ತಿರುಪತಿ ತಿಮ್ಮಪ್ಪನಿಗೆ 'ಸುರಪುರಂ' ಘೋಷಣೆ

ಸುರಪುರ: ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂದೇ ಖ್ಯಾತಿ ಗಳಿಸಿರುವ ಆಂಧ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಸ್ಥಾನದಲ್ಲಿ ಸುರಪುರ ಸಂಸ್ಥಾನದ್ದೇ ಅಗ್ರಪೂಜೆ!
ಹೇಗೆಂದು ಅಚ್ಚರಿ ಪಡಬೇಡಿ ಪ್ರತಿವರ್ಷ ತಿರುಪತಿಯಲ್ಲಿ ಬ್ರಹ್ಮೋತ್ಸವ ನಿಮಿತ್ತ ಜರುಗುವ ರಥೋತ್ಸವದಲ್ಲಿ ಸುರಪುರ ಸಂಸ್ಥಾನದಿಂದ ಪ್ರಥಮ ಪೂಜೆ ಜರುಗಿದ ನಂತರವೇ ರಥೋತ್ಸವಕ್ಕೆ ಚಾಲನೆ ಸಿಗುತ್ತದೆ. ಇದು ಸುರಪುರದ ಸಂಸ್ಥಾನದ ಅರಸರ ಕಾಲದಿಂದಲೂ ನಡೆದುಕೊಂಡು ಬಂದ ಪರಂಪರೆ.
ಈ ವರ್ಷವೂ ಇಲ್ಲಿಯ ಸಂಸ್ಥಾನದ ಅಳಿಯರಾದ ವೇಣು ಮಾಧವ ನಾಯಕ ರಥೋತ್ಸವದಲ್ಲಿ ಸಂಸ್ಥಾನದ ರಾಜ ಪ್ರತಿನಿಧಿಯಾಗಿ ಭಾಗವಹಿಸಿದ್ದರು ಶುಕ್ರವಾರ ತಿರುಪತಿಯಲ್ಲಿ ಬ್ರಹ್ಮೋತ್ಸವ ನಿಮಿತ್ತ ವೈಭವದ ರಥೋತ್ಸವ ನಡೆಯಿತು. ರಥದ ಮೇಲಿಂದ 'ಸುರಪುರಂ' ಎಂದು ಜೋರಾಗಿ ಕೂಗಲಾಯಿತು. ನಂತರ ಆರತಿ ತಟ್ಟೆಯೊಂದಿಗೆ ಬಂದ ನಾಯಕ ರಥಕ್ಕೆ ಮಂಗಳಾರತಿ ಮಾಡಿದರು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸಂಸ್ಥಾನದ ಅಗ್ರ ಪೂಜೆ ಮತ್ತೊಮ್ಮೆ ಲಕ್ಷೋಪಲಕ್ಷ ಜನ ಸಾಗರಕ್ಕೆ ಸಾಕ್ಷಿಯಾಯಿತು.
ವೆಂಕಟೇಶ್ವರ ನಾಮದಿಂದ ಪ್ರಖ್ಯಾತಿ: ಸಗರ ನಾಡಿನ ಆರಾಧ್ಯದೈವ ಎಂದೇ ಕರೆಯಿಸಿಕೊಳ್ಳುವ ವೇಣುಗೋಪಾಲ ಸ್ವಾಮಿಯು ತಿರುಪತಿಯ ವೆಂಕಟೇಶ್ವರನ ಹೆಸರಿನಿಂದಲೂ ಪ್ರಖ್ಯಾತಿ ಪಡೆದಿದ್ದಾನೆ. ಇಬ್ಬರೂ ಒಂದೇ ಎಂದು ಕರೆಯಲಾಗುತ್ತದೆ. ಸುರಪುರ ಸಂಸ್ಥಾನದ ಅರಸು ಗೋಪಾಲಸ್ವಾಮಿಯ ಪರಮಭಕ್ತರು. ಒಮ್ಮೆ ವೆಂಕಟೇಶ್ವರ ಸುರಪುರ ಅರಸರ ಕನಸಿನಲ್ಲಿ ಬಂದು, 'ನೀವು ನನ್ನ ಮಹಾನ್ ಭಕ್ತರಾಗಿದ್ದು, ನೀವ್ಯಾರು ತಿರುಪತಿಯ ದರ್ಶನಕ್ಕಾಗಿ ಬರಬಾರದು. ನಿಮಗೆ ಬರುವ ತೊಂದರೆ ಬೇಡ. ನೀವಿದ್ದಲಿಯೇ ದರ್ಶನ ಕೊಡುವೆ' ಎಂದು ತಿಳಿಸಿದ್ದರಂತೆ.
ಹೀಗಾಗಿ ಸ್ವಾಮಿಯ ಆದೇಶದಂತೆ ಇದುವರೆಗೂ ಅಲ್ಲಿಗೆ ಅರಸು ಮನೆತನದ ಯಾರೊಬ್ಬರೂ ಹೋಗುವುದಿಲ್ಲ. ಆ ಕಾರಣದಿಂದ ಅರಸರು ಸುರಪುರದಲ್ಲಿಯೇ ವೇಣುಗೋಪಾಲಸ್ವಾಮಿ ದೇವಸ್ಥಾನ ಕಟ್ಟಿಸಿ, ತಿರುಪತಿಯಲ್ಲಿ ಜರುಗುವ ಪ್ರತಿ ಕಾರ್ಯಕ್ರಮವೂ ಸುರಪುರದಲ್ಲಿ ಜರುಗುವಂತೆ ಮಾಡಿದರು. ಆದರೆ ತಿರುಪತಿಯಲ್ಲಿ ಬ್ರಹ್ಮೋತ್ಸವ ಹಾಗೂ ನವರಾತ್ರಿಯಲ್ಲಿ ಪೂಜೆ ಸಲ್ಲಿಸಲು ರಾಜಪ್ರತಿನಿಧಿಯನ್ನು ಮಾತ್ರ ಕಳುಹಿಸಿಕೊಡಲಾಗುತ್ತದೆ. ವೇಣು ಮಾಧವ ನಾಯಕ ಹಲವು ವರ್ಷಗಳಿಂದ ಇಲ್ಲಿಯ ಸಂಸ್ಥಾನದ ಪ್ರತಿನಿಧಿಯಾಗಿ ತಿರುಪತಿಗೆ ಹೋಗುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


