ಜಿಲ್ಲಾ ಸುದ್ದಿ

ಧನದಾಹಿ ಪತಿಗೆ ಒದೆ

ಧನದಾಹಿ ಪತಿಗೆ ಒದೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ವರದಕ್ಷಿಣೆ ತರುವಂತೆ ಪೀಡಿಸಿದ ಪತಿರಾಯ, ಪತ್ನಿಯನ್ನು 15 ದಿನಗಳ ಕಾಲ ಗೃಹಬಂಧನದಲ್ಲಿರಿಸಿ ಹೊಡೆದು ಚಿತ್ರಹಿಂಸೆ ನೀಡಿದ ಅಮಾನುಷ ಘಟನೆ ಮೂಡಲಪಾಳ್ಯದಲ್ಲಿ ನಡೆದಿದೆ.

ವರದಕ್ಷಿಣೆಗಾಗಿ ಪತಿಯಿಂದ ತೀವ್ರ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದ ಮಂಡ್ಯ ಮೂಲದ ಶೋಭಾಳನ್ನು ಚಿಕಿತ್ಸೆಗಾಗಿ ವಿಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾನುವಾರ ಪ್ರಕರಣ ಬೆಳಕಿಗೆ ಬಂದ ನಂತರ ರೊಚ್ಚಿಗೆದ್ದ ಶೋಭಾಳ ಸಂಬಂಧಿಕರು ಪತಿ ವೇಣುಗೋಪಾಲ್‍ನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ವರದಕ್ಷಿಣೆ ಕಾರಣಕ್ಕಾಗಿ ತಮ್ಮ ಮಗಳ ಮೇಲೆ ಪತಿ ವೇಣುಗೋಪಾಲ್ ತೀವ್ರ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಶೋಭಾಳ ಪೋಷಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಜಯನಗರ ಪೊಲೀಸರು, ವೇಣುಗೋಪಾಲ್ ವಿರುದ್ಧ ಕೊಲೆ ಯತ್ನ ಕೇಸು ದಾಖಲಿಸಿಕೊಂಡಿದ್ದಾರೆ.

ಬ್ಯಾಂಕ್ ಉದ್ಯೋಗಿ: ವೇಣುಗೋಪಾಲ್‍ನದ್ದು ಮೂಲತಃ ಮಾಗಡಿ ತಾಲೂಕು ಕುತ್ತೇನಗಟ್ಟಿ ಗ್ರಾಮ. ಮೂರು ವರ್ಷಗಳ ಹಿಂದೆ ಮಂಡ್ಯ ಜಿಲ್ಲೆ ಕಾಡುಕೊತ್ತೇನಹಳ್ಳಿ ಗ್ರಾಮದ ಶೋಭಾ ಜತೆ ವಿವಾಹವಾಗಿತ್ತು.

ಮದುವೆಯ ಸಂದರ್ಭದಲ್ಲಿ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದೇನೆಂದು ಹೇಳಿದ್ದ. ಇದನ್ನೇ ನಂಬಿ ರು.2 ಲಕ್ಷ ವರದಕ್ಷಿಣೆ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಇತ್ತ ತನ್ನ ಬಂಧುಗಳು, ಸ್ನೇಹಿತರೆದುರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದ. ದಿನಗಳೆದಂತೆ ಹೆಂಡತಿಗೂ ರಿಯಲ್ ಎಸ್ಟೇಟ್ ವ್ಯವಹಾರದ ಕಥೆ ಹೇಳಿದ್ದ. ಕೆಲಸವಿಲ್ಲದೆ ಅಲೆಯುತ್ತಿದ್ದವನ ಖರ್ಚು ವೆಚ್ಚಕ್ಕೆ ಶೋಭಾ ತನ್ನ ಬಳಿಯಿದ್ದ ಹಣವೆಲ್ಲ ನೀಡಿದ್ದಳು. ಸಾಲದ್ದಕ್ಕೆ ಚಿನ್ನಾಭರಣ ಗಿರವಿ ಇಟ್ಟು ದುಡ್ಡು ಕೊಟ್ಟಿದ್ದಳು.

ಇಷ್ಟು ಸಾಲದೆಂಬಂತೆ ತವರಿನಿಂದಲೂ ಸಾಕಷ್ಟು ಹಣ ತಂದಿದ್ದಳು. ಆದರೂ ವೇಣುಗೋಪಾಲನ ಧನದಾಹ ತೀರಲಿಲ್ಲ. ಮತ್ತಷ್ಟು ಹಣ ತರುವಂತೆ ಒತ್ತಾಯಿಸಿದಾಗ ಶೋಭಾ ನಿರಾಕರಿಸಿದಳು. ಇದರಿಂದ ಕುಪಿತನಾಗಿ ವೇಣುಗೋಪಾಲ್ ಕಿರಿಕಿರಿ ಶುರು ಮಾಡಿದ. 15 ದಿನಗಳ ಹಿಂದೆ ವರದಕ್ಷಿಣೆ ತರುವಂತೆ ಕೂಡಿ ಹಾಕಿ ದೈಹಿಕ, ಮಾನಸಿಕ ಹಿಂಸೆ ನೀಡಿದ್ದ.

ಹಿಗ್ಗಾ ಮಗ್ಗಾ ಒದೆ: ಎರಡು ದಿನಗಳ ಹಿಂದೆ ಶೋಭಾ ಪೋಷಕರು ಬೆಂಗಳೂರಿಗೆ ಬಂದಿದ್ದರು. ಅಲ್ಲಿ ತಮ್ಮ ಮಗಳಿಗೆ ನೀಡಿದ ವರದಕ್ಷಿಣೆ ಕಿರುಕುಳ ಸಂಗತಿ ಬೆಳಕಿಗೆ ಬಂದಿದೆ.

ಈ ವಿಷಯವನ್ನು ಅವರು ಮನೆಯವರಿಗೆ, ಸಂಬಂಧಿಕರಿಗೆ ತಿಳಿಸಿದ್ದಾರೆ. ವೇಣುಗೋಪಾಲ್ ತಂದೆ-ತಾಯಿಯರಿಗೂ ಈ ವಿಷಯ ಗೊತ್ತಿತ್ತು. ಆದರೆ ಅವರು ಯಾರಿಗೂ ಹೇಳಿರಲಿಲ್ಲ. ಭಾನುವಾರ ಬೆಳಗ್ಗೆ ಆತ ಮನೆಗೆ ಬಂದಿದ್ದ ಶೋಭಾಳ ಸಂಬಂಧಿಕರು ಆಕೆಯ ಪರಿಸ್ಥಿತಿ ಕಂಡು ರೊಚ್ಚಿಗೆದ್ದರು. ಅಲ್ಲಿಯೇ ಇದ್ದ ವೇಣುಗೋಪಾಲ್ನನ್ನು ಕಾರಣ ಕೇಳಿದಾಗ, ಆತ ಅವರ ಬಳಿ ಅಸಭ್ಯವಾಗಿ ವರ್ತಿಸಿದ ಎನ್ನಲಾಗಿದೆ. ಹೀಗಾಗಿ ಶೋಭಾಳ ಸಂಬಂಧಿಕರು, ಆತನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾರೆ. ಈ ವೇಳೆಗಾಗಲೇ, ಶೋಭಾಳನ್ನು ಮನೆಯಿಂದ ಕರೆತಂದು ವಿಜಯನಗರ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.