
ಐಪಿಎಲ್ 2025ನೇ ಆವೃತ್ತಿಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎದುರು ಸೋಲು ಕಂಡಿದ್ದು, ಸತತ ಐದು ಪಂದ್ಯಗಳಲ್ಲಿ ಸೋತಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 11 ರನ್‌ಗಳ ಸೋಲು ಕಂಡ ನಂತರ ರಾಜಸ್ಥಾನ್ ರಾಯಲ್ಸ್ ತಂಡದ ಸಿಇಒ ಜೇಕ್ ಲಶ್ ಮೆಕ್ರಮ್ ಅವರ ವಿಡಿಯೋ ಇದೀಗ ವೈರಲ್ ಆಗಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಕಂಡ ನಂತರ, ಬೆಂಗಳೂರಿನ ಮಧ್ಯಭಾಗದಲ್ಲಿರುವ ದುಬಾರಿ ಮದ್ಯದಂಗಡಿ ಟಾನಿಕ್ ಕಡೆಗೆ ಮೆಕ್ರಮ್ ನಡೆದುಕೊಂಡು ಹೋಗುತ್ತಿರುವುದನ್ನು ಅಭಿಮಾನಿಯೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆರ್‌ಸಿಬಿ ಅಭಿಮಾನಿಯೊಬ್ಬರು, ತಂಡದ ಸೋಲಿನ ನಂತರ ಮೆಕ್ರಮ್ ನೋವಿನಲ್ಲಿ ಮುಳುಗಲು ಬಯಸುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್ (19 ಎಸೆತಗಳಲ್ಲಿ 49) ಮತ್ತು ಧ್ರುವ್ ಜುರೆಲ್ (34 ಎಸೆತಗಳಲ್ಲಿ 47) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 194 ರನ್ ಗಳಿಸಷ್ಟೇ ಶಕ್ತವಾಯಿತು. ಈ ಮೂಲಕ ಆಡಿರುವ ಒಂಬತ್ತು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವಿರಾಟ್ ಕೊಹ್ಲಿ (42 ಎಸೆತಗಳಲ್ಲಿ 70) ಮತ್ತು ದೇವದತ್ ಪಡಿಕ್ಕಲ್ (27 ಎಸೆತಗಳಲ್ಲಿ 50) ಅವರ 95 ರನ್‌ಗಳ ಜೊತೆಯಾಟದ ಮೂಲಕ ಐದು ವಿಕೆಟ್ ಕಳೆದುಕೊಂಡು 205 ರನ್ ಗಳಿಸಿತು. ಕೊಹ್ಲಿ ಒಂಬತ್ತು ಪಂದ್ಯಗಳಲ್ಲಿ 392 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ (417) ಮೊದಲನೇ ಸ್ಥಾನದಲ್ಲಿದ್ದಾರೆ.
ಆರ್‌ಸಿಬಿ ತಂಡವು ಈ ಆವೃತ್ತಿಯಲ್ಲಿ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸುವ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ತವರಿನಿಂದ ಹೊರಗೆ ಎಲ್ಲ ಪಂದ್ಯಗಳನ್ನು ಗೆದ್ದಿದ್ದ ಆರ್‌ಸಿಬಿ, ಚಿನ್ನಸ್ವಾಮಿಯಲ್ಲಿ ಆಡಿದ್ದ ಮೂರು ಪಂದ್ಯಗಳಲ್ಲಿ ಸೋಲು ಕಂಡಿತ್ತು. ಇದೀಗ ತವರಿನಲ್ಲೂ ಜಯ ಸಾಧಿಸಿದೆ. ಭಾನುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.
Advertisement