'ನನಗೂ ಬೇಸರವಾಗಿದೆ'; ಮೊಹಮ್ಮದ್ ಸಿರಾಜ್ ಕೈಬಿಟ್ಟ ಕುರಿತು ಕಪಿಲ್ ದೇವ್ ಅಸಮಾಧಾನ!

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗದಿರುವುದಕ್ಕೆ ಭಾರತ ತಂಡದ ಮಾಜಿ ನಾಯಕ, 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಬೇಸರ ವ್ಯಕ್ತಪಡಿಸಿದ್ದಾರೆ.
ಚಂಡೀಗಢದಲ್ಲಿ ನಡೆಯಲಿರುವ ಟ್ರೈಡೆಂಟ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿಯ ಘೋಷಣೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿರಾಜ್ ಒಬ್ಬ ಉತ್ಸಾಹಭರಿತ ಆಟಗಾರ. ಇಂತಹ ಪ್ರತಿಭಾವಂತ ಆಟಗಾರ ತಂಡದಲ್ಲಿ ಸ್ಥಾನ ಪಡೆಯದಿರುವುದು ಬೇಸರದ ಸಂಗತಿ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, 15 ವರ್ಷದ ವೈಭವ್ ಸೂರ್ಯವಂಶಿ ಅವರ ದಾಖಲೆಯ ದ್ವಿಶತಕದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ನಾಲ್ವರು ವೇಗದ ಬೌಲರ್‌ಗಳಿಗೆ ಅವಕಾಶ ನೀಡಿದ್ದರೂ, ಮೊಹಮ್ಮದ್ ಸಿರಾಜ್‌ಗೆ ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ.
ಎರಡೂ ಪಂದ್ಯಗಳಲ್ಲಿ ಅವರು ಬೆಂಚ್ ಕಾಯುವಂತಾಗಿತ್ತು. ಸಿರಾಜ್ ಅವರಂತಹ ಪ್ರಮುಖ ವೇಗದ ಬೌಲರ್‌ಗೆ ಅವಕಾಶ ನೀಡದಿರುವ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆ ನಡೆದಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಕಪಿಲ್ ದೇವ್, "ಸಿರಾಜ್ ತಂಡದಲ್ಲಿ ಇಲ್ಲದಿರುವುದಕ್ಕೆ ನನಗೂ ಬೇಸರವಾಗಿದೆ. ಆತ ತುಂಬಾ ಉತ್ಸಾಹಭರಿತ ಹುಡುಗ. ಆದರೆ ತಂಡದಲ್ಲಿ ಸ್ಥಾನ ಸಿಗದಿದ್ದರೆ ನಾವೇನು ಹೇಳಲು ಸಾಧ್ಯ?" ಎಂದು ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ವಿಶ್ವದಾಖಲೆಗೆ ಕಪಿಲ್ ಮೆಚ್ಚುಗೆ
ಇದೇ ಸಂದರ್ಭದಲ್ಲಿ 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಐತಿಹಾಸಿಕ ದ್ವಿಶತಕದ ಬಗ್ಗೆಯೂ ಕಪಿಲ್ ದೇವ್ ಸಂತಸ ವ್ಯಕ್ತಪಡಿಸಿದ್ದಾರೆ. 2026ರ 50 ಓವರ್‌ಗಳ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ದಾಖಲೆಯ ದ್ವಿಶತಕ ಸಿಡಿಸಿದ್ದರು.
ಈ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಶತಕ ಮತ್ತು ದ್ವಿಶತಕ ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಲ್ಲದೆ, ಒಂದೇ ಲಿಸ್ಟ್ ಎ ಇನಿಂಗ್ಸ್‌ನಲ್ಲಿ 28 ಸಿಕ್ಸರ್‌ಗಳನ್ನು ಸಿಡಿಸಿ ಮತ್ತೊಂದು ದಾಖಲೆ ನಿರ್ಮಿಸಿದ್ದರು.
ವೈಭವ್ ಸಾಧನೆ ಬಗ್ಗೆ ಮಾತನಾಡಿದ ಕಪಿಲ್ ದೇವ್, "ಇಂದು ನಮ್ಮಲ್ಲಿ ಇಷ್ಟೊಂದು ಪ್ರತಿಭಾವಂತ ಆಟಗಾರರಿದ್ದಾರೆ ಎಂಬುದೇ ಖುಷಿಯ ವಿಚಾರ. ಕೇವಲ 15 ವರ್ಷದ ಹುಡುಗ ವಿಶ್ವದಾಖಲೆ ನಿರ್ಮಿಸುತ್ತಾನೆ ಎಂದರೆ ಇದಕ್ಕಿಂತ ಇನ್ನೇನು ಬೇಕು?" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಂಡೀಗಢ ಪ್ರಮುಖ ಕ್ರೀಡಾ ನಗರ: ಕಪಿಲ್ ದೇವ್
ಭಾರತದ ಮಾಜಿ ನಾಯಕ ಹಾಗೂ ಭಾರತೀಯ ವೃತ್ತಿಪರ ಗಾಲ್ಫ್ ಪ್ರವಾಸ (PGTI) ಅಧ್ಯಕ್ಷರೂ ಆಗಿರುವ ಕಪಿಲ್ ದೇವ್, ಚಂಡೀಗಢವನ್ನು ಪ್ರಮುಖ ಕ್ರೀಡಾ ನಗರ ಎಂದು ಬಣ್ಣಿಸಿದ್ದಾರೆ.
"ಚಂಡೀಗಢದಲ್ಲಿ ವಿಶ್ವದ ಅತಿದೊಡ್ಡ ಕ್ರೀಡಾಕೂಟವನ್ನು ಆಯೋಜಿಸಬೇಕೆಂಬ ಆಲೋಚನೆ ನಿಜಕ್ಕೂ ಹೆಮ್ಮೆಯ ವಿಚಾರ. ಇತ್ತೀಚೆಗೆ ದೆಹಲಿಯಲ್ಲಿ ಡಿಪಿ ವರ್ಲ್ಡ್ ಟೂರ್ನಿ ನಡೆದಿದ್ದು, ಅದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ಚಂಡೀಗಢ ಕೂಡ ಪ್ರಮುಖ ಕ್ರೀಡಾ ನಗರವಾಗಿದೆ.
ಇಲ್ಲಿನ ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ಸೌಲಭ್ಯಗಳನ್ನು ಒದಗಿಸಿದರೆ, ಅವರ ಯಶಸ್ಸಿನಲ್ಲಿ ಭಾಗಿಯಾಗುವುದು ನಮಗೆ ಸಂತೋಷದ ವಿಚಾರ" ಎಂದು ಹೇಳಿದ್ದಾರೆ.
ಟ್ರೈಡೆಂಟ್ ಓಪನ್ ಗಾಲ್ಫ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿಯು ಡಿಸೆಂಬರ್ 1ರಿಂದ 4ರವರೆಗೆ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



