

ಪುಣೆ: ಬಾರ್ಡರ್-ಗವಾಸ್ಕರ್ ಟ್ರೋಫಿ ನಿಮಿತ್ತ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಕೇವಲ 260 ರನ್ ಗಳಿಗೆ ಆಲ್ ಔಟ್ ಆಗಿದೆ.
ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿತ್ತು. ಬಾಲಂಗೋಚಿ ಆಟಗಾರರಾದ ಸ್ಟಾರ್ಕ್ 57 ರನ್ ಮತ್ತು ಹೇಜಲ್ವುಡ್ 1 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಆದರೆ ಇಂದು 2ನೇ ದಿನದಾಟ ಆರಂಭವಾಗುತ್ತಿದ್ದಂತೆಯೇ ಅಶ್ವಿನ್ ಬೌಲಿಂಗ್ ನಲ್ಲಿ 61 ರನ್ ಗಳಿಸಿದ್ದ ಸ್ಟಾರ್ಕ್ ಔಟ್ ಆಗುವುದರೊಂದಿಗೆ ಸ್ಮಿತ್ ಪಡೆ ಕೇವಲ 260 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಆಸಿಸ್ ಪರ ಆರಂಭಿಕ ಆಟಗಾರ ರೆನ್ಷಾ 68 ಮತ್ತು ಸ್ಟಾರ್ಕ್ ಗಳಿಸಿದ 611 ರನ್ ಗಳೇ ಆಸಿಸ್ ಪರ ಗರಿಷ್ಟ ವೈಯುಕ್ತಿಕ ರನ್ ಗಳಿಕೆಯಾಗಿತ್ತು.
ಇನ್ನು ಭಾರತದ ಉಮೇಶ್ ಯಾದವ್ 12 ಓವರ್ ಎಸೆದು ಕೇವಲ 32 ರನ್ ನೀಡಿ ಬರೊಬ್ಬರಿ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ಆರ್ ಅಶ್ವಿನ್ 63 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ರವೀಂದ್ರ ಜಡೇಜಾ 2 ಮತ್ತು ಜಯಂತ್ ಯಾದವ್ 1 ವಿಕೆಟ್ ಪಡೆದು ಆಸಿಸ್ ಪತನಕ್ಕೆ ಪ್ರಮುಖ ಕಾರಣರಾದರು.
ಒಟ್ಟಾರೆ ಪ್ರಥಮ ಇನ್ನಿಂಗ್ಸ್ ನಲ್ಲಿ ಆಸಿಸ್ ವಿರುದ್ಧ ಸಂಘಟಿತ ಮತ್ತು ಪ್ರಭಾವಿ ಬೌಲಿಂಗ್ ಮಾಡುವ ಮೂಲಕ ಭಾರತ ಮೇಲುಗೈ ಸಾಧಿಸಿದ್ದು, ಉತ್ತಮ ಬ್ಯಾಟಿಂಗ್ ಮಾಡುವ ಅದನ್ನು ಮುಂದುವರೆಸಿಕೊಂಡು ಹೋಗಬೇಕಿದೆ.