ರೈಲ್ವೆ ವಿಶ್ವವಿದ್ಯಾಲಯ ಸ್ಥಾಪನೆ: ಡೀವಿ ಕನಸು

ಶಿವಮೊಗ್ಗ: ರೈಲ್ವೆ ಅಧ್ಯಯನ ಹಾಗೂ ನೇಮಕಾತಿಗಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶವಿದೆ ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ ಸದಾನಂದಗೌಡ ಹೇಳಿದರು.
ಶೀಕಾರಿಪುರ ಉಪಚುನಾವಣೆ ಪ್ರಚಾರಕ್ಕಾಗಿ ಆಮಮಿಸಿದ್ದ ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಚೀನಾದಲ್ಲಿ 35ರೈಲ್ವೆ ವಿಶ್ವವಿದ್ಯಾಲಯಗಳಿವೆ. ಇದೇ ಮಾದರಿಯಲ್ಲಿ ಭಾರತದಲ್ಲಿಯೂ ವಿಶ್ವವಿದ್ಯಾಲಯ ಸ್ಥಾಪನೆಗೆ ಮಾನವ ಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಈ ವಿಶ್ವವಿದ್ಯಾಲಯದ ಮೂಲಕವೇ ಮುಂದಿನ ದಿನಗಳಲ್ಲಿ ರೈಲ್ವೆ ನೇಮಕಾತಿ ನಡೆಯುವುದು ಎಂದರು.
ನೇಮಕಾತಿ ವೇಳೆ ರಾಜ್ಯದ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಬಗ್ಗೆ ಕೇಳಿದಾಗ, ನೇಮಕ ಸಂದರ್ಭದಲ್ಲಿ ಮೆರಿಟ್ ವಿಷಯದಲ್ಲಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಹಳೆ ಯೋಜನೆಗಳ ಬಗ್ಗೆ ಗಮನ ನೀಡಲಾಗುವುದು. ಅಂಕೋಲಾ-ಹೊನ್ನಾವರ, ಗದಗ-ಬೆಟಗೇರಿ ಸೇರಿದಂತೆ ಮೂರ್ನಾಲ್ಕು ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಸಭೆ ನಡೆಸಲಾಗುವುದು. ಪರಿಸರ, ಅರಣ್ಯ ಸಂಬಂಧಿ ಮೂರ್ನಾಲ್ಕು ತಿಂಗಳಲ್ಲಿ ಕ್ಲಿಯರೆನ್ಸ್ ನೀಡಲಾಗುವುದು.
ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಪಾಲು ನೀಡುವುದರಿಂದ ಹಿಂದೆ ಸರಿದಿರುವ ಬಗ್ಗೆ ರಾಜ್ಯದ ಕಾಂಗ್ರೆಸ್ ಸಂಸದರ ಜತೆ ಚರ್ಚಿಸಿದ್ದೇವೆ. ಇದಾದ ನಂತರ ಅನುದಾನ ಪಾಲು ಕೊಡಲು ರಾಜ್ಯ ಸರ್ಕಾರ ಪಾಲು ನೀಡುವುದಕ್ಕೆ ತಾತ್ವಿಕ ಒಪ್ಪಿಗೆ ನೀಡಿದೆ ಎಂದರು.
ಮಹಿಳೆಯರ ರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ನಾಲ್ಕು ಸಾವಿರ ಮಹಿಳಾ ಪೊಲೀಸರ ನೇಮಕಾತಿ ಮಾಡುತ್ತೇವೆ. ಅಗತ್ಯವಿರುವೆಡೆ ಸಿಸಿ ಟಿವಿ ಅಳವಡಿಸಿದ್ದೇವೆ ಎಂದರು.
ದೇಶದಲ್ಲಿ 11,800 ಮಾನವ ಸಹಿತ ಕ್ರಾಸಿಂಗ್ ಇವೆ. ಈ ಸ್ಥಳದಲ್ಲಿ ಓವರ್ ಬ್ರಿಡ್ಜ್ ಅಥವಾ ಅಂಡರ್ ಪಾಸ್ ಮಾಡಲು ಉದ್ದೇಶಿಸಲಾಗಿದೆ. ಇದರ ಒಟ್ಟು ವೆಚ್ಚ ರು.3,600ಕೋಟಿ. ಇದರಲ್ಲಿ ಶೇ.50ರಷ್ಟು ಕೇಂದ್ರ ಸರ್ಕಾರ ಭರಿಸಲಿದೆ. ಉಳಿದ ಅನುದಾನವನ್ನು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳಿಂದ ಪಡೆಯಲಾಗುವುದು ಎಂದರು.
ರೈಲ್ವೆ ಇಲಾಖೆ ನೂತನ ನಿಯಮ, ನಷ್ಟತಡೆ, ಸಂಪನ್ಮೂಲ ಸಂಗ್ರಹಣೆ ಬಗ್ಗೆ ಮೂರು ತಿಂಗಳಲ್ಲಿ ವರದಿ ನೀಡಲು ಸಮಿತಿ ರಚಿಸಲಾಗಿದೆ. ಈ ಸಮಿತಿ ಶಿಫಾರಸುಗಳ ಆಧಾರದ ಮೇಲೆ ಸುಧಾರಣೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


