ಬದುಕ ಬದಲಿಸುವುದ್ಹೇಗೆ?

Updated on: 

'ಆರಾಂ ಇದೀಯ ತಾನೆ? ಟ್ರಿಪ್ ಹೋಗಿ ಬಿಟ್ಯೋ ಹೇಗೆ? ಅಥವಾ ಟೈಫಾಯ್ಡ್, ಜಾಂಡೀಸ್ ಥರದ ತೊಂದ್ರೆ ಏನಾದ್ರೂ ಗಂಟು ಬಿತ್ತಾ? ಸಂಕೋಚವಿಲ್ಲದೆ ಹೇಳು. ನಿನ್ನ ಸಹಾಯಕ್ಕೆ, ರಕ್ಷಣೆಗೆ ನಾವೆಲ್ಲ ಇದ್ದೇವೆ...'. ಕಳೆದ ವಾರ ಅಂಕಣ ಬರೆಯಲಿಲ್ಲವಲ್ಲ: ಆನಂತರದಲ್ಲಿ ನನ್ನ ಮೊಬೈಲಿಗೆ ಬರುತ್ತಿರುವ ಸಂದೇಶಗಳಿವು. ಎಲ್ಲರ ಪ್ರೀತಿಯನ್ನೂ ಕಣ್ಣೊಳಗೆ ತುಂಬಿಕೊಂಡೇ ಹೇಳುತ್ತಿದ್ದೇನೆ: ನಾನು ಚೆನ್ನಾಗಿದ್ದೇನೆ. ಆರೋಗ್ಯವಾಗಿದ್ದೇನೆ, ಅದೇ ಸಂದರ್ಭದಲ್ಲಿ, ಬದುಕಿಗೆ ಬೆನ್ನು ತಿರುಗಿಸಿ ನಿಂತಿರುವ ಗೆಳತಿಯನ್ನು ಉಳಿಸಿಕೊಳ್ಳುವುದು ಹೇಗೆಂದು ಗೊತ್ತಾಗದೆ ಚಪಪಡಿಸುತ್ತಿದ್ದೇನೆ. ಉಹೂಂ, ನಾನಿನ್ನೂ ಬದುಕಿರಲಾರೆ ಎಂದು ಆಕೆ ಘೋಷಿಸಿದ್ದರಿಂದ, ಅವಳನ್ನು ಹೇಗಾದರೂ ಉಳಿಸಿಕೊಳ್ಳಬೇಕು ಎಂಬ ಆಸೆಯಿಂದ ಆಕೆಯ ರೂಂಗೆ ಹೋದವಳು, ಭರ್ತಿ 10 ದಿನ ಅಲ್ಲಿಯೇ ಉಳಿದುಬಿಟ್ಟೆ. ಇಷ್ಟಕ್ಕೂ, ನಡೆದದ್ದೇನೆಂದರೆ:
ಅವಳ ಹೆಸರನ್ನು ಶಾಂತಲಾ ಎಂದಿಟ್ಟುಕೊಳ್ಳಿ. ಈಕೆ ನನ್ನ ಕಾಲೇಜು ದಿನಗಳ ಸಹಪಾಠಿ. ಚಿಕ್ಕಮಗಳೂರಿನವಳು. ಬೋಲ್ಡ್ ಅಂಡ್ ದಿ ಬ್ಯುಟಿಫುಲ್ ಅನ್ನುತ್ತಾರಲ್ಲ; ಅಂಥ ಹಿನ್ನೆಲೆಯವಳು. ಅವಳಲ್ಲದೆ, ಅಕ್ಕ, ತಂಗಿ ಹಾಗೂ ತಮ್ಮ ಮನೆಯಲ್ಲಿದ್ದವರು. ಶಾಂತಲೆಗೆ, ಮೊದಲಿನಿಂದಲೂ ಸ್ವತಂತ್ರವಾಗಿ ಬದುಕಬೇಕೆಂಬ ಆಸೆಯಿತ್ತು. ಈ ಕಾರಣದಿಂದಲೇ  ಮನೆಯಲ್ಲಿ ಹಠ ಮಾಡಿ, ಊರಿಂದ ದೂರವಿದ್ದ ರೆಸಿಡೆನ್ಶಿಯಲ್ ಕಾಲೇಜಿಗೆ ಸೇರಿಕೊಂಡಳು. ಆ ಕಾಲೇಜಿನಲ್ಲಿ ವಿಪರೀತ ಶಿಸ್ತು. ಬೆಳಗಿಂದ ರಾತ್ರಿಯವರೆಗೂ ಅಲ್ಲಿ ಜಾರಿಯಲ್ಲಿದ್ದುದು ಒಂದೇ ನಿಯಮ- ಓದಬೇಕು, ಓದಬೇಕು, ಓದಬೇಕು!
