ಜಿಲ್ಲಾ ಸುದ್ದಿ

'ಫೈಂಡಿಂಗ್ ಫ್ಯಾನ್ನಿ' ವಿರುದ್ಧ ಕನ್ನಡಿಗರ ಪ್ರತಿಭಟನೆ

'ಫೈಂಡಿಂಗ್ ಫ್ಯಾನ್ನಿ' ವಿರುದ್ಧ ಕನ್ನಡಿಗರ ಪ್ರತಿಭಟನೆ
Published On :

ಬೆಂಗಳೂರು: ಕರ್ನಾಟಕ ರಾಜ್ಯದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ದೀಪಿಕಾ ಪಡುಕೋಣೆ ಮತ್ತು ಅರ್ಜುನ್ ಕಪೂರ್ ಅಭಿನಯದ ಚಿತ್ರ 'ಫೈಂಡಿಂಗ್ ಫ್ಯಾನ್ನಿ' ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಚಿತ್ರದಲ್ಲಿ ಉದ್ದೇಶಪೂರ್ವಕವಾಗಿ ಕರ್ನಾಟಕದ ಬಗ್ಗೆ ಅವಹೇಳನಕಾರಿ ಸಂಭಾಷಣೆಗಳನ್ನು ತುರುಕಲಾಗಿದೆ ಎಂದು ನಿರ್ಮಾಪಕ ಸಾರಾ ಗೋವಿಂದು ಆರೋಪಿಸಿದ್ದಾರೆ. ಅಲ್ಲದೆ ಫೈಂಡಿಂಗ್ ಫ್ಯಾನ್ನಿ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಒಂದು ರಾಜ್ಯದ ಬಗ್ಗೆ ಅವಹೇಳಕಾರಿಯಾದ ಸಂಭಾಷಣೆಗಳಿದ್ದರೂ ಸೆನ್ಸಾರ್ ಮಂಡಳಿ ಅದಕ್ಕೆ ಹೇಗೆ ಅನುಮತಿ ನೀಡಿತು ಎಂದೂ ಅವರು ಪ್ರಶ್ನಿಸಿದ್ದಾರೆ.

'ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಕರ್ನಾಟಕದ ನೆಲದಲ್ಲಿ ನಿಂತು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ದೇಶದ ಬಗ್ಗೆಯಾಗಲಿ ಅಥವಾ ರಾಜ್ಯದ ಬಗ್ಗೆಯಾಗಲಿ ಅವಹೇಳನ ಮಾಡುವಂತಹ ಚಿತ್ರಗಳನ್ನು ಕರ್ನಾಟಕದ ಯಾವ ಮೂಲೆಯಲ್ಲಿಯೂ ಬಿಡುಗಡೆ ಮಾಡಲು ಬಿಡುವುದಿಲ್ಲ' ಎಂದು ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ. ಅಲ್ಲದೆ ಚಿತ್ರ ಬಿಡುಗಡೆಗೆ ಅನುಮತಿ ನೀಡದಂತೆ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಹಾಗೂ ಗೃಹ ಸಚಿವ ಕೆ.ಜೆ.ಜಾರ್ಜ್ ಅವರಲ್ಲಿ ದೂರು ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಚಿತ್ರದ ಸನ್ನಿವೇಶವೊಂದರಲ್ಲಿ ಕಾರೊಂದು ಕರ್ನಾಟಕದ ಗಡಿಯಲ್ಲಿ ಕೆಟ್ಟು ನಿಲ್ಲುತ್ತದೆ. ಕೋಪದಿಂದ ಕಾರಿನಿಂದ ಕೆಳಗೆ ಇಳಿಯುವ ನಾಯಕ ಅರ್ಜುನ್ ಕಪೂರ್ ಕೋಪದಿಂದ "ಬ್ಲಡಿ ಮೆಂಟಲ್ ಸ್ಟೇಟ್" ಎಂದು ಹೇಳುತ್ತಾನೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಚಿತ್ರವನ್ನು ಬಿಡುಗಡೆ ಮಾಡದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿವಾದಗಳಿಂದಲೇ ಖ್ಯಾತಿಯಾಗುತ್ತಿರುವ ಫೈಂಡಿಂಗ್ ಫ್ಯಾನ್ನಿ ಚಿತ್ರ, ಈ ಹಿಂದೆಯೂ ಕೂಡ ವಿವಾದಕ್ಕೆ ಗ್ರಾಸವಾಗಿತ್ತು. ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರು 'ಮದುವೆಯಾಗಿದ್ದರೂ ತಾವು ವರ್ಜಿನ್' ಎಂದು ಹೇಳುತ್ತಾರೆ. ಇದು ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೆ ಸೆನ್ಸಾರ್ ಮಂಡಳಿ ಕೂಡ ಚಿತ್ರದಲ್ಲಿನ ಈ ಸನ್ನಿವೇಶವನ್ನು ತೆಗೆದುಹಾಕುವಂತೆ ಸೂಚಿಸಿತ್ತು. ಆದರೆ ಚಿತ್ರಕ್ಕೆ ಈ ಸನ್ನಿವೇಶ ಪ್ರಮುಖವಾಗಿದ್ದು, ಸನ್ನಿವೇಶವನ್ನು ತೆಗೆಯದಂತೆ ಚಿತ್ರತಂಡ ಮನವಿ ಮಾಡಿತ್ತು. ಬಳಿಕ ಸೆನ್ಸಾರ್ ಮಂಡಳಿ ಈ ಸಂಭಾಷಣೆಗೆ ಅನುಮತಿ ನೀಡಿತ್ತು.

ಬಾಲಿವುಡ್‌ನ ಹಲವು ಚಿತ್ರಗಳು ವಿವಾದಗಳಿಂದಲೇ ಹೆಸರಾಗುತ್ತಿದ್ದು, ಈ ಹಿಂದೆಯೂ ಕೂಡ ಅಜಯ್ ದೇವಗನ್ ಅಭಿನಯದ 'ಸಿಂಗಂ' ಚಿತ್ರದಲ್ಲಿ ಕನ್ನಡಿಗರ ಬಗ್ಗೆ ಅವಹೇಳನ ಮಾಡಲಾಗಿತ್ತು ಎಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ಬಳಿಕ ಚಿತ್ರತಂಡ ಕ್ಷಮೆಯಾಚಿಸಿತ್ತು. ಶಾರುಖ್ ಖಾನ್ ಅಭಿನಯದ 'ಚೆನ್ನೈಎಕ್ಸ್‌ಪ್ರೆಸ್‌' ಚಿತ್ರದ ಮೇಲೂ ಇಂತಹುದೇ ವಿವಾದದ ಕರಿನೆರಳು ಇತ್ತು. ವಿವಾದಾತ್ಮಕ ಸನ್ನಿವೇಶಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರ ಬಿಡುಗಡೆಗೆ ಅನುಮತಿ ನೀಡಲಾಗಿತ್ತು.

ವಿವಾದಾತ್ಮಕ 'ಫೈಡಿಂಗ್ ಫ್ಯಾನ್ನಿ' ಮೇಕಿಂಗ್ ಟ್ರೇಲರ್ - ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.