ಹೈದರಾಬಾದ್: ಮುಂಬರುವ ಐಸಿಸಿ ವಿಶ್ವಕಪ್‌ಗೆ ಸಿದ್ಧತೆ ನಡೆಸುತ್ತಿರುವ ಭಾರತದ ಪಾಲಿಗೆ ನಾಳೆಯಿಂದ ಆರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಕೊನೆಯದಾಗಿದೆ. ಜಗತ್ತಿನ ಶ್ರೇಷ್ಠ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ಭಾರತಕ್ಕೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.
ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಆಸೀಸ್ ವಿರುದ್ಧ 2-0 ಅಂತರದಲ್ಲಿ ಟಿ-20 ಸರಣಿ ಸೋತಿರುವ ಭಾರತ, ಚುಟುಕು ಸರಣಿಯ ವೈಫಲ್ಯತೆಯನ್ನು ಮೆಟ್ಟಿ ನಿಲ್ಲಲು ಕೋಚ್ ರವಿಶಾಸ್ತ್ರಿ ಹಾಗೂ ನಾಯಕ ವಿರಾಟ್ ಉತ್ತಮ ಯೋಜನೆಯನ್ನು ರೂಪಿಸಿದ್ದಾರೆ.
"ಪ್ರತಿಯೊಂದು ತಂಡವೂ ವಿಶ್ವಕಪ್ ಮುನ್ನ ಉತ್ತಮ ಲಯಕ್ಕೆ ಮರಳಲು ಪ್ರಯತ್ನಿಸುತ್ತದೆ. ಅದರಂತೆ ಭಾರತ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವತ್ತ ಗಮನ ಹರಿಸಿಲಿದೆ. ಆಸ್ಟ್ರೇಲಿಯಾ ವಿರುದ್ಧದ ಎಲ್ಲ ಪಂದ್ಯಗಳಲ್ಲಿ ಜಯ ಸಾಧಿಸುವತ್ತ ಗಮನ ಕೇಂದ್ರಿಕರಿಸಲಾಗುವುದು." ಎಂದು ನಾಯಕ ವಿರಾಟ್ ಕೊಹ್ಲಿ ಎರಡನೇ ಟಿ-20 ಪಂದ್ಯ ಸೋಲಿನ ಬಳಿಕ ಸುದ್ದಿಗಾರರರಿಗೆ ತಿಳಿಸಿದ್ದರು.
ಐಸಿಸಿ ವಿಶ್ವಕಪ್ ಭಾರತ ತಂಡದಲ್ಲಿರುವ ಎರಡು ಸ್ಥಾನಗಳಿಗೆ ಕನ್ನಡಿಗ ಕೆ.ಎಲ್ ರಾಹುಲ್, ರಿಷಭ್ ಪಂತ್, ವಿಜಯ್ ಶಂಕರ್ ಹಾಗೂ ಸಿದ್ದಾರ್ಥ್ ಕೌಲ್ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಆದರೆ, ಈಗಾಗಲೇ ದಿನೇಶ್ ಕಾರ್ತಿಕ್ ಅವರಿಗೆ ಆಸಿಸ್ ವಿರುದ್ಧದ ಏಕದಿನ ಸರಣಿಗೆ ಅವಕಾಶ ಕೈ ತಪ್ಪಿದೆ. ಈ ಹಿನ್ನೆಯಲ್ಲಿ ರಿಷಬ್ ಪಂತ್ ಎರಡನೇ ವಿಕೆಟ್ ಕೀಪರ್ ಆಗಿ ಆಡುವುದು ಬಹುತೇಕ ಖಚಿತವಾಗಿದ್ದು, ಒಂದು ವೇಳೆ ಅವರು ಈ ಸರಣಿಯಲ್ಲಿ ವಿಫಲರಾದರೆ, ಅವರ ಸ್ಥಾನಕ್ಕೆ ದಿನೇಶ್ ಕಾರ್ತಿಕ್‌ಗೆ ಅವಕಾಶ ನೀಡುವುದನ್ನು ಕಡೆಗಣಿಸುವಂತಿಲ್ಲ.