ಮೊದಲ ವರ್ಷ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ಎರಡನೇ ವರ್ಷದ ಹೊತ್ತಿಗೆ, ಈ ಅತಿಯಾದ ಶಿಸ್ತು, ಶಾಂತಲೆಗೆ ಶಿಕ್ಷೆ ಎಂಬಂತೆ ಭಾಸವಾಯಿತು. ಮನೆಯಲ್ಲಿ, ತುಂಬಾ ಜಾಲಿ ಜಾಲಿ ಹುಡುಗಿಯಾಗಿ ಬೆಳೆದಿದ್ದ ಅವಳು, ವಿಪರೀತ ಶಿಸ್ತಿನಿಂದ  ಕಂಗಾಲಾದಳು. ಎರಡನೇ ವರ್ಷವನ್ನೂ ಅದೇ ಕಾಲೇಜಿನಲ್ಲಿ ಓದುವುದೆಂದು ಮೊದಲೇ ನಿರ್ಧರಿಸಿ, ಶುಲ್ಕವನ್ನೂ ಪಾವತಿಸಿದ್ದುದರಿಂದ ಆ ಕಾಲೇಜಿಗೆ ಗುಡ್‌ಬೈ ಹೇಳುವಂತೆಯೂ ಇರಲಿಲ್ಲ. ಇಂಥ ಸಂದರ್ಭದಲ್ಲಿ, ತನ್ನ ಮನದ ಪಿಸು ಮಾತುಗಳನ್ನು ಯಾರೊಂದಿಗಾದರೂ ಹೇಳಿಕೊಳ್ಳಬೇಕು, ತಾನು ಹೇಳಿದ್ದನ್ನೆಲ್ಲ ಕೇಳುವ ಆಪ್ತ ಜೀವವೊಂದು ಬೇಕು ಅನ್ನಿಸಿತು.
ಇಂಥ ಸಂದರ್ಭದಲ್ಲಿ ಅವಳಿಗೆ ಪರಿಚಯವಾದವನೇ ಭಾರ್ಗವ್. ಅವನು, ಶಾಂತಲೆಯ ಸಹಪಾಠಿ. ಹರೆಯದ ಹುಡುಗ-ಹುಡುಗಿಯನ್ನು ಏಳು ಸುತ್ತಿನ ಕೋಟೆಯಲ್ಲಿ ಬಿಟ್ಟರೂ ಅವರು ಅದು ಹೇಗೋ ಹೊರಹೋಗುವ ದಾರಿ ಕಂಡುಕೊಳ್ತಾರೆ ಎಂಬ ಮಾತಿದೆ. ಈ ಹುಡುಗ-ಹುಡುಗಿಯ ವಿಷಯದಲ್ಲೂ ಹಾಗೇ ಆಯಿತು. ಕಾಲೇಜಿನಲ್ಲಿ, ಎಲ್ಲರ ಕಣ್ತಪ್ಪಿಸಿ, ಇವರ ಕಣ್ಣುಗಳು ಕಲೆತವು. ಮನಸುಗಳು ಮಾತಾಡಿಕೊಂಡವು. ಹೊಸ ಗೆಳೆಯನ ಸಹವಾಸದಲ್ಲಿ ಈ ಹುಡುಗ ನವಿಲಾದಳು. ಕನಸಲೂ ನೀನೆ, ಮನಸಲೂ ನೀನೆ ಎಂದು ಪತ್ರ ಬರೆದಳು. ಅವನೊಂದಿಗೆ ಫೋಟೋ ತೆಗೆಸಿಕೊಂಡಳು. ರಜೆಗೆಂದು ಊರಿಗೆ ಬಂದಾಗ ಅದನ್ನು ಗುಟ್ಟಾಗಿ ತೋರಿಸಿ- ನಾನು ಮದುವೆ ಆಗುವ ಹುಡುಗ. ಐದು ವರ್ಷ ಕಳೆದ ಮೇಲೆ ಮದುವೆ. ಅಲ್ಲಿನ ತನಕ ಜೊತೇಲಿ ಓದೋದು ಅಂತ ತೀರ್ಮಾನಿಸಿದ್ದೇನೆ ಅಂದಳು. ಮುಂದೆ ಅವರಿಬ್ಬರೂ ಒಂದೇ ಕಾಲೇಜಿನಲ್ಲಿ ಎಂಜಿನಿಯರಿಂಗ್‌ಗೆ ಸೇರಿಕೊಂಡರು.
