ದೇಶವಲ್ಲ ದ್ವೇಷ ಬಿಟ್ಟರೆ ಸಾಕು

ಸುದ್ದಿ ವಾಹಿನಿಯ ಪ್ಯಾನಲ್ ಡಿಸ್ಕಶನ್. ನರೇಂದ್ರ ಮೋದಿ ಸುನಾಮಿ ಕುರಿತು ಬಿರುಸಿನ ಚರ್ಚೆ. ಚರ್ಚೆಯಲ್ಲಿ ಕುಳಿತ ಚಿಂತಕರೊಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿಯವರಿಗೆ ಪ್ರಶ್ನೆ ಎಸೆದರು. 'ನಿಮ್ಮ ಮೆಚ್ಚಿನ ನಾಯಕಿ ಸೋನಿಯಾ ಗಾಂಧಿ ಎಂದು ಹೇಳಿಕೊಂಡಿದ್ದೀರಿ, ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದಿರಿ. ಭ್ರಷ್ಟಾಚಾರ ವಿರೋಧಿ, ವಂಶ ರಾಜಕಾರಣ ಇಲ್ಲದ ಆಮ್ಆದ್ಮಿ ಪಕ್ಷವನ್ನು ಬೆಂಬಲಿಸಬಹುದಿತ್ತಲ್ಲವೇ?'
(ಅನಂತಮೂರ್ತಿಗಳು ಇನ್ನೊಂದು ಸ್ಟುಡಿಯೋದಲ್ಲಿದ್ದ ಕಾರಣ ಪ್ರಶ್ನೆ ಕೇಳಿದವರು ಯಾರು ಎನ್ನುವುದು ಗೊತ್ತಾಗುತ್ತಿರಲಿಲ್ಲ)
'ನಿಮ್ಮ ಪ್ರಶ್ನೆಗೆ ನಾನು ಉತ್ತರ ಕೊಡಬಾರದು. ಏಕೆಂದರೆ, ಏನು ಉತ್ತರ ಕೊಟ್ಟರೂ ಸ್ವೀಕರಿಸುವ ಮನುಷ್ಯ ನೀವಲ್ಲ. ಆದರೂ ಹೇಳುತ್ತೇನೆ. ನಾನು ಕತ್ತೆ ಅಲ್ಲ, ಆಯಾ ಕಾಲದಲ್ಲಿ ಸತ್ಯ ಎಂದು ಅನಿಸುತ್ತದೆಯೋ ಸ್ಪಂದಿಸಿದ್ದೇನೆ. ಜನತಾ ಪರಿವಾರದಲ್ಲಿದ್ದಾಗ ಬಿಜೆಪಿಗೂ ಸ್ಪಂದಿಸಿದ್ದೆ. ನೀವು ಈಗ ಪಾರ್ಲಿಮೆಂಟ್ ಮೆಂಬರ್ ಆಗಿದ್ದೀರಿ ಇರಲಿ. ನನಗೆ ಚುನಾವಣೆಗೆ ನಿಲ್ಲಬೇಕು ಅಂದರೂ ಆರೋಗ್ಯ ಸರಿ ಇಲ್ಲ, ಈಗ ನಿಲ್ಲೋದಕ್ಕೂ ಆಗೋದಿಲ್ಲ!'
ನಿರೂಪಕರು ಕಕ್ಕಾಬಿಕ್ಕಿ. ಮೂರ್ತಿಗಳು ತಪ್ಪಾಗಿ ಅರ್ಥ ಮಾಡಿಕೊಂಡಿರುವುದು ಗೊತ್ತಾಯಿತು, 'ಇಂದ್ರಜಿತ್ ಲಂಕೇಶ್ ಮಾತನಾಡಿದ್ದು, ಅವರಿನ್ನು ಎಂಪಿ ಆಗಿಲ್ಲ' ಎಂದು ಸರಿಪಡಿಸಿದರು. 'ಹೋ ಅಯ್ಯೊ ನನಗೆ ಗೊತ್ತಾಗಿಲ್ಲ. ಇಂದ್ರಜಿತ್ ಇಷ್ಟು ಒರಟಾಗಿ ಮಾತನಾಡುತ್ತಾರೆ ಎಂದು ಎಣಿಸಿರಲಿಲ್ಲ' ಎಂದು ಕೊಂಚ ನಿರಾಳರಾದರು ಮೂರ್ತಿಗಳು.
