

ಬೆಂಗಳೂರು: ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳನ್ನು ಭೇಟಿ ಮಾಡಿ ಸಣ್ಣಪುಟ್ಟ ಮೊತ್ತ ನೀಡಿ ಸಾಂತ್ವನ ಹೇಳುವುದರಿಂದ ಆತ್ಮಹತ್ಯೆ ಪ್ರಕರಣಗಳು ನಿಲ್ಲುವುದಿಲ್ಲ ಎಂದು ಆಂಗ್ಲ ನಿವೃತ್ತ ಪ್ರಾಧ್ಯಾಪಕ ಡಾ.ಜಿ ರಾಮಕೃಷ್ಣ ಅಭಿಪ್ರಾಯಪಟ್ಟರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಸಮುದಾಯ ಬೆಂಗಳೂರು ಸಂಘಟನೆ ಏರ್ಪಡಿಸಿದ್ದ ಸಂಕಷ್ಟದಲ್ಲಿ ನೇಗಿಲ ಯೋಗಿ ಸಾಂಸ್ಕೃತಿಕ ಸಾಂತ್ವನ ಎಂಬ ವಿಚಾರ ಸಂಕಿರಣದಲ್ಲಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡ ನಂತರ ಸಾಂತ್ವನ ಹೇಳುವುದಕ್ಕಿಂತ ರೈತ ಬದುಕಿದ್ದಾಗ ಅವನ ಕಷ್ಟಗಳ ಬಗ್ಗೆ ಸಾಂತ್ವನ ಹೇಳೋದು ಹೇಗೆ ಎಂಬುದನ್ನು ರಾಜ್ಯದ ನಾಯಕರು ಅರಿಯಬೇಕಿದೆ ಎಂದರು.
ಸಮುದಾಯ ಬೆಂಗಳೂರು ಸಂಘಟನೆಯ ಅಧ್ಯಕ್ಷ ಅಗ್ರಹಾರ ಕೃಷ್ಣಮೂರ್ತಿ ಮಾತನಾಡಿ, ಕೃಷಿ ಕ್ಷೇತ್ರ ಇಂದು ಅನಾಥವಾಗಿದೆ. ರೈತರಿಗೆ ಸರಿಯಾಗಿ ಮೂಲ ಬಂಡವಾಳ ಸಿಗುತ್ತಿಲ್ಲ. ಕೃಷಿಯೇತರ ಕ್ಷೇತ್ರಗಳಿಗೆ ಸಿಗುತ್ತಿರುವ ಆರ್ಥಿಕ ಬೆಂಬಲ ಸ್ವಯಂ ಕೃಷಿ ಕ್ಷೇತ್ರಕ್ಕೂ ದೊರೆತರೆ ಹಾಗೂ ರೈತರು ಉತ್ತಮವಾಗಿ ಬೆಳೆಗಳನ್ನು ಬೆಳೆಯಲು ಸಹಾಯ ಮಾಡಿದರೆ ಆತ್ಮಹತ್ಯೆ ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು. ಆಹಾರ ತಜ್ಞ ಡಾ.ಕೆ.ಸಿ ರಘು, ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಕೇಶವ್, ಹುಲಿಕುಂಟೆ ಮೂರ್ತಿ ಇದ್ದರು.