ಏಕಾದಶಿಯ ವೈಶಿಷ್ಟ್ಯ ಹನ್ನೊಂದು ಇಂದ್ರಿಯಗಳಿಗೆ ಸಂಬಂಧಿಸಿದ್ದು. ಐದು ಕರ್ಮೇಂದ್ರಿಯ, ಐದು ಙ್ಞಾನೇಂದ್ರಿಯಗಳೊಟ್ಟಿಗೇ ಮನಸ್ಸೂ ಸೇರಿ ಹನ್ನೊಂದು ಇಂದ್ರಿಯಗಳಿಗೆ ಉಪವಾಸ ಮಾಡಿಸುವುದು. ಉಪವಾಸವೆಂದರೆ ಊಟ ಮಾಡದ್ದು, ಆಹಾರ ಸೇವಿಸದ್ದು, ಎಂಬುದು ಪರಿಧಿ ನಿರೂಪಣೆ. ಅಂದು ಅಲ್ಪಾಹಾರ-ಮಿತಾಹಾರ ಅಪೇಕ್ಷಣೀಯ. ಬಟ್ಟಲುಪ್ಪಿಟ್ಟು ತಿಂದು, ಲೋಟ ಲೋಟ ಖೀರು ಕುಡಿದು, ಗೊನೆ ಗೊನೆ ಹಣ್ಣನ್ನು ಮುಗಿಸುವುದನ್ನು ಉಪವಾಸ ಎಂದು ಕರೆಯುವುದಿಲ್ಲ. ಅಂತೆಯೇ ತೊಟ್ಟು ನೀರೂ ಕುಡಿಯದೇ ಜೀವಾತ್ಮನನ್ನು ಹಿಂಸಿಸುವುದೂ ಉಪವಾಸವಲ್ಲ. ಕಡಿಮೆ ಸ್ವೀಕರಿಸಿ, ಮನಸ್ಸಿನಲ್ಲಿ ವಿಷ್ಣುವನ್ನು ಕೇಂದ್ರೀಕರಿಸುವುದು ಅಪೇಕ್ಷಣೀಯ. ಕಣ್ಣು ನೋಡುವುದು ವಿಷ್ಣುಮೂರ್ತಿಯನ್ನು, ಕಿವಿ ಕೇಳುವುದು ಹರಿ ಕೀರ್ತನೆಯನ್ನು, ಬಾಯಿ ನುಡಿಯುವುದು ಮಾಧವ ಮಂತ್ರವನ್ನು.... ಹೀಗೆ ಸರ್ವವೂ ನಾರಾಯಣ ಮಯವಾದರೆ ಅದು ಏಕಾದಶಿ ವ್ರತಾಚರಣೆ. ಬೆಳಿಗ್ಗೆಯಿಂದ ಸಂಜೆಯ ವರೆಗೆ ವೃತ್ತಿ ನಿರತರಾಗಿದ್ದು ಗೆಳೆಯರೊಡನೆ ಹರಟೆ-ಕಿತ್ತಾಟದಲ್ಲಿದ್ದು, ಊರೆಲ್ಲ ಸುತ್ತುತ್ತಿದ್ದು.... ಇಷ್ಟೆಲ್ಲ ದೈನಂದಿನ ಕ್ರಿಯೆಗಳಲ್ಲೇ ಮಗ್ನವಾಗಿದ್ದು, ಕೇವಲ ಊಟ ಮಾಡುವುದಿಲ್ಲ ಎಂಬುದು ಉಪವಾಸದ ಉದ್ದಿಶ್ಯ ಸಾಧನೆ ಅಲ್ಲ. ಹೀಗೆ ಏಕಾದಶ ಇಂದ್ರಿಯಗಳಿಗೂ ನಿಜವಾದ ಉಪವಾಸ ಮಾಡಿಸುತ್ತಿದ್ದ ಮಹಾರಾಜ ಅಂಬರೀಶ. ಅವನ ದೀಕ್ಷೆಯ ಪರೀಕ್ಷೆಗೆ ಬಂದು, ಅವನನ್ನು ಕದಲಿಸುವ ನಾಟಕವಾಡಿ, ನಿಜಭಕ್ತನನ್ನು ನಾರಾಯಣ ಸಲಹುವನೆಂದು ವಿಶ್ವಕ್ಕೆ ಸಾರಿದ ಮಹಾನುಭಾವರೇ ರುದ್ರಾಂಶ ಸಂಭೂತ ದೂರ್ವಾಸರು.