ಬರ್ಮಿಂಗ್ ಹ್ಯಾಮ್: ಮಿನಿ ವಿಶ್ವಕಪ್ ಎಂದೇ ಖ್ಯಾತಿ ಗಳಿಸಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 124 ರನ್ ಗಳ ಅಂತರದಿಂದ (ಡಕ್ವರ್ಥ್ ಲೂಯಿಸ್ ನಿಯಮದಡಿ) ಬಗ್ಗುಬಡಿದು ಭರ್ಜರಿ ಗೆಲುವು ಸಾಧಿಸಿದೆ.
ಇಂಗ್ಲೆಂಡ್ ಬರ್ಮಿಂಗ್ ಹ್ಯಾಮ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ಇಂದು ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿ ಪಡೆ ನಿರೀಕ್ಷೆಗೂ ಮೀರಿದ ಜಯ ಸಾಧಿಸಿದೆ. ಭಾರತ ನೀಡಿದ್ದ 324 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನಕ್ಕೆ ಮಳೆ ಅಡ್ಡಿಯಾಗಿತ್ತು. ಆದರೆ ಬಳಿಕ ಮಳೆ ನಿಂತಾಗ ಡಕ್ವರ್ಥ್ ಲೂಯಿಸ್ ನಿಯಮದನ್ವಯ ಪಂದ್ಯವನ್ನು 41 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಅಂತೆಯೇ ರನ್ ಗುರಿಯನ್ನು ಕೂಡ 41 ಓವರ್ ಗಳಿಗೆ 289 ರನ್ ಗಳು ಎಂದು ನಿಗದಿ ಪಡಿಸಲಾಯಿತು. ಈ ಗುರಿಯನ್ನು ಬೆನ್ನು ಹತ್ತಿದ ಪಾಕಿಸ್ತಾನ ಭಾರತೀಯ ಬೌಲರ್ ಗಳ ಕರಾರುವಕ್ಕಾದ ದಾಳಿಗೆ ತತ್ತರಿಸಿ 33.4 ಓವರ್ ಗಳಲ್ಲಿ ಕೇವಲ 164 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಇನ್ನು ಅಂತಿಮ ಬ್ಯಾಟ್ಸಮನ್ ವಹಾಬ್ ರಿಯಾಜ್ ಫೀಲ್ಡಿಂಗ್ ವೇಳೆ ಗಾಯಗೊಂಡ ಪರಿಣಾಮ ಬ್ಯಾಟಿಂಗ್ ಇಳಿಯಲಿಲ್ಲ.
ಹೀಗಾಗಿ ಅಂತಿಮವಾಗಿ ಭಾರತ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಅದರಂತೆ ಪಾಕಿಸ್ತಾನದ ವಿರುದ್ಧ ಭಾರತ 124 ರನ್ ಗಳ ಭರ್ಜರಿ ಜಯ ದಾಖಲಿಸಿದೆ.
ಇನ್ನು ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಅದ್ಬುತ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರೆ, ಉಮೇಶ್ ಯಾದವ್ 3 ವಿಕೆಟ್ ಹಾಗೂ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು.
ಅಂತೆಯೇ ಕೇವಲ 39 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಭಾರತ ತಂಡದ ರನ್ ಗತಿಗೆ ವೇಗ ನೀಡಿದ ಯುವರಾಜ್ ಸಿಂಗ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.