

ಬೆಂಗಳೂರು: ಬಿಬಿಎಂಪಿ ಚುನಾವಣೆ ಸಂಬಂಧದ್ವಿಮುಖ ನೀತಿಯನ್ನು ಮುಂದುವರಿಸಿರುವ ರಾಜ್ಯ ಸರ್ಕಾರ, ಒಂದೆಡೆ ಹೈಕೋರ್ಟ್‍ನಲ್ಲಿ ಮೇಲ್ಮನವಿ ವಿಚಾರಣೆಗೆ ಸಮಯeವಕಾಶ ಕೇಳಿದರೆ, ಮತ್ತೊಂದೆಡೆ 198 ವಾರ್ಡ್‍ಗಳಿಗೆ ಮೀಸಲು ಪಟ್ಟಿಯನ್ನು ಅಂತಿಮಗೊಳಿಸಿ ಚುನಾವಣೆ ಆಯೋಗಕ್ಕೆ ರವಾನಿಸಿದೆ.
ಹೈಕೋರ್ಟ್‍ನಲ್ಲಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವಿಭಾಗೀಯ ಪೀಠದಲ್ಲಿ ಸೋಮವಾರ ನಡೆಯಿತು. ಅಚ್ಚರಿ ಬೆಳವಣಿಗೆಯಲ್ಲಿ ಮೇಲ್ಮನವಿ ವಿಚಾರಣೆ ಬುಧವಾರಕ್ಕೆ ಮುಂದೂಡಲು ಸರ್ಕಾರ ಮನವಿ ಮಾಡಿಕೊಂಡಿದೆ. ಅಸಮಾಧಾನ ವ್ಯಕ್ತಪಡಿಸುತ್ತಲೇ ಹೈಕೋರ್ಟ್ ಸಮ್ಮತಿ ಸೂಚಿಸಿದೆ. ಇದರ ನಡುವೆ ಹೈಕೋರ್ಟ್‍ನ ಏಕಸದಸ್ಯ ಪೀಠದ ಆದೇಶದಂತೆ ನ್ಯಾಯಾಂಗ ನಿಂದನೆ ತಪ್ಪಿಸಿಕೊಳ್ಳಲು ಮೀಸಲು ಪಟ್ಟಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ.
ರಾಜ್ಯ ಚುನಾವಣೆ ಆಯೋಗಕ್ಕೆ ಅಂತಿಮ ಮೀಸಲು ಪಟ್ಟಿಯನ್ನೂ ಸರ್ಕಾರ ಸೋಮವಾರ ಸಂಜೆ ತಲುಪಿಸಿದೆ. ಹೀಗಾಗಿ, ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭಿಸಿರುವ ಚುನಾವಣೆ ಆಯೋಗ ಹೈಕೋರ್ಟ್ ನ ಆದೇಶದಂತೆಯೇ ಮೇ 30ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಲು ನಿರ್ಧರಿಸಿದೆ. ಸರ್ಕಾರ ನೀಡಿರುವ ಮೀಸಲಿನಂತೆಯೇ ಚುನಾವಣೆ ವೇಳಾಪಟ್ಟಿ ಪ್ರಕಟಿಸುವ ಪ್ರಕ್ರಿಯೆ ಆರಂಭಿಸಿದ್ದು, ಮೇ 20ರ ನಂತರ ಗ್ರಾಪಂ ಚುನಾವಣೆ ನಡೆಯಬೇಕಿರುವುದರಿಂದ ಅದಕ್ಕೂ ಮುನ್ನ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಮುಗಿಸಲು ನಿರ್ಧರಿಸಿದೆ. ಏ.14ರಂದು ಮಂಗಳವಾರ ಸರ್ಕಾರಿ ರಜೆ ಇರುವುದರಿಂದ ಬುಧವಾರದಿಂದ ಈ ಪ್ರಕ್ರಿಯೆ ಚುರುಕುಗೊಳ್ಳಲಿದೆ.
ಅಲ್ಲದೆ ಬುಧವಾರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಸರ್ಕಾರದ ಮೇಲ್ಮನವಿಯ ವಿಚಾರಣೆಯೂ ನಡೆಯಲಿದೆ. ಬಿಬಿಎಂಪಿ ಚುನಾವಣೆ ನಡೆಯುವ ಸ್ಪಷ್ಟತೆ ಬಗ್ಗೆ ಹೈಕೋರ್ಟ್‍ನಲ್ಲಿ ನಡೆಯುವ ಮೇಲ್ಮನವಿ ವಿಚಾರಣೆ ಮೇಲೆ ನೆಟ್ಟಿದೆ. ಇಲ್ಲಿ ಚುನಾವಣೆ ತಡೆಗೆ ಅವಕಾಶ ನೀಡದಿದ್ದರೆ, ಚುನಾವಣೆ ಆಯೋಗ ಏ.16ರಂದೇ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.