8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

ಬುಗುರಿ ಸರಿ ಮಾಡಿಕೊಡುವ ನೆಪವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಪ್ರಾಪ್ತ ಬಾಲಕಿಯ ಮೇಲೆ...
8 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

ಬೆಂಗಳೂರು: ಬುಗುರಿ ಸರಿ ಮಾಡಿಕೊಡುವ ನೆಪವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಹತ್ಯೆ ಮಾಡಿರುವ ಘಟನೆ ಗುರುವಾರ ಹೊಸಕೋಟೆಯ ಸೂಲಿಬೆಲೆಯಲ್ಲಿ ನಡೆದಿದೆ.

ಪೋಷಕರು ಇಲ್ಲದ ಸಮಯ ನೋಡಿಕೊಂಡಿದ್ದ ವ್ಯಕ್ತಿಯೋರ್ವ ಬುಗುರಿ ಆಡುತ್ತಿದ್ದ ಬಾಲಕಿಯನ್ನು ನೋಡಿ, ಬುಗುರಿ ಸರಿ ಮಾಡಿಕೊಡುವ ನೆಪವೊಡ್ಡಿ ಅಲ್ಲಿಯೇ ಇದ್ದ ಕಾರ್ ಶೆಡ್ ಒಳಗೆ ಕರೆದೊಯ್ದಿದ್ದಾನೆ. ನಂತರ ಅತ್ಯಾಚಾರವೆಸಗಿ, ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ.

ಬಾಲಕಿ ತಂದೆ ತಾಯಿ ಮೂಲತಃ ಹುಬ್ಬಳ್ಳಿಯವರು. ಕೆಲವು ವರ್ಷಗಳ ಹಿಂದಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದರು. ಇಟ್ಟಿಗೆ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಮನೆಗೆ ಬಂದ ಪೋಷಕರಿಗೆ ಮಗು ಕಾಣೆಯಾಗಿರುವುದನ್ನು ಕಂಡು ಗಾಬರಿಯಿಂದ ಹುಡುಕಾಟ ನಡೆಸಿದ್ದಾರೆ. ನಂತರ ಮನೆಯ ಮುಂದಿದ್ದ ಕಾರ್ಶೆಡ್ ಬಳಿ ಅರೆಬರೆ ಬಟ್ಟೆಯೊಂದಿಗೆ ಮಗುವಿನ ದೇಹ ಪತ್ತೆಯಾಗಿದೆ. ಗಾಬರಿಗೊಂಡ ಪೋಷಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದಾಗಿದ್ದಾರೆ. ಸ್ಥಳ ಪರಿಶೀಲನೆ ವೇಳೆ, ಕಾರ್ ಶೆಡ್ ಬಳಿಯಿದ್ದ ಸಿಸಿಟಿವಿಯ ದೃಶ್ಯಾವಳಿಗಳನ್ನು ಪರೀಕ್ಷಿಸಿದ್ದಾರೆ. ಈ ವೇಳೆ ಮಗುವನ್ನು ಕರೆತಂದ ಕಿರಾತಕನ ಎಲ್ಲಾ ಚಲವಲನಗಳು ದಾಖಲಾಗಿರುವುದು ಕಂಡು ಬಂದಿದೆ. ಎಲ್ಲಾ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

ಪ್ರಕರಣದ ತನಿಖೆಗೆ ಪೊಲೀಸರು ಈಗಾಗಲೇ ಮೂರು ತಂಡಗಳು ನೇಮಿಸಿದ್ದು, ಆರೋಪಿ ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com