

ಹರಾರೆ: ಹಿರಿಯ ಆಟಗಾರ ಅನುಪಸ್ಥಿತಿಯಲ್ಲಿ ಜಿಂಬ್ವಾಬ್ವೆ ಪ್ರವಾಸ ಕೈಗೊಂಡಿರುವ ಯಂಗ್ ಇಂಡಿಯಾದ ಅಭಿಯಾನ ಶನಿವಾರದಿಂದ ಆರಂಭವಾಗುತ್ತಿದ್ದು, ನಾಯಕತ್ವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳಲು ಯುವಆಟಗಾರರಿಗೆ ಇದು ನಿಜಕ್ಕೂ ಸತ್ವಪರೀಕ್ಷೆಯಾಗಿದೆ.
ಟಿ20 ವಿಶ್ವಕಪ್, ಐಪಿಎಲ್‌ನಿಂದಾಗಿ ವರ್ಷದಾರಂಭದಿಂದಲೂ ಚುಟುಕು ಕ್ರಿಕೆಟ್‌ನಲ್ಲೇ ಮುಳುಗಿದ್ದ ಭಾರತ ತಂಡ ಇದೀಗ ಮತ್ತೆ ಏಕದಿನ ಕ್ರಿಕೆಟ್ ಸಮರಕ್ಕೆ ಸಜ್ಜಾಗಿದ್ದು, ಬಹುತೇಕ ಯುವ ಮತ್ತು ಅನನುಭವಿ ಆಟಗಾರರಿಂದಲೇ ಕೂಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ದ್ವಿತೀಯ ದರ್ಜೆ ತಂಡ ಶನಿವಾರದಿಂದ ಆತಿಥೇಯ ಜಿಂಬಾಬ್ವೆ ವಿರುದ್ಧ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲಿದೆ.
ಐಪಿಎಲ್ ಬಳಿಕ ಬಹುತೇಕ ಹಿರಿಯ ಆಟಗಾರರು ವಿಶ್ರಾಂತಿ ಪಡೆದಿದ್ದು, ಟೀಂ ಇಂಡಿಯಾದ ಹೆಚ್ಚುವರಿ ಆಟಗಾರರು ಜಿಂಬಾಬ್ವೆಯಲ್ಲಿ ತಮ್ಮ ಸಾಮರ್ಥ್ಯವನ್ನು ಓರೆಗೆ ಹಚ್ಚಲು ಸಿದ್ಧರಾಗಿ ನಿಂತಿದ್ದಾರೆ. 2016-17ನೇ ಸಾಲಿನಲ್ಲಿ ಭಾರತ ಸಾಲು-ಸಾಲು ಸರಣಿಗಳನ್ನು ಆಡುತ್ತಿದ್ದು, ಈ ಸರಣಿಗಳಿಗೆ ಜಿಂಬಾಬ್ವೆ ಪ್ರವಾಸ ಆರಂಭವಾಗಿದೆಯಷ್ಟೇ. ಹೀಗಾಗಿ ಮುಂಬರು ಪ್ರಮುಖ ಸರಣಿಗಳಲ್ಲಿ ಟೀಂ ಇಂಡಿಯಾ ಪರ ಆಡಲು ಯುವ ಆಟಗಾರರಿಗೆ ಈ ಸರಣಿ ಪ್ರಮುಖವಾಗಿದ್ದು, ತಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಬೇಕಿದೆ.
