ಬೆಂಗಳೂರು: 'ಬೌದ್ಧ ಧರ್ಮವೂ ಸೇರಿದಂತೆ ಯಾವ ಧರ್ಮವೂ ಶ್ರೇಷ್ಠವಲ್ಲ' ಎಂದು ಟಿಬೆಟಿನ ಧರ್ಮಗುರು ದಲೈಲಾಮಾ ಹೇಳಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯೋಗ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ವೈಯಕ್ತಿಕವಾಗಿ ಒಬ್ಬ ವ್ಯಕ್ತಿಗೆ ಒಂದು ಧರ್ಮ ಉತ್ತಮ ಎನಿಸಿದರೆ, ಮತ್ತೂಬ್ಬ ವ್ಯಕ್ತಿಗೆ ಅದೇ ಧರ್ಮ ಇಷ್ಟವಾಗುವುದಿಲ್ಲ. ಕೆಲವೊಮ್ಮೆ ಅಪಾಯಕಾರಿ ಎಂದೂ ಆ ವ್ಯಕ್ತಿಗೆ ಎನಿಸಬಹುದು. ಹಾಗಾಗಿ, ಬೌದ್ಧ ಧರ್ಮ ಶ್ರೇಷ್ಠ ಎಂದು ನಾನು ಎಂದಿಗೂ ಹೇಳುವುದಿಲ್ಲ. ಯಾವ ಧರ್ಮವನ್ನು ಸರಿಯಾಗಿ ವಿಶ್ಲೇಷಿಸದೆ ಹೇಳುವುದು ಕಷ್ಟ ಎಂದು ಹೇಳಿದರು.
ನನ್ನ ಮೂಲ ಹೆಸರು 'ಲ್ಹಾಮೊ ಧಾಂಡೊಪ್. ನಾನು ಚಿಕ್ಕವನಿದ್ದಾಗ ನನ್ನ ಸ್ನೇಹಿತ ಬಿಕ್ಕು ಎಂಬುವವನು ನನ್ನನ್ನು ಆ ರೀತಿ ಕರೆಯುತ್ತಿದ್ದ. ನಂತರ ಮಂಗೋಲಿಯಾದ ಮುಖ್ಯಸ್ಥ ನನಗೆ 'ದಲೈಲಾಮಾ' ಎಂದು ಹೆಸರಿಟ್ಟರು. ದಲೈ ಎಂದರೆ ಸಮುದ್ರ. ಲಾಮಾ ಎಂದರೆ ಗುರು ಎಂದು ಹೇಳಿದರು.