

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿ ಶಿಕ್ಷಣ ಸೀಟುಗಳ ಆಯ್ಕೆಗಾಗಿ 2016-17ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮೇ 1 ಮತ್ತು 2ರಂದು ನಡೆಸಲು ತೀರ್ಮಾನಿಸಿದೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ, ಯುನಾನಿ, ನ್ಯಾಚುರೋಪತಿ ಮತ್ತು ಯೋಗ, ಎಂಜಿನಿಯರಿಂಗ್, ಕೃಷಿ ವಿಜ್ಞಾನ,
ಪಶು ವೈದ್ಯಕೀಯ, ಪಶುಸಂಗೋಪನೆ, ರೇಷ್ಮೆ, ಅರಣ್ಯಶಾಸ್ತ್ರ, ತೋಟಗಾರಿಕೆ, ಬಿ-ಫಾರ್ಮ, ಫಾರ್ಮ-ಡಿ ಮುಂತಾದ ಕೋರ್ಸುಗಳಿಗೆ ಪ್ರವೇಶ ಪರೀಕ್ಷೆ ನಡೆಯುವುದು.
ಮೇ 1ರ ಭಾನುವಾರ ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ಪತ್ರಿಕೆ, ಮೇ 2ರಂದು ಬೆಳಿಗ್ಗೆ 10.30ರಿಂದ-11.50ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ರಾಸಾಯನಶಾಸ್ತ್ರ ಪರೀಕ್ಷೆ ನಡೆಯುವುದು. ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ 50 ಅಂಕಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಮೇ 3ರಂದು ಬೆಳಿಗ್ಗೆ 11.30ರಿಂದ 12.30ರವರೆಗೆ ನಡೆಯುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಇನ್ನೊಂದೆಡೆ ಖಾಸಗಿ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿನ ಸೀಟುಗಳಿಗಾಗಿ ರಾಷ್ಟ್ರೀಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮೇ 8ರಂದು ನಡೆಸಲು ಕಾಮೆಡ್-ಕೆ ಉದ್ದೇಶಿಸಿದೆ. ಈ ಬಾರಿ ಆನ್ ಲೈನ್ ಪ್ರವೇಶ ಪರೀಕ್ಷೆ ನಡೆಯುತ್ತಿದ್ದು, ಖಚಿತ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುತ್ತದೆ ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಅಧಿಕಾರಿ ಎ.ಎಸ್. ಶ್ರೀಕಾಂತ್ ತಿಳಿಸಿದ್ದಾರೆ.