ತಂಡದಲ್ಲಿ ಮೂವರ ಕನ್ನಡಿಗರು
ಕರ್ನಾಟಕದ ಆಟಗಾರರಾದ ಕೆಎಲ್ ರಾಹುಲ್, ಮನೀಷ್ ಪಾಂಡೆ ಮತ್ತು ಕರುಣ್ ನಾಯರ್‌ಗೆ ಈ ಸರಣಿ ಅತ್ಯುತ್ತಮ ಅವಕಾಶವಾಗಿದ್ದು, ಆಸೀಸ್ ಪ್ರವಾಸದಲ್ಲಿ ಮಿಂಚಿದ್ದ ಮನೀಷ್‌ಗೆ ಸುರೇಶ್ ರೈನಾ ಉತ್ತರಾಧಿಕಾರಿಯಾಗಿ ಭಾರತ ತಂಡದ ಮಧ್ಯಮ ಕ್ರಮಾಂಕದ ಸ್ಥಾನ ಭದ್ರ ಪಡಿಸಲು ಇಲ್ಲಿ ಚಾನ್ಸ್ ಸಿಕ್ಕಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೆ ಸಾಮರ್ಥ್ಯ ಸಾಬೀತುಪಡಿಸಿರುವ ಕೆಎಲ್ ರಾಹುಲ್‌ಗೆ ಏಕದಿನಕ್ಕೂ ಸೈ ಎಂದು ತೋರಿಸುವ ವೇದಿಕೆ ಇದಾಗಿದ್ದು, ಇನ್ನು ಕರುಣ್ ನಾಯರ್‌ಗೆ ಐಪಿಎಲ್, ಪ್ರಥಮ ದರ್ಜೆ ಕ್ರಿಕೆಟ್‌ನ ಫಾರ್ಮ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ವಿಸ್ತರಿಸಲು ಅವಕಾಶವಿದೆ.
ಜಿಂಬಾಬ್ವೆ ವಿರುದ್ಧ ಇದುವರೆಗೆ ಆಡಿರುವ 60 ಏಕದಿನ ಪಂದ್ಯಗಳಲ್ಲಿ ಭಾರತ ತಂಡ 48ರಲ್ಲಿ ಗೆದ್ದು 10ರಲ್ಲಿ ಸೋತಿದೆ. 2 ಪಂದ್ಯ ಮಾತ್ರ ಟೈ ಆಗಿದೆ.
ಅನನುಭವಿ ಜಿಂಬಾಬ್ವೆ: ಭಾರತ ತಂಡದ ಕಳೆದ ವರ್ಷದ ಪ್ರವಾಸದ ನಂತರದಲ್ಲಿ 4ನೇ ನಾಯಕನನ್ನು ಕಾಣುತ್ತಿರುವ ಜಿಂಬಾಬ್ವೆ ತಂಡ ಇತ್ತೀಚೆಗಿನ ದಿನಗಳಲ್ಲಿ ಗುಣಮಟ್ಟದ ಆಟಗಾರರಿಲ್ಲದೆ ಸೊರಗಿದೆ. ವುಸಿ ಸಿಬಾಂಡ, ಎಲ್ಟನ್ ಚಿಗುಂಬುರ, ಹ್ಯಾಮಿಲ್ಟನ್ ಮಸಕಜ, ಸಿಕಂದರ್ ರಾಜಾ, ಸೀನ್ ವಿಲಿಯಮ್ಸ್‌ರಂಥ ಕೆಲ ಹೆಸರುಗಳಷ್ಟೇ ಪರಿಚಿತವೆನಿಸಿದ್ದರೂ, ಈ ಆಟಗಾರರ ಕಳಪೆ ಫಾರ್ಮ್ ಕೂಡ ಜಿಂಬಾಬ್ವೆ ತಂಡಕ್ಕೆ ತಲೆನೋವಾಗಿ ಪರಣಮಿಸಿದೆ. ಇವರನ್ನು ಹೊರತು ಪಡಿಸಿದರೆ ಇತರೆ ಆಟಗಾರರು ಭಾರತದ ಯುವ ಆಟಗಾರರಿಗೆ ಸವಾಲೊಡ್ಡುವುದು ಕಷ್ಟವೆಂದು ಹೇಳಲಾಗುತ್ತಿದೆ. ಆದರೂ ಸದಾ ಅನಿರೀಕ್ಷಿತ ಫಲಿತಾಂಶದಿಂದಲೇ ಖ್ಯಾತಿ ಗಳಿಸಿರುವ ಕ್ರಿಕೆಟ್ ನಲ್ಲಿ ಯಾವ ಕ್ಷಣ ಏನುಬೇಕಾದರೂ ಸಂಭವಿಸಬಹುದು.