ಮುಂಬೈ: ಟೀಂ ಇಂಡಿಯಾದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಅವರು ತಂಡದ ಮುಖ್ಯ ಕೋಚ್ ಹುದ್ದೆಗೆ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ.
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಈ ರವಿಶಾಸ್ತ್ರಿ ಅರ್ಜಿ ಸಲ್ಲಿಸಿದ್ದು ಜುಲೈ 9ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಜುಲೈ 10ರಂದು ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಣಣ್ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ.
ರವಿಶಾಸ್ತ್ರಿ ಅವರು 2014ರಿಂದ 2016ರ ಅವಧಿಗೆ ಟೀಂ ಇಂಡಿಯಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ರವಿಶಾಸ್ತ್ರಿ ಹೆಚ್ಚು ಆಪ್ತರಾಗಿರುವ ಕಾರಣ ಇನ್ನಿತರ ಅಭ್ಯರ್ಥಿಗಳಿಂದ ಮಂಚೂಣಿಯಲ್ಲಿದ್ದಾರೆ.
ಟೀಂ ಇಂಡಿಯಾ ಕೋಚ್ ಹುದ್ದೆಗೆ ಈಗಾಗಲೇ ಮಾಜಿ ಕ್ರಿಕೆಟಿಗರಾದ ವೀರೆಂದ್ರ ಸೆಹ್ವಾಗ್, ಲಾಲಾ ಚಂದ್ ರಜಪೂತ್, ದೊಡ್ಡ ಗಣೇಶ್, ಆಸ್ಟ್ರೇಲಿಯಾದ ಟಾಮ್ ಮೂಡಿ, ಇಂಗ್ಲೆಂಡ್ ನ ರಿಚರ್ಡ್ ಪೈಬಸ್ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದಾರೆ.