

ಚೆನ್ನೈ: 18 ಸೀಸನ್‌ಗಳ ಬಳಿಕ ಸ್ಟೀಫನ್ ಫ್ಲೆಮಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ದೂರ ಸರಿದಿರುವಂತೆಯೇ ಇತ್ತ ತಂಡದ ಹೊಸ ಕೋಚ್ ಆಯ್ಕೆ ವಿಚಾರ ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು 18 ಸೀಸನ್‌ಗಳ ಬಳಿಕ ಸ್ಟೀಫನ್ ಫ್ಲೆಮಿಂಗ್ ಅವರೊಂದಿಗೆ ಬೇರ್ಪಟ್ಟಿರುವ ಹಿನ್ನೆಲೆಯಲ್ಲಿ ಹೊಸ ಕೋಚ್‌ಗಾಗಿ ಹುಡುಕಾಟ ಆರಂಭಿಸಿದೆ. ಇಂಗ್ಲೆಂಡ್‌ಗೆ 2019ರ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಇಯಾನ್ ಮಾರ್ಗನ್ ಅವರ ಹೆಸರು ಸಿಎಸ್‌ಕೆ ಕೋಚ್ ಹುದ್ದೆಗೆ ಕೇಳಿಬರುತ್ತಿದೆ.
ಮಾಜಿ ಭಾರತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಮಾರ್ಗನ್ ಅವರು ಫ್ಲೆಮಿಂಗ್ ನಂತರದ ಯುಗದಲ್ಲಿ ಸಿಎಸ್‌ಕೆ ಕೋಚ್ ಆಗಬಹುದು ಎಂದು ಸುಳಿವು ನೀಡಿದ್ದಾರೆ.
ಆದರೆ, ಸಿಎಸ್‌ಕೆಯೊಂದಿಗೆ ಈ ಹಿಂದೆ ನಂಟು ಹೊಂದಿದ್ದ ಭಾರತದ ಮಾಜಿ ಆರಂಭಿಕ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಮಾರ್ಗನ್ ಅವರನ್ನು ತಂಡದ ನೂತನ ಮುಖ್ಯ ಕೋಚ್ ಮಾಡುವ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಅಷ್ಟೇ ಅಲ್ಲ, ಬ್ರೆಂಡನ್ ಮೆಕಲಮ್ ಅವರನ್ನೂ ಕೂಡ ಸಿಎಸ್‌ಕೆ ಕೋಚ್ ಆಗಿ ನೇಮಿಸಬಾರದು ಎಂದು ಅವರು ಹೇಳಿದ್ದಾರೆ.
ಶ್ರೀಕಾಂತ್ ಹೇಳಿದ್ದೇನು?
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, “ನಾನು ಖಂಡಿತವಾಗಿಯೂ ಇಯಾನ್ ಮಾರ್ಗನ್ ಅವರನ್ನು ಆಯ್ಕೆ ಮಾಡುವುದಿಲ್ಲ. ಅವರು ಇಂಗ್ಲೆಂಡ್‌ನ ಉತ್ತಮ ಆಟಗಾರ ಹಾಗೂ ಉತ್ತಮ ನಾಯಕ. ಆದರೆ ಕೋಚ್ ಆಗಿ ಅವರನ್ನು ನಾನು ಒಪ್ಪುವುದಿಲ್ಲ. ಕೆಕೆಆರ್ ನಾಯಕನಾಗಿದ್ದಾಗಲೂ ಅವರು ಏನೂ ದೊಡ್ಡ ಸಾಧನೆ ಮಾಡಲಿಲ್ಲ. ಅವರು ಕಾಮೆಂಟರಿಗೇ ಸೀಮಿತವಾಗಿರುವುದು ಉತ್ತಮ” ಎಂದು ಹೇಳಿದ್ದಾರೆ.
“ಅದೇ ರೀತಿ ಬ್ರೆಂಡನ್ ಮೆಕಲಮ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸದಿರುವುದೇ ಸಿಎಸ್‌ಕೆಗೆ ಒಳಿತು. ಮಾರ್ಗನ್ ಮತ್ತು ಮೆಕಲಮ್ ಇಬ್ಬರಿಗೂ ಸಿಎಸ್‌ಕೆ ‘ನೋ’ ಹೇಳಬೇಕು,” ಎಂದು ಅವರು ಹೇಳಿದ್ದಾರೆ.
