿಸಿದ್ದು-'ಹೌದೌದು. ಅದು ತೆರೆದ ಪುಸ್ತಕವೇ. ಆದರೆ ಎಲ್ಲ ಪುಟಗಳೂ ಖಾಲಿ ಖಾಲಿ.'


-ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com