

ಬೆಂಗಳೂರು: ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶನಿವಾರ ಸಂಜೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಎಲ್ಲಾ ಪೆಟ್ರೋಲ್ ಬಂಕ್ಗಳ ಮಾರಾಟ ವಹಿವಾಟನ್ನು ಸ್ಥಗಿತಗೊಳಿಸುವುದಾಗಿ ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಸಂಘಟನೆ ತಿಳಿಸಿದೆ.
ಕಂಪನಿಗಳ ಪರ ಮತ್ತು ಮಾರಾಟಗಾರರ ವಿರುದ್ಧವಾಗಿರುವ `ಮಾರ್ಕೆಟ್ ಡಿಸಿಪ್ಲಿನ್ ಗೈಡ್ಲೈನ್' (ಎಂಡಿಜಿ) ಕಾಯಿದೆ2012ನ್ನು ಕೂಡಲೇ ರದ್ದುಪಡಿ ಸಬೇಕು. ಸುಮಾರು ಒಂದೂವರೆ ವರ್ಷಗಳಿಂದ ಏರಿಕೆ ಮಾಡದ ಮಾರಾಟಗಾರರ ಕಮಿಷನ್ ಅನ್ನು ಕನಿಷ್ಠ ಶೇ.5ಕ್ಕೆ ಏರಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಹಮ್ಮಿ ಕೊಳ್ಳಲಾಗಿದೆ ಎಂದು ಸಂಘಟನೆ ಕಾರ್ಯದರ್ಶಿ ರಂಜಿತ್ ಹೆಗಡೆ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಶನಿವಾರ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನಮ್ಮ ಬೇಡಿಕೆಗಳ ಕುರಿತು ಗ್ರಾಹಕರಲ್ಲಿ ಅರಿವು ಮೂಡಿಸುತ್ತೇವೆ. ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಪೆಟ್ರೋಲ್
ಬಂಕ್ ಬಂದ್ ಮಾಡುತ್ತೇವೆ ಎಂದರು. ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ನ ಅಧ್ಯಕ್ಷ ಬಿ.ಆರ್. ರವೀಂದ್ರನಾಥ್ ಮಾತನಾಡಿ, ನಮ್ಮ ಒಂದು
ದಿನದ ಸಾಂಕೇತಿಕ ಮುಷ್ಕರವನ್ನು ಮನಗಂಡು ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸ ಬೇಕು. ಇಲ್ಲದಿದ್ದರೆ ಏ.29ರಂದು ದೇಶಾದ್ಯಂತ ಪೆಟ್ರೋಲ್ ಬಂಕ್ಗಳನ್ನು ಬಂದ್ ಮಾಡಿ, ಪೆಟ್ರೋಲ್, ಡೀಸೆಲ್ ಸೇರಿದಂತೆ ಸಂಪೂರ್ಣ ಮಾರಾಟವನ್ನು ಸ್ಥಗಿತಗೊಳಿಸಲಾಗುವುದು.ಅಷ್ಟೇ ಅಲ್ಲ ಸರ್ಕಾರಿ ಸಾಮ್ಯದ ಎಲ್ಲ ತೈಲ ಕಂಪನಿಗಳಿಂದ ಖರೀದಿಯನ್ನೂ ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು.