

ಬೆಂಗಳೂರು: ಕಾರಾಗೃಹದಲ್ಲಿ ತಮ್ಮ ಮೇಲೆ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿಲ್ಲ. ಅನಗತ್ಯವಾಗಿ ನಮ್ಮ ಮೇಲೆ ತೇಜೋವಧೆ ಮಾಡಲಾಗುತ್ತಿದೆ. ಶಿಕ್ಷೆ ಪೂರೈಸಿ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಾಗ ನಮ್ಮನ್ನು ಸಮಾಜ ಕೆಟ್ಟದಾಗಿ ಕಾಣುತ್ತದೆ. ಜೈಲಿನಲ್ಲಿ ಆ ರೀತಿ ನಡೆಯುತ್ತಿದೆ ಎಂದು ನಾವ್ಯಾರೂ ಪತ್ರ ಬರೆದಿಲ್ಲ. ಯಾರು ಬರೆದಿದ್ದಾರೋ ನಮಗೆ ಗೊತ್ತಿಲ್ಲ...'
ಮಹಿಳಾ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಶನಿವಾರ ಕಾರಾಗೃಹಕ್ಕೆ ಭೇಟಿ ನೀಡಿದಾಗ, ಮಹಿಳಾ ಕೈದಿಗಳು ಹೇಳಿಕೊಂಡ ನೋವಿನ ಮಾತುಗಳಿವು. ಬಳಿಕ ಮಾಧ್ಯಮದೊಂದಿಗೆ ಉಮಾಶ್ರೀ ಮಾತನಾಡಿ, ಆರೋಪಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗು ಗೃಹ ಇಲಾಖೆ ಉನ್ನತ ಅಧಿಕಾರಿಗಳ ಜಂಟಿ ಸಮಿತಿ ತನಿಖೆ ನಡೆಸಲಿದೆ. ಅಧಿಕಾರಿಗಳು ಜೈಲಿಗೆ ಬಂದಾಗ ಹಿಂಜರಿಕೆಯಿಲ್ಲದೆ ಸಮಸ್ಯೆ ಹೇಳಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.