ಹೀಗಾಗುವುದಕ್ಕೆ ಕಾರಣ ಇದೆ. ಮೈಸೂರಲ್ಲಿ ಪ್ರತಾಪ್ ಸಿಂಹ ಗೆದ್ದ ಸುದ್ದಿ ಸಾಹಿತ್ಯ ವಲಯದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದೇ ತಲೆಯಲ್ಲಿ ತುಂಬಿಕೊಂಡು ಕುಳಿತಿದ್ದ ಮೂರ್ತಿಗಳಿಗೆ ಇಂದ್ರಜಿತ್ ಕೇಳಿದ ಪ್ರಶ್ನೆ ಕಿವಿಗೆ ಪ್ರತಾಪಸಿಂಹ ಗರ್ಜನೆಯಂತೆ ಅಪ್ಪಳಿಸಿತ್ತು! ನಿನ್ನೆ ಮೊನ್ನೆಯ ಯುವಕ ಪ್ರತಾಪ್ ಸಿಂಹನಿಗೆ ನಮ್ಮಂಥ ಶ್ರೇಷ್ಠ ಸಾಹಿತಿಗಳು ಉತ್ತರ ನೀಡುವ ಅಗತ್ಯ ಇಲ್ಲ ಎಂಬುದನ್ನು ಹಿಂಬಾಲಕರ ಮೂಲಕ ಮೂರ್ತಿಗಳು ಅನೇಕ ಬಾರಿ ಹೇಳಿಸಿದ್ದರು. ಇದೀಗ ಸಿಂಹ ಗೆದ್ದು ಮೇಲ್ಮಟ್ಟಕ್ಕೆ ಹೋಗಿದ್ದಾನೆ, ನನಗೆ ಪ್ರಶ್ನೆ ಕೇಳುತ್ತಿದ್ದಾನೆ ಎಂಬ ಭಾವವೂ ಮೂರ್ತಿಗಳ ಉತ್ತರದಲ್ಲಿತ್ತು. ನನಗೆ ಚುನಾವಣೆಗೆ ನಿಲ್ಲಲು ಆರೋಗ್ಯ ಸರಿ ಇಲ್ಲ ಎಂದು ತುಲನೆ ಮಾಡುವ ಮೂಲಕ ಅಸಹಾಯಕತೆ ಹೊರ ಹಾಕಿದ್ದರು.
