ಕೋಲ್ಕತ್ತಾ: ಕೌಟುಂಬಿಕ ದೌರ್ಜನ್ಯ, ವಿವಾಹೇತರ ಸಂಬಂಧ ಮತ್ತು ಮ್ಯಾಚ್ ಫಿಕ್ಸಿಂಗ್ ಆರೋಪಗಳನ್ನು ಎದುರಿಸುತ್ತಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಬೆಂಬಲಕ್ಕೆ ಟೀಂ ಮಾಜಿ ನಾಯಕ ಎಂಎಸ್ ಧೋನಿ ನಿಂತಿದ್ದಾರಾ ಎಂಬ ಅನುಮಾನಗಳು ಮೂಡತೊಡಗಿವೆ.
ಮೊಹಮ್ಮದ್ ಶಮಿ ಮತ್ತು ಪತ್ನಿ ಹಸೀನ್ ಜಹಾನ್ ದಂಪತಿ ರಾದ್ದಾಂತ ಕುರಿತಂತೆ ಪ್ರತಿಕ್ರಿಯಿಸಲು ಎಂಎಸ್ ಧೋನಿ ನಿರಾಕರಿಸಿದರು. ಆದರೆ ಮೊಹಮ್ಮದ್ ಶಮಿ ಒಬ್ಬ ಉತ್ತಮ ವ್ಯಕ್ತಿ. ಆತ ತನ್ನ ದೇಶ ಮತ್ತು ಪತ್ನಿಗೆ ದೋಖಾ ನೀಡಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಎಂಎಸ್ ಧೋನಿ ಈ ರೀತಿ ಪ್ರತಿಕ್ರಿಯಿಸುವ ಮೂಲಕ ದಂಪತಿಗೆ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂಬ ಸಲಹೆ ನೀಡಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.