ಪುರುಷೋತ್ತಮನ ಪುಣ್ಯಾವತಾರ !!

ಅಂದು ಏನೋ ಉತ್ಸಾಹ! ಏನೋ ಲಗುಬಗೆ! ಏನೋ ಕಾತುರ! ಏನೋ ನಿರೀಕ್ಷೆ! ಏನೋ ಏನೋ!? ವಸಂತದ ಉಲ್ಲಾಸ! ಹಿಂದಿನ ವರ್ಷಗಳಿಗಿಂತ ಅಧಿಕ ಬೆಳೆ! ಮನೆಗಳಲ್ಲೆಲ್ಲ ಧಾನ್ಯಗಳ ರಾಶಿ! ಪಶು ಸಂಪತ್ತಿನ ವೃದ್ಧಿ! ಸಮೃದ್ಧಿಯ ಡಂಗುರ.
ಪುರುಷೋತ್ತಮನ ಪುಣ್ಯಾವತಾರ !!
ಪುರುಷೋತ್ತಮನ ಪುಣ್ಯಾವತಾರ !!
Updated on: 
ಅಂದು ಏನೋ ಉತ್ಸಾಹ! ಏನೋ ಲಗುಬಗೆ! ಏನೋ ಕಾತುರ! ಏನೋ ನಿರೀಕ್ಷೆ! ಏನೋ ಏನೋ!? ವಸಂತದ ಉಲ್ಲಾಸ! ಹಿಂದಿನ ವರ್ಷಗಳಿಗಿಂತ ಅಧಿಕ ಬೆಳೆ! ಮನೆಗಳಲ್ಲೆಲ್ಲ ಧಾನ್ಯಗಳ ರಾಶಿ! ಪಶು ಸಂಪತ್ತಿನ ವೃದ್ಧಿ! ಸಮೃದ್ಧಿಯ ಡಂಗುರ. 
ನದಿಗಳು ತುಂಬಿ ಹರಿಯುತ್ತಿವೆ; ಆದರೆ ಆರ್ಭಟವಿಲ್ಲ, ರಭಸವಿಲ್ಲ, ಮಂಜುಳ ನಿನಾದ, ಮಂದಗಮನೆಯ ಯಮುನೆ, ಸಂಗೀತ ಗಂಗೆ, ಗಾಳಿಯಲ್ಲೆಲ್ಲ ಏನೋ ಸುವಾಸನೆ. ಯಾವು ಯಾವುದೋ ಹೂಗಳ ಮಿಶ್ರ ಮಧುರ ಸುಗಂಧ. ಬೀಸುವ ಗಾಳಿಯೂ ಮಂದಾನಿಲ. ಮುಂಗುರುಳುಗಳನ್ನು ಬಳುಕಿಸುತ್ತ, ಬಳ್ಳಿಗಳಲ್ಲಿ ಓಲಾಡುತ್ತ, ಎಲೆಗಳಲ್ಲಿ ನುಣುಪಾಗಿ ತೂರುತ್ತ, ತಾಗಿದವನಿಗೆ ತನ್ಮಯತೆಯನ್ನು ತಿನಿಸುತ್ತ, ಸಂಚರಿಸುತ್ತಿರುವ ವಾಯು. ವಾಯುಪುತ್ರನಿಗೆ ಅಂದೇಕೋ ಮುಂಜಾವಿನಿಂದ ಧ್ಯಾನ ಸ್ಥಿತಿ. 
ಅಂದೇನೋ ತನಗೆ ಹಿತವಾಗುವ ಎಲ್ಲ ಭಾವನೆ. ತನಗೆ ಅತ್ಯಂತ ಆಪ್ತರಾದ, ಆಗಾಗ್ಗೆ ತನ್ನ ಧ್ಯಾನದಲ್ಲಿ ಕಾಣುತ್ತಿದ್ದ ವ್ಯಕ್ತಿಯ ಆಗಮನದ ಅಂಕುರ! ಆದರೆ ವಾಲಿ ಅಂದೆದ್ದು ಹೊರಬರುತ್ತಿದ್ದಂತೆಯೇ ಮುಗ್ಗರಿಸಿದ! ಪಾದ ಊರಿದರೆ ಸಾಕು, ಕಲ್ಲೇ ಪುಡಿಯಾಗುತ್ತಿರುವಾಗ ಇಂದು ಜಾರಿ ಬಿದ್ದಿದ್ದ! ಛೆ! ಎಂತಹ ಅಪಶಕುನ, ಬಾಯಿ ತೊದಲಿತು.
ಹಾಗೇ ಅಪಶಕುನವಾಗಿದ್ದು ದಶಕಂಠನಿಗೆ. ಅಂದವನು ಮಾಡುತ್ತಿದ್ದುದು ಒಂದು ಅಭಿಚಾರ ಕ್ರಿಯೆ. ಪೂರ್ಣಾಹುತಿಯ ಹೊತ್ತಿಗೆ ಕಾಡು ಕೋಣ ಒಂದರ ಬಲಿ ಕೊಡಬೇಕಿತ್ತು. ದಷ್ಟ ಪುಷ್ಟವಾಗಿದ್ದ ಕೋಣದ ಕುತ್ತಿಗೆಗೆ ಇನ್ನೇನು ಚೂಪು ಕತ್ತಿ ಬಂದಿಳಿಯಬೇಕು. ಗಾಳಿಯಲ್ಲಿ ಹಾರುತ್ತಿದ್ದ ಗರುಡ ಕ್ಷಣಮಾತ್ರ ದಶಕಂಠನ ತಲೆ ಸವರಿ ಹಾರಿ ಹೋಯಿತು. ತಬ್ಬಿಬ್ಬು. ದಶಗ್ರೀವನ ಕೈ ಅಲುಗಿತು. ಕೋಣ ಕೊಸರಾಡಿ ಓಡಿ ಹೋಯಿತು. ಅನಂತರ ಆಳುಗಳು ಹಿಡಿದು ತಂದರೂ, ಆ ಬಲಿಯ ಮುಹೂರ್ತ ಮೀರಿ ಹೋಗಿ ರಾವಣನ ಅಪೇಕ್ಷೆ ಈಡೇರದೆ ಮನಸ್ಸು ಕೆಟ್ಟು ಹೋಯಿತು. ಅವನ ತಮ್ಮ ಕುಂಭಕರ್ಣನಿಗೆ ಕನಸಿನಲ್ಲಿ ಎಂತಹುದ್ದೋ ವಿಕಸಿತ ಹಾರ ಕೊರಳಿಗೆ ಬಂದು ಬಿದ್ದಂತೆ. ಅವನ ತಮ್ಮ ವಿಭೀಷಣನಿಗೆ ಧ್ಯಾನ ಮಾಡುತ್ತಿದ್ದಾಗ ನೀಲ ಕಾಂತಿಯೊಂದು ಮನಸ್ಸನ್ನು ಆವರಿಸಿ ನೆಮ್ಮದಿ ನೀಡಿದಂತೆ. ಆದರೆ ಅವನ ತಂಗಿ ಶೂರ್ಪಣಖೆಗೆ ಮಾತ್ರ ಏಕೋ ಬೆಳಗ್ಗಿನಿಂದ ಉಸಿರಾಡಲು ಕಷ್ಟ! ಕಿವಿಯಲ್ಲಿ ಉರಿ-ಉರಿ! ಉರಿಬೇಸಗೆ ಇರಬಹುದಾದರೂ, ಅಯೋಧ್ಯೆಯಲ್ಲಿ ಹಿತಮಿತ ಸೂರ್ಯಸ್ಪರ್ಶ. ಹಿಂದಿನ ದಿನವಿದ್ದ ನಡು ಸೂರ್ಯ, ಇಂದು ಮಾಗಿಯ ಬಿಸುಪಾಗಿದ್ದಾನೆ. ಎಲ್ಲರಿಗೂ ಹಿತ . ವಿರಳ ಜನರ ಲಘು ನಡಿಗೆ. ದಾರಿಯಲ್ಲಿ ಧೂಳೇ ಇಲ್ಲ. ಮನೆಯ ಮುಂದಿನ ಹಸೆಗಳಲ್ಲಿ ಹಂಸ, ಕಾಮಧೇನು, ಆದಿಶೇಷ, ಜಿಂಕೆ, ಗರುಡ...ಇತ್ಯಾದಿ ಆಕರ್ಷಕ ರಂಗೋಲಿ. 
ದೇಗುಲಗಳಲ್ಲಿ ವಿಶೇಷ ಪೂಜೆಗಳು. ಎಲ್ಲ ದೇವತಾ ವಿಗ್ರಹಗಳಲ್ಲೂ ಅಂದು ವಿಶೇಷ ಆಕರ್ಷಣೆ. ದೇವರುಗಳು ಎದ್ದು ಬಂದರೋ ಎಂಬಂತೆ. ಅಲ್ಲಲ್ಲಿ ನಡೆಯುತ್ತಿರುವ ಯಙ್ಞಗಳು; ಅದರಲ್ಲಿ ಧೂಮ ರಹಿತ ಅಗ್ನಿ ಪ್ರಜ್ವಾಲ್ಯ. ಹಳದಿ ಬಣ್ಣದ ಜ್ವಾಲೆಗಳು. ಯಜಮಾನ ಮಾಡುತ್ತಿರುವ ಯಙ್ಞದ ಅಧಿ ದೇವತೆಯ ಆಕಾರ ಯಙ್ಞಾಙ್ಞಿಯಲ್ಲಿ! ಒಟ್ಟಿಗೇ, ಬೃಹತ್ ಯಙ್ಞಗಳು ನಡೆಯುತ್ತಿವೆ ಅರಮನೆಯಲ್ಲಿ. ರಾಣಿಯರು ಮೂವರಿಗೂ ದಿನ ತುಂಬುತ್ತಿದೆ, ಹೆರಿಗೆ ನೋವು ಸಹಜ, ಇಲ್ಲಿಲ್ಲ! ಯಾರೊಬ್ಬರಿಗೂ ಹೊಟ್ಟೆ ನೋಯಲಿಲ್ಲ.
ಬಾಯಾರಿಕೆಯಿಂದ ಗಂಟಲೊಣಗಿಲ್ಲ; ಆಯಾಸದ ಬೆವರೊಡೆಯಲಿಲ್ಲ. ಭಾರವಿರಬಹುದಾದ ಉದರ ಅತ್ಯಂತ ಹಗುರ. ಸೂಲಗಿತ್ತಿಯರು ನಿಷ್ಕ್ರಿಯರಾಗಿದ್ದಾರೆ. ಅಚ್ಚರಿಗೊಂಡಿದ್ದಾರೆ. ಅವರ ಲೆಕ್ಕಾಚಾರದಂತೆ ಇನ್ನೇನು ಪ್ರಸವವಾಗಬೇಕು, ಆದರೆ ಯಾರೂ ನರಳುತ್ತಿಲ್ಲ; ಒದ್ದಾಡುತ್ತಿಲ್ಲ; ಸುಸ್ತಾಗುತ್ತಿಲ್ಲ! 
ದಶರಥ ಕಾತುರದಿಂದಿದ್ದಾನೆ, ಏನಾಗುತ್ತದೋ ಎಂದಲ್ಲ. ಮಕ್ಕಳು ಹೇಗಿರುತ್ತಾರೆ? ಸುಂದರವಾಗಿಯೇ ಇರುತ್ತಾರೆ. ಯಾವ ಹೆಂಡತಿಗೆ ಮೊದಲು ಮಗು ಹುಟ್ಟಬಹುದು? ಕೈಕೆಗೋ? ಛೆ ಛೆ! ಇರಲಾರದು, ಹಾಗಾಗಬಾರದು. ಕೌಸಲ್ಯೆಗೆ ಮೊದಲು ಪ್ರಸವವಾಗಬೇಕು. ಆಗಲೇ ಬೇಕು. ಪಟ್ಟದ ರಾಣಿಯಲ್ಲವೆ? ಪಕ್ಕದಲ್ಲಿ ಗುರುಗಳು ಕೂತಿದ್ದಾರೆ: ಕಾಲ ಕೋಶ ಅವರ ಪಕ್ಕದಲ್ಲಿದೆ. ಅದರ ಮಧ್ಯದಲ್ಲಿ ಕೃಶ ನಡುವಿನಲ್ಲಿ ಅತಿ ಸಣ್ಣ ರಂಧ್ರ, ಸ್ಪಷ್ಟ ಗೋಚರವಾಗದಂತೆ ಒಂದೊಂದೇ ಮರಳ ಕಣ ಕೆಳ ಜಾಡಿಗೆ ಜಾರುತ್ತಿದೆ.  