ಸಂಕೀರ್ಣ, ದ್ವಂದ್ವ, ಹುಡುಕಾಟದಲ್ಲಿಯೇ ಇರುವ (ಇದುವರೆಗೂ ಸಿಕ್ಕಿಲ್ಲ) ಮೂರ್ತಿಗಳ ದ್ವೇಷ ಪೂರಿತ ನುಡಿ ಮುತ್ತುಗಳನ್ನು ಒಮ್ಮೆ ಮೆಲುಕು ಹಾಕೋಣ. 2012 ಸೆ.15ರಂದು ಮಂಗಳೂರಲ್ಲಿ ಅನಂತಮೂರ್ತಿಗಳು 'ಮೋದಿ ಕ್ರೂರಿ. ಆತ ಪ್ರಧಾನಿ ಆಗಲೇಬಾರದು. ಮೋದಿಯನ್ನು ಅಸ್ಪೃಶ್ಯರಂತೆ ಕಾಣಬೇಕು. ಮೋದಿಯನ್ನು ಬೆಂಬಲಿಸುವ ಜನರು ಮೂರ್ಖರು' ಎಂದರು. ಇದಾದ ಒಂದು ವರ್ಷದ ಬಳಿಕ ಬರಗೂರು ರಾಮಚಂದ್ರಪ್ಪ ಅವರ ಕೃತಿ ಬಿಡುಗಡೆ ಸಮಾರಂಭದಲ್ಲಿ 'ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ' ಎಂದರು. ಬಳಿಕ ಆಡ್ವಾಣಿ ಪ್ರಧಾನಿಯಾಗಲಿ ಎಂದು ತಿದ್ದುಪಡಿ ಮಾಡಿದರು. ಈಗ ಮೋದಿ ಗೆದ್ದಾಗ ಇಷ್ಟೊಂದು ಬಹುಮತ ಬರಬಾರದಿತ್ತು ಎಂದು ಖೇದ ವ್ಯಕ್ತಪಡಿಸಿದರು. ಹೊಟ್ಟೆ ಉರಿ ತಡೆಯಲಾಗದೆ 'ಮೋದಿ ದೇಶದ ವೈವಿಧ್ಯ ನಾಶ ಮಾಡಲು ಹೊರಟರೆ 8-10 ದಿನದಲ್ಲಿಯೇ ಪೆಟ್ಟು ತಿನ್ನುತ್ತಾರೆ' ಎಂದು ಹಿಡಿ ಶಾಪ ಕೂಡಾ ಹಾಕಿದರು.
ಯಾವುದೇ ಖಚಿತ ದಾಖಲೆ ಇಲ್ಲದೆ ಮೋದಿ ಮೇಲೆ ಏಕೆ ಇಷ್ಟೊಂದು ಆಕ್ರೋಶ, ದ್ವೇಷ? ಗುಜರಾತ್ ಕೋಮು ಗಲಭೆಯಲ್ಲಿ ಮೋದಿ ಕೈವಾಡ ಇಲ್ಲ ಎಂದು ಕೋರ್ಟ್ ಕ್ಲೀನ್ಚಿಟ್ ನೀಡಿದೆ. ಇದೀಗ ಜನರೂ ಕ್ಲೀನ್ ಚಿಟ್ ನೀಡಿದ್ದಾರೆ. ಕಾಳಜಿ, ಆತಂಕ ಎಂದು ಹೇಳಿಕೊಂಡು ನೀವು ಭಾರತದ ಸಂವಿಧಾನ, ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವುದಿಲ್ಲವೇ? ಮೋದಿ ನಿಜವಾಗಿಯೂ ಅಲ್ಪಸಂಖ್ಯಾತರ ವಿರೋಧಿ ಆಗಿದ್ದರೆ ಗುಜರಾತ್ನಲ್ಲಿ ಮೂರು ಬಾರಿ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಗುಜರಾತ್ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿಯೂ ವಿಧಾನಸಭೆಯಲ್ಲಿ ಮೋದಿ ಗೆದ್ದು ದಾಖಲೆ ಮಾಡಿದ್ದರು. ಈ ಉದಾಹರಣೆಗಳ ಮೂಲಕ ಮುಸ್ಲಿಮರೂ ಮೋದಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರೂ ಒಪ್ಪದೆ ಮೂರ್ತಿ ಮತ್ತು ಬೆಂಬಲಿಗರು ವಾದದ ಮೇಲೆ ವಾದ ಮಂಡಿಸಿದರು.
