ಬಿಬಿಎಂಪಿ ಚುನಾವಣೆ: ಹೊಸ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ಚಿಂತನೆ
ಬಿಬಿಎಂಪಿಗೆ ಶತಾಯಗತಾಯ ಚುನಾವಣೆ ನಡೆಸಬಾರದು ಎಂದು ನಿರ್ಧರಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಇದಕ್ಕಾಗಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ...

ಬೆಂಗಳೂರು: ಬಿಬಿಎಂಪಿಗೆ ಶತಾಯಗತಾಯ ಚುನಾವಣೆ ನಡೆಸಬಾರದು ಎಂದು ನಿರ್ಧರಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಇದಕ್ಕಾಗಿ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಬಿಬಿಎಂಪಿಯನ್ನು ಸೂಪರ್‍ಸೀಡ್ ಮಾಡಿ, ಸರ್ಕಾರದಿಂದ ಆಡಳಿತಾಧಿಕಾರಿ ನೇಮಿಸಿ ಚುನಾವಣೆಗೆ ಆರು ತಿಂಗಳು `ಜಾಮೀನು' ಪಡೆದುಕೊಳ್ಳಲು ಚಿಂತಿಸಿದೆ. ಈ ಮೂಲಕ ವಿಷಯವನ್ನು ಮತ್ತಷ್ಟು ಜಟಿಲಗೊಳಿಸಲಾಗಿದೆ. ಬಿಬಿಎಂಪಿಯ ಜನಪ್ರತಿನಿಧಿಗಳ ಅವಧಿ ಮುಗಿಯಲು ಕೇವಲ 5 ದಿನ ಬಾಕಿ ಇರುವ ಸಂದರ್ಭದಲ್ಲಿ, ಪಾಲಿಕೆಯಲ್ಲಿ ಹಣದುರುಪಯೋಗ, ಅವ್ಯವಹಾರ ನಡೆದಿದೆ ಎಂಬ ಕಾರಣ ನೀಡಿ ಸೂಪರ್‍ಸೀಡ್ ಮಾಡಲು ನಿರ್ಧರಿಸಲಾಗಿದೆ.
ಹೀಗೆ ಮಾಡಿ, ಆಡಳಿತಾಧಿಕಾರಿ ನೇಮಿಸುವುದರಿಂದ ಆರು ತಿಂಗಳು ಚುನಾವಣೆಯನ್ನು ಮುಂದೂಡಲು ಸಾಧ್ಯವಾಗುತ್ತದೆ. ಚುನಾವಣೆ ಸಂಬಂಧ ಹೈಕೋಟ್ರ್ ನಲ್ಲಿ ಮೇಲ್ಮನವಿ ವಿಚಾರಣೆ ನಡೆಯುತ್ತಿದ್ದರೂ ಸಚಿವ ಸಂಪುಟ ಸಭೆಯಲ್ಲಿ ಇಂಥ ನಿರ್ಧಾರ ಕೈಗೊಂಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಸೂಪರ್ ಸೀಡ್ ವಿಚಾರ ಪ್ರಸ್ತಾಪವಾಗಿ ಅನುಮೋದನೆ ದೊರೆತಿದ್ದರೂ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ಈ ವಿಷಯವನ್ನು ಬಹಿರಂಗಪಡಿಸಲಿಲ್ಲ.
ಬಿಬಿಎಂಪಿಯಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದಿರುವ ಕಾಮಗಾರಿಗಳ ಅವ್ಯವಹಾರ ಹಾಗೂ ಆರ್ಥಿಕ ಅಶಿಸ್ತಿನ ಬಗ್ಗೆ ತನಿಖೆ ನಡೆಸಲು ಐಎಎಸ್ ಅಧಿಕಾರಿ ರಾಜೇಂದ್ರಕುಮಾರ್ ಕಟಾರಿಯಾ ನೇತೃತ್ವದ ಏಕಸದಸ್ಯ ಸಮಿತಿಯನ್ನು ಸರ್ಕಾರ ರಚಿಸಿತ್ತು. ಈ ವರದಿ ಆಧರಿಸಿ ಮಾ.18ರಂದು ಎಲ್ಲ ಕಾರ್ಪೊರೇಟರ್‍ಗಳಿಗೆ ಕಾರಣ ಕೇಳಿ ಸರ್ಕಾರ ನೋಟಿಸ್ ಜಾರಿ ಮಾಡಿದ್ದಲ್ಲದೇ ಬಿಬಿಎಂಪಿಯನ್ನು ಏಕೆ ವಿಸರ್ಜಿಸಬಾರದು ಎಂದು ಪ್ರಶ್ನಿಸಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಕೌನ್ಸಿಲ್ ಸಭೆಯಲ್ಲಿ ಮಾ.30ರಂದು ಬಿಜೆಪಿ ಆಡಳಿತ ಒಂದು ನಿರ್ಣಯ ಕೈಗೊಂಡು, ಸರ್ಕಾರಕ್ಕೆ ಕಾಲಾವಕಾಶ ಕೇಳಲು ನಿರ್ಧರಿಸಿತ್ತು. ಎಷ್ಟು ಕಾಲಾವಕಾಶ ಎಂದು ನಮೂದಿಸಿರಲಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಆರ್ಥಿಕ ಅಶಿಸ್ತು ಹಾಗೂ ಅವ್ಯವಹಾರ ಹೆಚ್ಚಾಗಿರುವ ಕಾರಣ ನೀಡಿ ಸೂಪರ್‍ಸೀಡ್ ಅಥವಾ ವಿಸರ್ಜನೆ ಅಸ್ತ್ರ ಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ.
5 ದಿನ ಅಷ್ಟೇ ಅವಧಿ
ಬಿಬಿಎಂಪಿಯ ಜನಪ್ರತಿನಿಧಿಗಳ ಆಡಳಿತ ಅವಧಿ ಏ.22ಕ್ಕೆ ಅಂತ್ಯಗೊಳ್ಳುತ್ತದೆ. ಇನ್ನು ಐದೇ ದಿನಗಳಿರುವಾಗ ಈಗ ಸೂಪರ್‍ಸೀಡ್ ಅಗತ್ಯ ಏನು ಎಂಬ ಪ್ರಶ್ನೆ ಎದುರಾಗಿದ್ದರೂ ಈ ಸಂಬಂಧ ಸರಕಾರ ಕಾನೂನು ತಜ್ಞರ ನೆರವು ಪಡೆದಿದೆ. ಏ.22ರ ನಂತರ ಆಡಳಿತಾಧಿಕಾರಿ ನೇಮಕ ಮಾಡಿದರೆಮ ಅವರ ಅವಧಿ ಮುಂದಿನ ಚುನಾವಣೆ ಮುಗಿಯುವವರೆಗೆ ಮಾತ್ರ ಇರುತ್ತದೆ. ಅದೇ ಸೂಪರ್‍ಸೀಡ್ ಅಥವಾ ವಿಸರ್ಜನೆ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸುವಾಗ `ಮುಂದಿನ ಆರು ತಿಂಗಳ ಅವಧಿಗೆ' ಎಂದು ನಮೂದಿಸಬಹುದು. ಹೀಗಾಗಿ, ಸರ್ಕಾರ ಇಂತಹ ಪ್ರಯತ್ನಕ್ಕೆ ಕೈ ಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