ಇಬ್ಬರೂ ಡಿಗ್ರಿ ಮುಗಿಸುತ್ತಿದ್ದಂತೆಯೇ ಈ ಮಧುರ ಪ್ರೇಮದಲ್ಲೂ ಅಪಸ್ವರ ಕೇಳತೊಡಗಿತು. ನಂತರದ ಕೆಲವೇ ದಿನಗಳಲ್ಲಿ ಅವರು ಬೇರೆ ಬೇರೆಯಾದರು. ಅದುವರೆಗೂ ಏನನ್ನೊ 'ಕಳೆದುಕೊಂಡು' ಗೊತ್ತಿರದಿದ್ದ ಶಾಂತಲಾ, ಈ ವಿಫಲ ಪ್ರೇಮದ ಶಾಕ್‌ನಿಂದ ಕಂಗಾಲಾದಳು. ಗೆಳೆಯನಿಲ್ಲದೆ ಬದುಕಲಾರೆ ಎಂದು ಚಡಪಡಿಸಲು ಆರಂಭಿಸಿದಳು. ಪರಿಸ್ಥಿತಿ ಎಲ್ಲಿಗೆ ಬಂತೆಂದರೆ ಹಳೆಯ ಗೆಳೆಯನನ್ನು ಮರೆಯಲಿಕ್ಕಾದರೂ ಒಬ್ಬ ಬಾಯ್‌ಫ್ರೆಂಡ್ ಬೇಕು ಎಂದು ಹೇಳಿಕೊಳ್ಳುವಂಥ ಸ್ಥಿತಿಗೆ ಬಂದು ಬಿಟ್ಟಳು ಶಾಂತಲಾ. ಈ ಸಂದರ್ಭದಲ್ಲಿಯೇ ಅವಳಿಗೆ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸವೂ ಸಿಕ್ಕಿತು.
     ಹೊಸ ಕೆಲಸ ಹಾಗೂ ಹೊಸ ಪರಿಸರದಿಂದ ಶಾಂತಲೆ ಹಳೆಯದನ್ನೆಲ್ಲ ಮರೆಯಬಹುದು ಎಂಬ ನಿರೀಕ್ಷೆ ಹಲವರಿಗಿತ್ತು. ಉಹುಂ, ಹಾಗಾಗಲಿಲ್ಲ. ಕಳೆದುಕೊಂಡದ್ದನ್ನು ಮತ್ತೆ ಮತ್ತೆ ಧ್ಯಾನಿಸುತ್ತಲೇ ಆಕೆ ಹೊಸದೊಂದು ಪ್ರೇಮದ ಕಡಲಿಗೆ ಬಿದ್ದಳು. ಈ ಬಾರಿ ಅವಳ ಮಗ್ಗುಲಲ್ಲಿ ನಿಂತವನು ಜಾರ್ಖಂಡ್ ಮೂಲದ ಹುಡುಗ. ಆತ ತುಂಬಾ ಸಭ್ಯನಂತೆ ವರ್ತಿಸುತ್ತಿದ್ದ. ಅತಿ ವಿನಯದ ಫೋಸ್ ಕೊಡುತ್ತಿದ್ದ. ಅದನ್ನೇ ಶಾಂತಲೆಗೆ ಹೇಳಿ-ಅವನು ಫ್ಲರ್ಟ್ ಥರಾ ಕಾಣಿಸ್ತಾನೆ. ಹುಶಾರಾಗಿರು. ಅವನನ್ನು ಜಾಸ್ತಿ ಹಚ್ಕೊಬೇಡ. ಆದಷ್ಟೂ ಅವಾಯ್ಡ್ ಮಾಡು ಎಂದೆಲ್ಲಾ ಬುದ್ಧಿ ಹೇಳಿದೆವು. ಈ ಹುಡುಗಿ ಕೇಳಲಿಲ್ಲ. ಮುಂದೆ ಏನಾಯಿತೆಂದರೆ, ಮೂರು ವರ್ಷಗಳ ಕಾಲ ಅವಳೊಂದಿಗೆ ಹೋಟೆಲು, ಸಿನಿಮಾ, ಪಿಕ್ನಿಕ್ ಎಂದು ಸುತ್ತಾಡಿದ 'ಅವನು' ಕಡೆಗೊಂದು ದಿನ ಸಣ್ಣದೊಂದು ಸುಳಿವನ್ನೂ ಕೊಡದೆ, ಬೆಂಗಳೂರು ಬಿಟ್ಟು ಜಾರ್ಖಂಡ್ ಸೇರಿಕೊಂಡ. ಸಂಪರ್ಕಿಸಲು ಪ್ರಯತ್ನಿಸಿದರೆ, ಮೊಬೈಲು ಸ್ವಿಚ್ ಆಫ್!