ಮೊನ್ನೆ ಮೋದಿ, ಮದನ್ ಮೋಹನ್ ಮಾಳವೀಯ, ಅಂಬೇಡ್ಕರ್ ಪ್ರತಿಮೆಗೆ ಹಾರ ಹಾಕಿದ್ದಕ್ಕೆ ಸಿಕ್ಯುಲರ್ಗಳು ಪ್ರತಿಮೆ ಶುದ್ಧ ಮಾಡಿದರು. ಅಂಬೇಡ್ಕರ್ ಅವರನ್ನು ಸರ್ವ ಜನಾಂಗದ ನಾಯಕರು ಎಂದು ಒಪ್ಪಿಕೊಳ್ಳಬೇಕು ಎಂದು ಹೇಳುವವರೂ ಇವರೇ, ಹಾರ ಹಾಕಿದಾಗ ಅಂಬೇಡ್ಕರ್, ಪಟೇಲ್ ನಮ್ಮ ಆಸ್ತಿ, ಮುಟ್ಟುವಂತಿಲ್ಲ ಎಂದು ಹಿಟ್ಲರ್ ಬುದ್ಧಿ ತೋರಿಸುವವರೂ ಇದೇ ಸಂಕುಚಿತ ಮನಸ್ಕರು. ಇವರದೇ ಜಾತಿ ಆಧಾರಿತ ವಿಶ್ಲೇಷಣೆ ನಡೆಸುವುದಾದರೆ, ಹಿಂದುಳಿದ ವರ್ಗದಿಂದ ಬಂದು, ಉತ್ತರ ಪ್ರದೇಶದಲ್ಲಿ ಕೆಳವರ್ಗದವರ ಮತ ಪಡೆದು ಪ್ರಧಾನಿಯಾಗಲಿರುವವರನ್ನು ದೂಷಿಸುವುದು 'ಮನುವಾದಿ' ಮನಸ್ಥಿತಿಯಾಗುವುದಿಲ್ಲವೇ?
ಕಾರ್ಪೊರೇಟ್ ಹುದ್ದೆ ಸೇರಿದಾಗ ಸೋಶಿಯಲಿಸಂಗೆ ತಿಲಾಂಜಲಿ ಇಟ್ಟೆ ಎನ್ನುವ ನೀಲೆಕಣಿಯನ್ನು ಬೆಂಬಲಿಸುವಾಗ ಕಾರ್ನಾಡ್, ಮೂರ್ತಿಯವರಿಗೆ ಸಾಕ್ಷಿಪ್ರಜ್ಞೆ (ಅವರದೇ ಭಾಷೆಯಲ್ಲಿ) ನೆನಪಾಗಲಿಲ್ಲವೇ? ಇದೇ ನೀಲೇಕಣಿ ಮೋದಿಯ ಗುಜರಾತ್ ಅಭಿವೃದ್ಧಿ ಕುರಿತು 'ಇಮ್ಯಾಜಿನಿಂಗ್ ಇಂಡಿಯಾ' ಕೃತಿಯಲ್ಲಿ ಹೊಗಳಿ ಬರೆಯುತ್ತಾರೆ, ಕಾಂಗ್ರೆಸ್ ಆಡಳಿತವನ್ನು ಟೀಕಿಸಿ ಬರೆಯುತ್ತಾರೆ. ಈಗ ಮುಸ್ಲಿಮರು ಹೆದರಿಕೆಯಿಂದ ಬದುಕುತ್ತಿದ್ದಾರೆ. ವೈವಿಧ್ಯ ನಾಶವಾಗುತ್ತದೆ ಎಂಬಿತ್ಯಾದಿ ತಥಾಕಥಿತ ಸುಳ್ಳುಗಳನ್ನು ಪೋಣಿಸಿ ಪೊಳ್ಳು ಆರೋಪ ಮಾಡಿದ್ದೇ ಮಾಡಿದ್ದು. ಉತ್ತರ ಪ್ರದೇಶದ 80 ಕ್ಷೇತ್ರಗಳಲ್ಲಿ 29 ಕ್ಷೇತ್ರಗಳು ಮುಸ್ಲಿಂ ಬಾಹುಳ್ಯ. ಇವುಗಳನ್ನು ಗೆದ್ದ ಮೋದಿ ಸಿಕ್ಯುಲರ್ಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ.
