

ಬೆಂಗಳೂರು: ಇತ್ತೀಚಿನ ದಿನದಲ್ಲಿ ಚುನಾವಣೆ ಪ್ರಕ್ರಿಯೆ ಕ್ರಮೇಣ ಕಲುಷಿತಗೊಳ್ಳುತ್ತಿದ್ದು, ರಾಜ್ಯ ದಲ್ಲಾಳಿಗಳ ಸಾಮ್ರಾಜ್ಯವಾಗಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್‍ಗೆ ತಡೆಯಾಜ್ಞೆ ನೀಡುವಂತೆ ಕೋರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾ.ಎ.ಎನ್. ವೇಣುಗೋಪಾಲ ಗೌಡ ಅವರಿದ್ದ ಏಕಸದಸ್ಯ ಪೀಠ, ಇಂದಿನ ದಿನದಲ್ಲಿ ಜನಪ್ರತಿನಿಧಿಗಳಿಗೆ ಕಾನೂನಿನ ಭಯವೇ ಇಲ್ಲವಾಗಿದ್ದು, ದಲ್ಲಾಳಿಗಳು ರಾಜ್ಯವನ್ನು ಆಳುತ್ತಿದ್ದಾರೆ. ನಾನು ಕಂಡಂತೆ ಕರ್ನಾಟಕದ ಇತಿಹಾಸದಲ್ಲಿ ವೀರೇಂದ್ರ ಪಾಟೀಲ್ ಹೊರತುಪಡಿಸಿ ಉಳಿದ ಎಲ್ಲ ಮುಖ್ಯಮಂತ್ರಿಗಳ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದೆ. ಅಧಿಕಾರಕ್ಕೇರುವ ಮುನ್ನ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಅವರು ದೇವರು, ರೈತರು ಹಾಗೂ ನಾಯಕರುಗಳ ಹೆಸರು ಹೇಳಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ನಂತರ ಎಲ್ಲವನ್ನೂ ತಕ್ಷಣವೇ ಮರೆತು ಬಿಡುತ್ತಾರೆ. ಇವರಿಗೆ ಸಮಾಜದ ಮತ್ತು ಕಾನೂನಿನ ಭಯವೇ ಇಲ್ಲದಂತಾಗಿದೆ. ಅವರು ಮಾಡುವ ತಪ್ಪಿಗೆ ದೇವರ ಹೆಸರಲ್ಲಿ ಹೋಮ ಹವನ ಮಾಡಿಸಿ ಒಂದಷ್ಟು ಜನರಿಗೆ ಅನ್ನದಾನ ಮಾಡಿದರೆ ಎಲ್ಲವೂ ಮಾಫಿ ಆಗುತ್ತದೆಎಂಬ ನಂಬಿಕೆ ನಾಯಕರದ್ದು. ಅದಲ್ಲದೇ ತಮ್ಮನ್ನು ಸಮರ್ಥಿಸಿಕೊಳ್ಳಲು ವಕೀಲರನ್ನು ನೇಮಿಸಿದರೆ ಅವರು ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂಬ ಧೈರ್ಯ ಅವರಲ್ಲಿ
ಮನೆ ಮಾಡಿದೆ ಎಂದು ಜನಪ್ರತಿನಿಧಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ.
ಸಿಎಜಿ, ರಾಜ್ಯ ಸರ್ಕಾರಕ್ಕೆ ನೋಟಿಸ್: ಅರ್ಜಿದಾರ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಹಾ ಲೇಖಪಾಲಕರ (ಸಿಎಜಿ) ವರದಿಯ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಡಿನೋಟಿಫಿಕೇಷನ್ ಸಂಬಂಧ ಸಿಎಜಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ವರದಿ ಈಗ ಸರ್ಕಾರದ ಸ್ವತ್ತಾಗಿದೆ. ಆದ್ದರಿಂದ ಸರ್ಕಾರ ಮತ್ತು ಸಿಎಜಿ ವಾದವನ್ನು ಆಲಿಸಬೇಕಾದ ಅಗತ್ಯವಿರುವುದಾಗಿ ಏಕಸದಸ್ಯ ಪೀಠ ಅಭಿಪ್ರಾಯಪಟ್ಟು, ಸಿಎಜಿ ಹಾಗೂ ರಾಜ್ಯ ಸರ್ಕಾರವನ್ನು ಪ್ರತಿವಾದಿಗಳನ್ನಾಗಿಸಿ ನೊಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಪ್ರಕರಣದ ವಿವರ
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ್ ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದರು. ಸರ್ವೆ ನಂ. 251ರ ಹಲಗೆವಡೇರಹಳ್ಳಿ, ಸರ್ವೆ ಸಂಖ್ಯೆ 5/1 ಮತ್ತು 6/3ರ ಬಿಳೇಕಹಳ್ಳಿ ಮತ್ತು ಸರ್ವೆ ಸಂಖ್ಯೆ 117ರ ಜೆ.ಬಿ. ಕಾವಲ್‍ನಲ್ಲಿ ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ್ದು, ಇದು ಸಿಎಜಿ
ವರದಿಯಲ್ಲಿ ಉಲ್ಲೇಖವಾಗಿದೆ ಎಂದು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.