ವಿಶ್ವಕಪ್ ತಂಡದ ರೇಸ್‌ನಲ್ಲಿರುವ ರಾಹುಲ್, ಪಂತ್, ಶಂಕರ್ ಹಾಗೂ ಸಿದ್ದಾರ್ಥ್ ಕೌಲ್ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಾಮರ್ಥ್ಯ ಸಾಬೀತು ಮಾಡಲು ಆಸೀಸ್ ಸವಾಲನ್ನು ಸ್ವೀಕರಿಸಿಲಿದ್ದಾರೆ.
ಕಳೆದ ಎರಡು ಚುಟುಕು ಪಂದ್ಯಗಳಲ್ಲಿ ಕ್ರಮವಾಗಿ 50 ಹಾಗೂ 47 ರನ್ ಸಿಡಿಸಿದ್ದ ಕನ್ನಡಿಗ ರಾಹುಲ್ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ. ಆದರೂ ಅವರಿಗೆ ಏಕದಿನ ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ಅವಕಾಶ ನೀಡಲಾಗುವುದು. ಶಿಖರ್ ಧವನ್ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದು, ಮೀಸಲು ಆರಂಭಿಕನಾಗಿ ಕೆ.ಎಲ್ ರಾಹುಲ್ ಅವರನ್ನು ಪರಿಗಣಿಸುವ ಉದ್ದೇಶದಿಂದ ಅವರಿಗೆ ಈ ಸರಣಿಯಲ್ಲಿ ಸತ್ವ ಪರೀಕ್ಷೆ ನಡೆಸಲಾಗುವುದು.
ವಿಶ್ವಕಪ್ ತಂಡದ ಪ್ರಮುಖ ಆಕಾಂಕ್ಷೆಯಾಗಿರುವ ಉದಯೋನ್ಮುಖ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ರಿಷಭ್ ಪಂತ್ ಮೇಲೂ ಟೀಂ ಇಂಡಿಯಾ ಕಣ್ಣಿದೆ. ಏಕಾಂಗಿಯಾಗಿ ತಂಡದ ಪರ ಹೋರಾಡುವ ಕೆಚ್ಚೆದೆಯ ಸಾಮಾರ್ಥ್ಯವಿರುವ ಅವರಿಗೆ ಈ ಸರಣಿಯಲ್ಲಿ ಇನ್ನೂ ಅವಕಾಶ ನೀಡಲಾಗುತ್ತಿದೆ. ಬಳಿಕ, ಅವರ ಪ್ರದರ್ಶನ ನೋಡಿಕೊಂಡು ಅವರ ಸ್ಥಾನದ ಬಗ್ಗೆ ಅಂತಿಮಗೊಳಿಸಲಾಗುತ್ತದೆ.
ಇನ್ನೂ ಆಲ್‌ರೌಂಡರ್ ವಿಜಯ್ ಶಂಕರ್, ಬೌಲಿಂಗ್‌ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ಇನ್ನೂ ನೀಡಿಲ್ಲ. ಆದರೆ, ಗಾಯಾಳಾಗಿರುವ ಹಾರ್ದಿಕ್ ಪಾಂಡ್ಯ ಸದ್ಯ ಚೇತರಿಸಿಕೊಳ್ಳುತ್ತಿದ್ದು, ಅವರು ಫಿಟ್ನೆಸ್ ಸುಧಾರಣೆ ಕೂಡ ಪ್ರಮುಖ ಅಂಶವಾಗಿದೆ. ಅವರು ಮೊದಲನೇ ಆಲ್‌ರೌಂಡರ್ ಆಗಿ ಕಣಕ್ಕೆ ಇಳಿದರೆ, ವಿಜಯ್ ಶಂಕರ್ ಅವರನ್ನು ಎರಡನೇ ಆಲ್‌ರೌಂಡರ್ ಆಗಿ ತಂಡದಲ್ಲಿ ಉಳಿಸಿಕೊಳ್ಳಬಹುದು.
ಮೊಹಮ್ಮದ್ ಖಲೀಲ್, ಬೌಲಿಂಗ್‌ನಲ್ಲಿ ಗಣನೀಯ ಪ್ರದರ್ಶನ ನೀಡದ ಹಿನ್ನೆಯಲ್ಲಿ ಅವರ ಸ್ಥಾನದಲ್ಲಿ ಸಿದ್ಧಾರ್ಥ್ ಕೌಲ್‌ಗೆ ಅವಕಾಶ ನೀಡಲಾಗಿತ್ತು. ಆದರೆ, ಅವರು ಕಳೆದ ಪಂದ್ಯದಲ್ಲಿ ಆಸೀಸ್ ಬ್ಯಾಟ್ಸ್‌ಮನ್‌ಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಯಶ ಕಾಣಲಿಲ್ಲ. ಆದರೆ, ಏಕದಿನ ದಿನ ಸರಣಿಯ ಎರಡು ಪಂದ್ಯಗಳಲ್ಲಿ ಅವರ ಪ್ರದರ್ಶನ ಗಮನಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಟೀಂ ಇಂಡಿಯಾ ವ್ಯವಸ್ಥಾಪಕ ಮಂಡಳಿ ನಿರೀಕ್ಷಿಸುತ್ತಿದೆ. ಆದರೆ, ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬೂಮ್ರಾ ಅವರಿಗೆ ಸಾಮಾನ್ಯವಾಗಿ ಮುಂದುವರಿಯಲಿದ್ದಾರೆ.
ವಿಶ್ವಕಪ್ ಅಂಗವಾಗಿ ಭಾರತಕ್ಕೆ ಈ ಸರಣಿ ಫೈನಲ್ ಪರೀಕ್ಷೆಯಾಗಿರುವ ಹಿನ್ನೆಲೆಯಲ್ಲಿ ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಂಬಾಟಿ ರಾಯುಡು, ಹಿರಿಯ ಆಲ್‌ರೌಂಡರ್ ಕೇದಾರ್ ಜಾದವ್ ಹಾಗೂ ಮೊಹಮ್ಮದ್ ಶಮಿ ಏಕದಿನ ತಂಡಕ್ಕೆ ಸೇರ್ಪಡೆಯಾಗುತ್ತಿದ್ದು, ಆ್ಯರೊನ್ ಫಿಂಚ್ ನಾಯಕತ್ವದ ಆಸೀಸ್ ಪಡೆ ಏಕದಿನ ಮಾದರಿಯಲ್ಲಿ ಸಂಪೂರ್ಣ ಬದಲಾವಣೆಯಿಂದ ಕೂಡಿದೆ.
ಸ್ಪಿನ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ಅವರು ಮಧ್ಯಮ ಓವರ್‌ಗಳಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ್ದ ಜಸ್ಪ್ರೀತ್ ಬೂಮ್ರಾಗೆ ಈ ಸರಣಿಯಲ್ಲಿ ಒಂದು ಅಥವಾ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಏಕದಿನ ಸರಣಿಯಲ್ಲಿ ನಥಾನ್ ಲಿಯಾನ್ ಆಡುವ ಮೂಲಕ ಸ್ಪಿನ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಇವರಿಗೆ ಆ್ಯಡಂ ಝಂಪಾ ಸಾಥ್ ನೀಡಲಿದ್ದಾರೆ. ಗಾಯಗೊಂಡಿರುವ ಕೇನ್ ರಿಚರ್ಡ್ಸನ್ ಸ್ಥಾನಕ್ಕೆ ಆ್ಯಂಡ್ರೋ ಟೈ ಗೆ ಸ್ಥಾನ ಕಲ್ಪಿಸಲಾಗಿದೆ.