ಮೋದಿ ಪ್ರಧಾನಿಯಾದರೆ ನಾಗರಿಕತೆ ಸರ್ವನಾಶವಾಗಲಿದೆ, ಪತ್ರಿಕೆಗಳು ಮೋದಿ ಸುದ್ದಿ ಪ್ರಕಟಿಸುವಾಗ ಮೋದಿ ಫೋಟೋ ಹಾಕಬೇಡಿ ನನಗೆ ಉರಿಯುತ್ತದೆ ಎಂದು ಹೇಳಿಕೆ ನೀಡಿದ್ದರು. ವಿಪರ್ಯಾಸ ನೋಡಿ! ಮತದಾನ ದಂದು ಮತಗಟ್ಟೆ(ಶಾಲೆ, ಕಾಲೇಜ್) ಜ್ಞಾನಪೀಠಪ್ರಶಸ್ತಿ ಪಡೆದ ಮೂರ್ತಿ ಮತ್ತು ಕಾರ್ನಾಡರ ಚಿತ್ರ ತೆಗೆಯಲಾಗಿತ್ತು. ಇನ್ನು ಮುಂದೆ ಮುಖ್ಯಮಂತ್ರಿಯಿಂದ ಹಿಡಿದು ಸರ್ಕಾರಿ ಕಚೇರಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಫೋಟೋ ಹಾಕಲೇಬೇಕು. ಮೂರ್ತಿಗಳು ಈಗ ಸರ್ಕಾರಿ ಕೃಪಾಪೋಷಿತ ವಾತಾವರಣದಲ್ಲಿಯೇ ಹೆಚ್ಚಿನ ಬದುಕು ಸಾಗುತ್ತಿರುವುದರಿಂದ ಮೋದಿ ಚಿತ್ರ ನೋಡುವುದು ಅನಿವಾರ್ಯ. ನರಹಂತಕ ಎಂದು ಮೋದಿಗೆ ಜರೆದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ತಮ್ಮ ಕಚೇರಿಯಲ್ಲಿ ಮೋದಿ ಫೋಟೋ ಹಾಕಿಸಿಕೊಳ್ಳುವ ಅನಿವಾರ್ಯ ಬಂದಿದೆ. ಗೆದ್ದರೆ ಮೋದಿಯನ್ನು ಅವರ ಪತ್ನಿಯನ್ನು ಒಟ್ಟುಗೂಡಿಸುತ್ತೇನೆ ಎಂದು ಹೇಳಿ ಹಾಸ್ಯಕ್ಕೀಡಾದ ಜರ್ನಾದನ ಪೂಜಾರಿಯೂ ನಾಲಿಗೆಯಿಂದಲೇ ಸ್ವರ್ಗ, ನರಕ ಎಂಬ ಮಹತ್ವ ತಿಳಿದುಕೊಂಡಿರಬಹುದು. ಆದರೆ ದೇವೇಗೌಡರು ಬುದ್ಧಿವಂತರು, ದೇಶ ಬಿಡುವುದಾಗಿ ಹೇಳದೆ ಕರ್ನಾಟಕ ಬಿಡುತ್ತೇನೆ ಎಂದು ಹೇಳಿ ಬಚಾವ್ ಆಗಿದ್ದಾರೆ!
ಅದೇನೇ ಇರಲಿ, ಅನಂತಮೂರ್ತಿ ಅವರು ಬಾಯಿ ತಪ್ಪಿ ದೇಶ ಬಿಡುವ ಮಾತು ಹೇಳಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಮೂರ್ತಿಯವರಿಗೆ ಕೊಡಬಹುದಾದ ಸಲಹೆ ಎಂದರೆ ಈ ವಯಸ್ಸಿನಲ್ಲಿ ಮನಸ್ಸಲ್ಲಿ, ಹೃದಯದಲ್ಲಿ ದ್ವೇಷ ಬಿಟ್ಟು ಬಿಡಿ. ಇದರಿಂದ ಆರೋಗ್ಯವೂ ಹಾಳು. ಆರೋಗ್ಯದ ಖರ್ಚಿಗೆ ಸರ್ಕಾರದಿಂದ ಹಣ ದೊರಕಿಸಿಕೊಳ್ಳುವ ಹಿಕ್ಮತ್ತು ನಿಮಗೆ ಗೊತ್ತಿರಬಹುದಾದರೂ ಅನುಭವಿಸುವುದು ನಿಮ್ಮ ದೇಹವೇ ಅಲ್ಲವೇ? ಹೀಗಾಗಿ ಬದಲಾಗಿರುವ ಕಾಲಘಟ್ಟವನ್ನು ಸಹನೆಯಿಂದ ನೋಡುವ ರೂಢಿ ಒಳ್ಳೆಯದು.
