ಜಿಲ್ಲಾ ಸುದ್ದಿ

ಆಪರೇಷನ್ ತಿಮ್ಮಣ್ಣ ಕಾರ್ಯಾಚರಣೆ ಸ್ಥಗಿತ

ಆಪರೇಷನ್ ತಿಮ್ಮಣ್ಣ ಕಾರ್ಯಾಚರಣೆ ಸ್ಥಗಿತ
Published On :

ಬಾಗಲಕೋಟೆ: ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣನನ್ನು ಮೇಲೆತ್ತಲು ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಶನಿವಾರ ಸ್ಥಗಿತಗೊಳಿಸಲಾಗಿದ್ದು, ಬಾಲಕನ ಪೋಷಕರಿಗೆ ಸರ್ಕಾರದ ವತಿಯಿಂದ 5 ಲಕ್ಷ ರು.ಗಳನ್ನು ಪರಿಹಾರ ನೀಡಲಾಗಿದೆ.

160 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕ ತಿಮ್ಮಣ್ಣ ಈಗಾಗಲೇ ಸಾವನ್ನಪ್ಪಿದ್ದು, ಕೊಳವೆಯಿಂದ ಶವದ ವಾಸನೆ ಬರುತ್ತಿದೆ ಎಂದು ತಜ್ಞರು ಮತ್ತು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಹೀಗಿದ್ದೂ ಬಾಲಕನ ಶವವನ್ನಾದರೂ ಮೇಲೆತ್ತಬಯಸಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಏಕೈಕ ಜೀವಾನಾಧಾರವಾಗಿರುವ ಹೊಲ ಹಾಳಾಗುವ ಭೀತಿ ಇರುವುದರಿಂದ ಸ್ವತಃ ಬಾಲಕನ ತಂದೆ ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ಇಂದು ತಜ್ಞ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಉಸ್ತುವಾರಿ ಸಚಿವ ಎಸ್.ಆರ್ ಪಾಟೀಲ್ ಅವರು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಇದಕ್ಕೂ ಮೊದಲು ಸಚಿವರೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದ ಬಾಲಕನ ತಂದೆ ಹನುಮಂತಪ್ಪ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದರು. 'ಬೆನ್ನೆಲುಬಾಗಬೇಕಿದ್ದ ಮಗ ಮಣ್ಣಪಾಲಿಗಿದ್ದು, ಕನಿಷ್ಟ ಜೀವನಾಧಾರವಾಗಿರುವ ಹೊಲವಾದರೂ 'ಜೀವಂತವಾಗಿರಲಿ' ಎಂದು ಹನುಮಂತಪ್ಪ ನಿನ್ನೆ ಎಸ್.ಆರ್.ಪಾಟೀಲ್ ಅವರೊಂದಿಗೆ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಇಂದು ಬೆಳಗ್ಗೆ ಜಿಲ್ಲಾಧಿಕಾರಿ, ಅಧಿಕಾರಿಗಳು ಮತ್ತು ಕಾರ್ಯಾಚರಣೆಯ ತಜ್ಞರೊಂದಿಗೆ ಸಭೆ ನಡೆಸಿದ ಉಸ್ತುವಾರಿ ಸಚಿವ ಎಸ್.ಆರ್. ಪಾಟೀಲ್ ಅವರು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದಾರೆ.

ಮಗು ಬದುಕಿಲ್ಲ
ಕೊಳವೆ ಬಾವಿಯಲ್ಲಿ ಸಿಲುಕಿರುವ ಬಾಲಕ ತಿಮ್ಮಣ್ಣ ಬದುಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ 160 ಅಡಿ ಆಳದಲ್ಲಿ ಸಿಲುಕಿದ್ದಾನೆ. ಕೊಳೆವ ವಾಸನೆ ಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ತಜ್ಞರು, ಸ್ಥಳೀಯ ಮುಖಂಡರ ಅಭಿಪ್ರಾಯ ಆಧರಿಸಿ ಉತ್ಖನನ ನಿಲ್ಲಿಸುವ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.

ತಿಮ್ಮಣ್ಣನ ಕುಟುಂಬಕ್ಕೆ 5 ಲಕ್ಷ ಪರಿಹಾರ
ಇದೇ ವೇಳೆ ಮಾತನಾಡಿದ ಸಚಿವ ಎಸ್.ಆರ್.ಪಾಟೀಲ್ ಅವರು ಮೃತ ಬಾಲಕ ತಿಮ್ಮಣ್ಣನ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೆ ಬಾಲಕನ ತಂದೆ ಹನುಮಂತಪ್ಪ ಅವರ ಮೇಲೆ ದಾಖಲಿಸಿದ್ದ ಪ್ರಕರಣವನ್ನು ಕೂಡ ಹಿಂಪಡೆದುಕೊಂಡಿದ್ದಾರೆ.

ಸಂಪೂರ್ಣ ಕಾರ್ಯಾಚರಣೆಗೆ ಬೇಕಿತ್ತು 6 ತಿಂಗಳು
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಕಾರ್ಯಾಚರಣಾ ತಜ್ಞರು ಸಂಪೂರ್ಣ ಕಾರ್ಯಾಚರಣೆಗೆ ಸುಮಾರು 6 ತಿಂಗಳ ಕಾಲಾವಕಾಶ ಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಒಂದು ಲಕ್ಷ ಟ್ರಕ್​ ಮಣ್ಣು ತೆಗೆಯಬೇಕು, ಅಕ್ಕ -ಪಕ್ಕ ಮುನ್ನೂರು ಅಡಿಯಷ್ಟು ಕಾರ್ಯಾಚರಣೆ ಆಗಬೇಕು, ಹತ್ತು ಲಕ್ಷ ಕ್ಯೂಸಿಕ್​ ಮೀಟರ್​ ಮಣ್ಣು ಶೇಖರಣೆ ಆಗುತ್ತೆ, ಶೇಖರಣೆ ಆಗಿರುವ ಮಣ್ಣು ಹಾಕಲು  1500 ಅಡಿ ಜಾಗ ಬೇಕು ಎಂದು ಮಣ್ಣು ತಜ್ಙ ಶ್ರೀನಿವಾಸ್​ ಮೂರ್ತಿ ತಿಳಿಸಿದ್ದರು. ಹೀಗಾಗಿ, ಕಾರ್ಯಾಚರಣೆ ಅಸಾಧ್ಯವಾದುದರಿಂದ ಸಭೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.