'ಪ್ರಭುಗಳಿಗೆ ಜಯವಾಗಲಿ'. ಚೇಟಿಯೊಬ್ಬಳು ಓಡಿ ಬಂದು ದೊಡ್ಡ ದನಿಯಲ್ಲಿ ಕೂಗಿದಳು. ದಾಸಿಯ ಮಾತು ಮುಗಿಯುವ ಮುನ್ನವೇ ದಶರಥನ ಕಂಠೀಹಾರ ಕೈಗೆ ಬಂದಿತ್ತು. ವಸಿಷ್ಠರು ಅಷ್ಟು ಹೊತ್ತಿಗಾಗಲೇ ಕುಂಡಲಿಯನ್ನು ತಯಾರಿಸಿಯೇ ಬಿಟ್ಟರು. ಚೈತ್ರ ಮಾಸ, ಶುಕ್ಲ ಪಕ್ಷ, ನವಮಿ ತಿಥಿ,ಪುನರ್ವಸು ನಕ್ಷತ್ರದಲ್ಲಿ ಜನನ. ಕರ್ಕಟಕ ಲಗ್ನ . ರವಿ ಮೇಷದಲ್ಲಿ. ಚಂದ್ರ- ಗುರುಗಳಿಬ್ಬರೂ ಕರ್ಕಟಕದಲ್ಲಿ. ಸಿಂಹದಲ್ಲಿ ರಾಹು. ತುಲಾದಲ್ಲಿ ಶನೈಶ್ಚರ, ಮಕರದಲ್ಲಿ ಕುಜ. ಕುಂಭದಲ್ಲಿ ಕೇತು. ಮೀನದಲ್ಲಿ ಬುಧ-ಶುಕ್ರರು. ತುಂಬ ಸೊಗಸಾಗಿದೆ ಜಾತಕ. ಸೂರ್ಯ , ಮಂಗಳ , ಗುರು , ಶುಕ್ರ , ಹಾಗೂ ಶನಿಗಳು ಉಚ್ಛರಾಗಿದ್ದಾರೆ. 
(ತತಶ್ಚ ದ್ವಾದಶೇ ಮಾಸೇ ಚೈತ್ರೇ ನಾವಮಿಕೇ ತಿಥೌ 
ನಕ್ಷತ್ರೇ ಅದಿತಿ (ಪುನರ್ವಸು) ದೈವತ್ಯೇ ಸ್ವ ಉಚ್ಛ ಸಂಸ್ಥೇಷು ಪಂಚಸು
ಗ್ರಹೇಷು ಕರ್ಕಟೇ ಲಗ್ನೇ ವಾಕ್ಪತಾಂ ಇಂದುನಾ ಸಃ)
ಗುರುಗಳೊಡನೆ ಪ್ರಸೂತಿಕಾಗೃಹಕ್ಕೆ ನುಗ್ಗಿದ್ದಾನೆ ದಶರಥ. ಏನಾಶ್ಚರ್ಯ! ಮಗು ನಗುತ್ತಿದೆ !! ಅಳುತ್ತಿಲ್ಲ! ತುಸು ಶ್ಯಾಮಲ ವರ್ಣ, ಆದರೇನು? ಎಂತಹ ಕಾಂತಿ! ಎಂತಹ ಸ್ಫುಟ ಅಂಗಾಂಗ. ಒಪ್ಪಾದ ನುಣುಪು ಕೇಶರಾಶಿ. ಬಲಗಾಲ ಹೆಬ್ಬೆರಳು ಬಾಯಲ್ಲಿಟ್ಟಿದೆ ಮಗು, ಮಂದಹಾಸ ಮುಖದ ತುಂಬ, ಕೌಸಲ್ಯೆ ತನ್ನೆದೆಗೆ ಅಪ್ಪಿಕೊಂಡಿದ್ದಾಳೆ. ಅವಳ ಜನ್ಮದ ಅತ್ಯಂತ ಸುಖದ ದಿನ. ಎಂತಹ ದಿವ್ಯ ಸೌಂದರ್ಯ ! ಏನು ಹೆಸರಿಡೋಣ? ಎಂತಹ ಪ್ರಸನ್ನತೆ! ಎಂತಹ ರಮಣೀಯತೆ! ಫಕ್ಕನೆ ಹೊಳೆಯಿತು, " ರಾಮ! ಶ್ರೀರಾಮ! ರಘುರಾಮ! ದಶರಥ ರಾಮ! ಕೌಸಲ್ಯಾ ರಾಮ! ಆನಂದ ರಾಮ! ರಾಮ ರಾಮ ರಾಮ". 
                   (ಕೌಸಲ್ಯಾ ಜನಯತ್ ರಾಮಂ ಸರ್ವ ಲಕ್ಷಣ ಸಂಯುತಂ)
-ಡಾ.ಪಾವಗಡ ಪ್ರಕಾಶ್ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com