ಜನಪ್ರಿಯ ಸಾಹಿತಿಗಳು ಮೇಲೋ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು ಮೇಲೋ ಎಂಬ ವಿಚಾರ ಕುರಿತು ಮಡಿಕೇರಿ ಸಾಹಿತ್ಯ ಸಮ್ಮೇಳನ ಚರ್ಚೆಯನ್ನೇ ಹುಟ್ಟಿ ಹಾಕಿತ್ತು. ಕಾರಂತ, ತೇಜಸ್ವಿ, ಭೈರಪ್ಪ ಓದುಗರಿಗೆ ಅಚ್ಚುಮೆಚ್ಚು. ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ ಪುಸ್ತಕಗಳಿಗೆ ಬೇಡಿಕೆ ಹೆಚ್ಚು. ಕಾರ್ನಾಡ್ ಅನಂತಮೂರ್ತಿ ಪುಸ್ತಕ ಕೊಳ್ಳುವವರೇ ಇಲ್ಲ ಎಂಬೆಲ್ಲ ವಾಸ್ತವ ಸ್ಥಿತಿ ಬಿಂಬಿಸುವ ವರದಿ 'ಕನ್ನಡಪ್ರಭ'ದಲ್ಲಿ ಪ್ರಕಟವಾಗಿತ್ತು. ಹೆಚ್ಚು ಕೃತಿಗಳು ಮಾರಾಟವಾದರೆ ಆತ ಶ್ರೇಷ್ಠ ಸಾಹಿತಿ ಎನ್ನಲು ಸಾಧ್ಯವಿಲ್ಲ ಎಂದು ನಾ ಡಿಸೋಜ ಚುಚ್ಚುವ ಮೂಲಕ ಈ ವಿಚಾರ ಹೆಚ್ಚು ದಿನ ಚರ್ಚೆಯಲ್ಲಿತ್ತು.
ಈ ಚರ್ಚೆ ಮುಂದುವರಿದ ಭಾಗವಾಗಿ ಮೋದಿಯನ್ನು ಸಾಹಿತಿ ಎಸ್.ಎಲ್. ಭೈರಪ್ಪ ಬೆಂಬಲಿಸಿದರು. ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಫಲಿತಾಂಶ ಪ್ರಕಟವಾಗಿದೆ. ನರೇಂದ್ರ ಮೋದಿ ಗೆದ್ದಿದ್ದಾರೆ. ಜ್ಞಾನಪೀಠಿಗಳು ಬೆಂಬಲಿಸಿದ ಅಭ್ಯರ್ಥಿಗಳು ಸೋತು ಹೋಗಿದ್ದಾರೆ. ಪ್ರತಾಪ್ ಸಿಂಹ ಕೃತಿಗಳಿಗೆ ಬೇಡಿಕೆ ಇರುವುದರ ಜತೆಗೆ ಜನಪ್ರಿಯರು ಎನ್ನುವುದನ್ನು ಫಲಿತಾಂಶ ಸ್ಪಷ್ಟಪಡಿಸಿದೆ.
- ಜಿತೇಂದ್ರ ಕುಂದೇಶ್ವರ, ಕನ್ನಡಪ್ರಭ
kundeshwara@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