ಮಾರ್ಗನ್‌ಗೆ ಐಪಿಎಲ್‌ನಲ್ಲಿ ಕೋಚಿಂಗ್ ಅನುಭವವಿಲ್ಲ. ಆದರೆ ಮೆಕಲಮ್ 2020ರಿಂದ 2022ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದರು. ಅವರ ಮಾರ್ಗದರ್ಶನದಲ್ಲಿ ಕೆಕೆಆರ್ 2021ರಲ್ಲಿ ಐಪಿಎಲ್ ಫೈನಲ್ ತಲುಪಿತ್ತು. ಅದೇ ಸೀಸನ್‌ನಲ್ಲಿ ಮಾರ್ಗನ್ ಕೆಕೆಆರ್ ತಂಡದ ನಾಯಕರಾಗಿದ್ದರು.
ಆರ್ ಅಶ್ವಿನ್ ಬೆಂಬಲ
ಇತ್ತೀಚೆಗೆ ರವಿಚಂದ್ರನ್ ಅಶ್ವಿನ್ ಅವರು ಇಯಾನ್ ಮಾರ್ಗನ್ ಸಿಎಸ್‌ಕೆಯ ಹೊಸ ಮುಖ್ಯ ಕೋಚ್ ಆಗಬಹುದು ಎಂದು ಸೂಚಿಸಿದ್ದರು. “ಇಯಾನ್ ಮಾರ್ಗನ್ ಬರಬಹುದು ಎಂಬ ಭಾವನೆ ನನಗಿದೆ. ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಆರಂಭಿಕ ಹಂತದ ಮಾತುಕತೆಗಳು ನಡೆಯುತ್ತಿವೆ ಎಂಬುದರಲ್ಲಿ ಅನುಮಾನವಿಲ್ಲ,” ಎಂದು ಅಶ್ವಿನ್ ಹೇಳಿದ್ದರು.
ಆದರೆ ಶ್ರೀಕಾಂತ್ ಅವರು ಸಿಎಸ್‌ಕೆ ಹೊಸ ಕೋಚ್ ಆಗಿ ತಂಡದ ಮಾಜಿ ಆರಂಭಿಕ ಆಟಗಾರ ಮೈಕೆಲ್ ಹಸ್ಸಿ ಅತ್ಯುತ್ತಮ ಆಯ್ಕೆಯಾಗಬಹುದು ಎಂದು ಹೇಳಿದ್ದಾರೆ. ಹಸ್ಸಿ ಈಗಾಗಲೇ ಸಿಎಸ್‌ಕೆ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.
“ಸಿಎಸ್‌ಕೆ ಬಳಿ ‘ಮಿಸ್ಟರ್ ಕ್ರಿಕೆಟ್’ ಮೈಕೆಲ್ ಹಸ್ಸಿ ಇರುವಾಗ ಹೊರಗಿನಿಂದ ಯಾರನ್ನೂ ಕರೆತರುವ ಅಗತ್ಯವಿಲ್ಲ. ಮೈಕೆಲ್ ಹಸ್ಸಿ ಸ್ವಾಭಾವಿಕ ಆಯ್ಕೆಯಾಗಿ ಮುಖ್ಯ ಕೋಚ್ ಆಗಬೇಕು. ಅವರೇ ಅತ್ಯುತ್ತಮ ಆಯ್ಕೆ. ಆದರೆ ಮುಂದೆ ಸಿಎಸ್‌ಕೆಯಲ್ಲಿ ಎಂ.ಎಸ್. ಧೋನಿ ಅವರ ಪಾತ್ರ ಏನು ಎಂಬುದನ್ನು ಮೊದಲು ನಿರ್ಧರಿಸಬೇಕು. ಆ ವ್ಯವಸ್ಥೆ ಸ್ಪಷ್ಟವಾದ ನಂತರ ಉಳಿದ ಎಲ್ಲವೂ ಸರಿಯಾದ ಹಾದಿಗೆ ಬರುತ್ತದೆ” ಎಂದು ಶ್ರೀಕಾಂತ್ ಹೇಳಿದ್ದಾರೆ.