

ಬೆಂಗಳೂರು: ಬೆಡ್‌ರೂಂನಲ್ಲಿ ಮಾಡುವ ಕೆಲಸ ರಸ್ತೆಯಲ್ಲಿ ಮಾಡುವುದು ನೈತಿಕತೆಯಲ್ಲ ಎಂದು ಬಿಜೆಪಿ ಸಂದದೆ ಶೋಭಾ ಕರಂದ್ಲಾಜೆ 'ಕಿಸ್ ಆಫ್ ಲವ್' ಆಂದೋಲನವನ್ನು ತೀವ್ರವಾಗಿ ಖಂಡಿಸಿದ್ದಾರೆ.
ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ, ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 'ಕಿಸ್ ಆಫ್ ಲವ್' ಆಂದೋಲನಕ್ಕೆ ಬರದ ತಯಾರಿ ನಡೆಸುತಿದ್ದರೆ, ಮತ್ತೊಂದೆಡೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ನ.22ರಂದು ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಮಾನವ ಹಕ್ಕುಗಳ ಹೋರಾಟಗಾರ್ತಿ ರಚಿತ ತನೇಜ 'ಕಿಸ್ ಆಫ್ ಲವ್' ಆಂದೋಲವನ್ನು ಕೈಗೊಂಡಿದ್ದಾರೆ. ಈ ಆಂದೋಲನಕ್ಕೆ ಯುವ ಪೀಳಿಗೆಯಿಂದ ಬಾರಿ ಬೆಂಬಲ ವ್ಯಕ್ತವಾಗುತ್ತಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, 'ಕಿಸ್ ಆಫ್ ಲವ್' ಆಂದೋಲನವನ್ನು ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ತಿಳಿಸಿದರು.
ನೈತಿಕ ಪೊಲೀಸ್ ಗಿರಿಗೆ ಬಿಜೆಪಿ ಕುಮ್ಮಕ್ಕು ನೀಡುವುದಿಲ್ಲ, ಆದರೆ ಇದನ್ನು ವಿರೋಧಿಸಿ 'ಕಿಸ್ ಆಫ್ ಲವ್' ಆಂದೋಲನ ನಡೆಸುತ್ತಿರುವುದು ಸರಿಯಲ್ಲ. ಇದು ಖಂಡನೀಯ ವಿಚಾರ. ಬೆಡ್ ರೂಂನಲ್ಲಿ ಮಾಡುವ ಕೆಲಸ ನಡುರಸ್ತೆಯಲ್ಲಿ ಮಾಡುವುದು ನೈತಿಕವಲ್ಲ.
ಈ ಆಂದೋಲನವನ್ನು ಎಲ್ಲ ತಂದೆ ತಾಯಂದಿರು ವಿರೋಧಿಸಬೇಕು, ಅಲ್ಲದೆ ಇಂತಹ ಆಚರಣೆಗಳು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮತ್ತಷ್ಟು ಹೆಚ್ಚಾಗಲು ಎಡೆ ಮಾಡಿಕೊಡುತ್ತದೆ ಎಂದು ಶೋಭಾ ತಿಳಿಸಿದರು.
ಇಂತಹ ಅನೈತಿಕ ಆಂದೋಲನ ಆಚರಣೆಗೆ ಒಪ್ಪಿಗೆ ನೀಡಿರುವ ಮೂಲಕ ಇದೊಂದು ಕೆಟ್ಟ ಸರ್ಕಾರ ಎಂದು ಸಾಬೀತಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಶೋಭಾ ಆಕ್ರೋಶ ವ್ಯಕ್ತಪಡಿಸಿದರು.