ಈ ಬಾರಿಯ ಹೊಡೆತದಿಂದ ಶಾಂತಲೆ ತತ್ತರಿಸಿ ಹೋದಳು. ನೇರವಾಗಿ ಊರಿಗೆ ಹೋಗಿ ತಂದೆಯ ತೆಕ್ಕೆಗೆ ಬಿದ್ದಳು. ನಡೆದದ್ದನ್ನೆಲ್ಲಾ ಹೇಳಿಕೊಂಡಳು. ನಾನು ಪಾಪಿ ಕಣಪ್ಪಾ ಎಂದು ಬಿಕ್ಕಳಿಸಿದಳು. ನನ್ನನ್ನು ಕೊಂದು ಬಿಡಪ್ಪಾ ಎಂದು ಪ್ರಾರ್ಥಿಸಿದಳು. ನಂತರದ ಒಂದೇ ತಿಂಗಳಲ್ಲಿ, ಕೊರಗಿ ಕೊರಗಿ ಕೊರಗಿ ಗುರುತೇ ಸಿಗದಂತೆ ಬದಲಾಗಿ ಹೋದಳು. ಮುದ್ದಿನ ಮಗಳಿಗೆ ಒದಗಿ ಬಂದ ಈ ದುರ್ಗತಿ ಕಂಡು ಶಾಂತಲೆಯ ತಂದೆಗೂ ಸ್ಟ್ರೋಕ್ ಆಯಿತು! ಅಷ್ಟೆ: ಆ ಮನೆಯಲ್ಲಿ ಎಲ್ಲರ ನೆಮ್ಮದಿಯೂ ಕದಡಿ ಹೋಯಿತು.
ಶಾಂತಲೆಗೆ ಇದು ಕನಸಲ್ಲೂ ನಿರೀಕ್ಷಿಸಿರದ ಶಾಕ್. ಛೆ, ಎಲ್ಲ ಅನಾಹುತಕ್ಕೂ ನಾನೇ ಕಾರಣಳಾದೆ. ನನ್ನಿಂದಾಗಿ ಎಲ್ಲರ ನೆಮ್ಮದಿಯೂ ನಾಶವಾಯಿತು. ಎಲ್ಲರ ಸಂಕಟಕ್ಕೂ ಕಾರಣಳಾದ ನಾನು ಬದುಕಿರಬಾರದು ಎಂದು ಪದೇ ಪದೆ ಹೇಳುತ್ತ ನನ್ನ ಶಾಂತಲೆ ಬೆಂಗಳೂರಿಗೆ ಬಂದು ಬಿಟ್ಟಿದ್ದಾಳೆ. ಹರೆಯದ ಆವೇಶದಲ್ಲಿ ಆಕೆ ತಪ್ಪು ಮಾಡಿರುವುದು ನಿಜ. ಆದರೂ ಈ ಗೆಳತಿಯ ಬದುಕು ಹಸನಾಗುವುದನ್ನು ನಾನು ನೋಡಬೇಕು. ಆಕೆ ಡಿಪ್ರೆಶನ್‌ನಿಂದ ಹೊರಬಂದು ಹೊಸಬದುಕು ಕಟ್ಟಿಕೊಂಡ ಕಥೆ, ಮತ್ತೆ ಕೆಲವು ನೊಂದ ಜೀವಗಳಿಗೆ ಸ್ಫೂರ್ತಿಯಾಗಬೇಕು ಎಂಬುದೆಲ್ಲಾ ನನ್ನಾಸೆ.
ಹೇಳಿ; ನನ್ನ ಶಾಂತಲೆಯನ್ನು ಡಿಪ್ರೆಶನ್‌ನಿಂದ ಹೊರತರುವುದಾದರೂ ಹೇಗೆ?


- ನಾನು ಪ್ರಣತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com