

ಬೆಂಗಳೂರು: ಸೋದರ ಮಾವನ ಹೆಂಡತಿಗೆ ಆತ ಪ್ರೀತಿಯ ನಿವೇದನೆ ಮಾಡಿದ. ಅಷ್ಟೇ ಅಲ್ಲ ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದ. ಆದರೆ, ಈತನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ಸಿಟ್ಟಿಗೆದ್ದ ಯುವಕ ಚಾಕುವಿನಿಂದ ಇರಿದು ಪರಾರಿಯಾದ. ಈ ಘಟನೆ ನಡೆದಿದ್ದು ಬುಧವಾರ ರಾತ್ರಿ. ವಿಜಯನಗರದ ಬಸ್ ನಿಲ್ದಾಣದ ಬಳಿ.
ಹೊಸದುರ್ಗ ಮೂಲದ ರಂಗಲಕ್ಷ್ಮೀ (24) ಹಲ್ಲೆಗೆ ಒಳಗಾಗ ಮಹಿಳೆ. ಈಕೆಯ ಗಂಡನ ಸಹೋದರಿ ಪುತ್ರ ನೀಲಕಂಠ (21) ಹಲ್ಲೆ ಮಾಡಿ ಪರಾರಿಯಾದ ಯುವಕ. ಗಂಡನಿಂದ ದೂರವಿದ್ದಳು: ರಂಗಲಕ್ಷ್ಮೀ ಅವರು ನಾಲ್ಕು ವರ್ಷಗಳ ಹಿಂದೆ ಮಧು ಎಂಬುವರನ್ನು ಮದುವೆಯಾಗಿದ್ದರು. ಆದರೆ, ದಂಪತಿ ನಡುವೆ ಹೊಂದಾಣಿಕೆ ಮೂಡದ ಕಾರಣ ರಂಗಲಕ್ಷ್ಮೀ ಕಳೆದ ಒಂದು ವರ್ಷದ ಹಿಂದೆ ಪತಿಯಿಂದ ಬೇರ್ಪಟ್ಟಿದ್ದರು.
ಬಳಿಕ ವಿಜಯನಗರದ ಸುಬ್ಬಣ್ಣ ಗಾರ್ಡನ್‍ನಲ್ಲಿರುವ ಪಿಜಿಯೊಂದರಲ್ಲಿ ನೆಲೆಸಿದ್ದರು. ಅಲ್ಲದೆ, ಜೀವನೋಪಾಯಕ್ಕಾಗಿ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಹೋಗುತ್ತಿದ್ದರು. ಈ ನಡುವೆ ಪತಿ ಮಧು ಅವರ ಸಹೋದರಿಯ ಪುತ್ರ ನೀಲಕಂಠ, ರಂಗಲಕ್ಷ್ಮೀ ಮೇಲೆ ಮೋಹಿತನಾಗಿ ತನ್ನನ್ನು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದಾನೆ. ಅಷ್ಟೇ ಅಲ್ಲ, ಆಗಾಗ ಮೊಬೈಲ್ ಫೋನ್‍ನಲ್ಲಿ ರಂಗಲಕ್ಷ್ಮೀ ಅವರಲ್ಲಿ ತನ್ನ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದಾನೆ.
ಆದರೆ, ರಂಗಲಕ್ಷ್ಮೀ ಮೊದಲಿನಿಂದಲೂ ಈತನ ಪ್ರೀತಿಯನ್ನು ನಿರಾಕರಿಸುತ್ತಾ ಬಂದಿದ್ದಾರೆ. ಜೊತೆಗೆ ವಯಸ್ಸಿನಲ್ಲಿ ನೀನು ನನಗಿಂತ ಚಿಕ್ಕವನಾಗಿರುವುದರಿಂದ ಪ್ರೀತಿ ಅಥವಾ ಮದುವೆ ಸಾಧ್ಯವಿಲ್ಲವೆಂದು ಬುದಿಟಛಿವಾದವನ್ನೂ ಹೇಳಿದ್ದಾರೆ. ಚಾಕುವಿನಿಂದ ಇರಿದ: ಬುದಿಟಛಿವಾದ ಹೇಳಿದರೂ ನೀಲಕಂಠ ತನ್ನ ಹಠ ಬಿಟ್ಟಿರಲಿಲ್ಲ. ಅಷ್ಟೇ ಅಲ್ಲ, ತನ್ನನ್ನು ಪ್ರೀತಿಸುವಂತೆ ರಂಗಲಕ್ಷ್ಮೀಗೆ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದ. ಹೀಗಾಗಿ ಬುಧವಾರ ರಾತ್ರಿ 8.30ರ ಸುಮಾರಿಗೆ ಸುಬ್ಬಣ್ಣ ಗಾರ್ಡನ್‍ನಲ್ಲಿರುವ ಪಿಜಿ ಬಳಿಗೆ ಬಂದಿದ್ದಾನೆ. ಏನೋ ಮಾತನಾಡಬೇಕೆಂದು ರಂಗಲಕ್ಷ್ಮೀ ಅವರನ್ನು ಹೊರಕ್ಕೆ ಕರೆದುಕೊಂಡು ವಿಜಯನಗರದ ಬಸ್ ನಿಲ್ದಾಣ ಸಮೀಪದ ನಂದಿನಿ ಬೂತ್ ಬಳಿಗೆ ಬಂದಿದ್ದಾನೆ.
ಈ ವೇಳೆ ರಂಗಲಕ್ಷ್ಮೀ ಎದುರು ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಆದರೆ, ಇದನ್ನು ಅವರು ನಿರಾಕರಿಸಿದ್ದರಿಂದ ಕೋಪಗೊಂಡು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ರಂಗಲಕ್ಷ್ಮೀ ಅವರು ಗಾಯತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.