ವಿರಾಟ್ ಕೊಹ್ಲಿ: ದೆಹಲಿಯ ಗಲ್ಲಿ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಇಂದಿಗೆ 10 ವರ್ಷ!

Published On :
ಲಂಡನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟು ಇಂದಿಗೆ ಸರಿಯಾಗಿ 10 ವರ್ಷ. ದೆಹಲಿಯ ಗಲ್ಲಿಗಳಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗ ಇಂದು ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದಾರೆ.
ಹೌದು.. ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ಪದಾರ್ಪಣೆ ಮಾಡಿ ಇಂದಿಗೆ ಸರಿಯಾಗಿ 10 ವರ್ಷ. ಆಗಸ್ಟ್ 18, 2008ರಂದು ದಂಬುಲಾದಲ್ಲಿ ಶ್ರೀಲಂಕಾ ವಿರುದ್ಧ ವಿರಾಟ್ ಕೊಹ್ಲಿ ಚೊಚ್ಚಲ ಏಕದಿನ ಪಂದ್ಯವನ್ನಾಡಿದ್ದರು. ಆ ಬಳಿಕ 2011ರಲ್ಲಿ ಟೆಸ್ಟ್ ತಂಡಕ್ಕೆ ಕಾಲಿಟ್ಟ ಅವರು, 2010ರಲ್ಲಿ ಭಾರತ ಪರ ಚೊಚ್ಚಲ ಟಿ20 ಆಡಿದ್ದರು. 10 ವರ್ಷಗಳಲ್ಲಿ ವಿರಾಟ್ ಅನೇಕ ದಾಖಲೆಗಳನ್ನು ಬರೆದಿದ್ದು, ಕ್ರಿಕೆಟ್ ಜಗತ್ತಿನಲ್ಲಿ ದಂತಕಥೆ ಎನಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ.
ಕೊಹ್ಲಿ ಸಾಧನೆ ಶ್ಲಾಘನೀಯವಾದರೂ, ವಿರಾಟ್ ಕೊಹ್ಲಿ ಮುಂದೆ ಈಗ ಸಾಕಷ್ಟು ಸವಾಲುಗಳಿವೆ. ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಅಗ್ರ ತಂಡವಾಗಿದ್ದರೂ, ಇಂಗ್ಲೆಂಡ್ ನೆಲದಲ್ಲಿ ತೋರುತ್ತಿರುವ ತಂಡದ ಕಳಪೆ ಪ್ರದರ್ಶನ ವಿರಾಟ್ ಕೊಹ್ಲಿ ಕಂಗೆಡಿಸಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಕೊಹ್ಲಿ ಪಡೆ ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದು, ಇಂದಿನಿಂದ ಆರಂಭವಾಗಲಿರುವ ಮೂರನೇ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಟೀಕೆಗಳಿಗೆ ಉತ್ತರ ನೀಡುವರೇ ಕೊಹ್ಲಿ
ಇನ್ನು ಇಂಗ್ಲೆಂಡ್ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಪ್ರತಿರೋಧ ಒಡ್ಡದೇ ಸೋಲೊಪ್ಪಿಕೊಂಡ ರೀತಿ ಟೀಂ ಇಂಡಿಯಾ ಭಾರಿ ಟೀಕೆ ಎದುರಿಸುವಂತೆ ಮಾಡಿತ್ತು. ಸ್ವತಃ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಸಂದೀಪ್ ಪಾಟೀಲ ಅವರು, ‘ವಿರಾಟ್ ಬಳಗವು ಇಂಗ್ಲೆಂಡ್‌ಗೆ ಕಾಫಿ ಕುಡಿಯಲು ತೆರಳಿರಬಹುದು’ ಎಂದು ಕುಟುಕಿದ್ದರು.
ಆದರೆ ಎರಡನೇ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕೊಹ್ಲಿ, 'ಸೋತಿದ್ದೇವೆಂದು ಕೈಬಿಡಬೇಡಿ, ನಮ್ಮನ್ನು ಬೆಂಬಲಿಸಿ ಜಯದ ಲಯಕ್ಕೆ ಮರಳುತ್ತೇವೆ' ಎಂದು ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಆ ಮಾತನ್ನು ಉಳಿಸಿಕೊಳ್ಳುವ ಸವಾಲು ಅವರ ಮುಂದಿದೆ. ಆದರೆ, ಆತ್ಮವಿಶ್ವಾಸದ ಉತ್ತುಂಗ ದಲ್ಲಿರುವ ಆತಿಥೇಯ ತಂಡವನ್ನು ಮಣಿಸುವುದು ಸುಲಭವಲ್ಲ. ಇದೊಂದು ಪಂದ್ಯ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಜೋ ರೂಟ್ ನಾಯಕತ್ವದ ಇಂಗ್ಲೆಂಡ್ ಚಿತ್ತ ನೆಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


