

ಚೆನ್ನೈ: ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ತೋರಿದ ನೀರಸ ಪ್ರದರ್ಶನದ ಹೊರತಾಗಿಯೂ ಚೆನ್ನೈ ತಂಡದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅದ್ಭುತ ಕ್ಷಣವನ್ನು ತಮ್ಮದಾಗಿಸಿಕೊಂಡರು.
ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ ಗಳ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ತಂಡ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಕಲೆಹಾಕಿತ್ತು.
ಇದನ್ನು ಬೆನ್ನು ಹತ್ತಿದ ಗುಜರಾತ್ ಟೈಟನ್ಸ್ 16.4 ಓವರ್ ನಲ್ಲಿ 2 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿ 8 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.
ಸಂಜು ಸ್ಯಾಮ್ಸನ್ ಮಿಂಚಿನ ಸ್ಟಂಪಿಂಗ್
ಇನ್ನು ಈ ಪಂದ್ಯದಲ್ಲಿ ಚೆನ್ನೈ ತಂಡ ಹೀನಾಯ ಸೋಲು ಕಂಡಿತಾದರೂ ಸಂಜು ಸ್ಯಾಮ್ಸನ್ ಮಾತ್ರ ತಮ್ಮ ಅದ್ಭುತ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದರು. ಗುಜರಾತ್ ಇನ್ನಿಂಗ್ಸ್ ನ ಏಳನೇ ಓವರ್‌ನಲ್ಲಿ ಸಿಎಸ್‌ಕೆ ಸ್ಪಿನ್ನರ್ ನೂರ್ ಅಹ್ಮದ್ ಎಸೆದ ಚೆಂಡನ್ನು ಗಿಲ್ ಫ್ಲಿಕ್ ಮಾಡಲು ಮುಂದಾದರು. ಈ ವೇಳೆ ಚೆಂಡು ಅವರ ಬ್ಯಾಟ್ ಅನ್ನು ವಂಚಿಸಿ ನೇರವಾಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೈ ಸೇರಿತ್ತು.
ಈ ವೇಳೆ ಸಂಜು ಕೊಂಚವೂ ಕೂಡ ತಡ ಮಾಡದೇ ಮಿಂಚಿನ ವೇಗದಲ್ಲಿ ಬೇಲ್ಸ್ ಎಗರಿಸಿ ಗಿಲ್ ರನ್ನು ಸ್ಟಂಪೌಟ್ ಮಾಡಿದರು. ಬಳಿಕ ಅಂಪೈರ್ ಗಳು ಮೂರನೇ ಅಂಪೈರ್ ಮೊರೆ ಹೋದರೂ ಗಿಲ್ ಕಾಲು ಗಾಳಿಯಲ್ಲಿ ಇದ್ದರಿಂದ ಗಿಲ್ ರನ್ನು ಔಟ್ ಎಂದು ತೀರ್ಪು ನೀಡಲಾಯಿತು.
ಧೋನಿ ನೆನಪಿಸಿದ ಸಂಜು ಸ್ಯಾಮ್ಸನ್
ಇನ್ನು ಇಂದಿನ ತಮ್ಮ ಅದ್ಭುತ ವಿಕೆಟ್ ಕೀಪಿಂಗ್ ಮೂಲಕ ಸಂಜು ಸ್ಯಾಮ್ಸನ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವಿಕೆಟ್ ಕೀಪಿಂಗ್ ದಿನಗಳನ್ನು ನೆನಪಿಸಿದರು.
ಧೋನಿ ಕೂಡ ತಮ್ಮ ವೃತ್ತಿ ಜೀವನದಲ್ಲಿ ಅತ್ಯದ್ಭುತ ವಿಕೆಟ್ ಕೀಪಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಇಂದು ಸಂಜು ಕೂಡ ಅದೇ ರೀತಿಯ ಮಿಂಚಿನ ವಿಕೆಟ್ ಕೀಪಿಂಗ್ ಮೂಲಕ ಶ್ಲಾಘನೆಗೆ ಪಾತ್ರರಾದರು.
Advertisement