

ಬೆಂಗಳೂರು: ಕಾಂಡಕೋಶಗಳ ಪತ್ತೆ ಹಾಗೂ ಅಭಿವೃದ್ಧಿಯ ಬಗ್ಗೆ ನಗರದ ಜಿಕೆವಿಕೆ ಆವರಣದಲ್ಲಿರುವ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರದಲ್ಲಿ ನಡೆದಿರುವ ಸಂಶೋಧನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಈ ಕೇಂದ್ರಕ್ಕೆ ಭೇಟಿ ಕೊಟ್ಟ ಅವರು, ಕಾಂಡಕೋಶ(ಸ್ಟೆಮ್ ಸೆಲ್) ಸಂಶೋಧನೆಯ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಪ್ರತಿಕ್ರಿಯೆ ನೀಡಿದ ಮೋದಿ, ಕಾಂಡಕೋಶಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಸಂಶೋಧನೆ ಗಳನ್ನು ಕಂಡಿದ್ದೆ. ನಮ್ಮಲ್ಲೂ ಅದೇ ರೀತಿಯ ಸಂಶೋಧನಾ ಕೇಂದ್ರ ಇರುವುದು ತೀವ್ರ ಆಸಕ್ತಿ ಕೆರಳಿಸಿತು.
ಇಂದು ಕಣ್ಣಾರೆ ನೋಡಿದಾಗ ಬಹಳ ಸಂತೋಷವಾಗಿದೆ. ನಮ್ಮಲ್ಲಿ ನಡೆಯುತ್ತಿರುವ ಸಂಶೋಧನೆ ಮುಂದಿನ ಪೀಳಿಗೆಗೆ ಮಹತ್ತರ ಕೊಡುಗೆಯಾಗಲಿದೆ ಎಂದು ಶ್ಲಾಘಿಸಿದರು. ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಎನ್‍ಸಿಬಿಸಿ ಕೇಂದ್ರದ ಹಿರಿಯ ಅಧಿಕಾರಿ ಸಂದೀಪ್ ತ್ರಿವೇದಿ, ಸತ್ಯಜಿತ್ ಮೇಯರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದು ಪ್ರಧಾನಿಗೆ ಸಂಶೋಧನೆಗಳ ಕುರಿತು ಸಮಗ್ರ ವಿವರ ನೀಡಿದರು.
ಪ್ರಾಥಮಿಕ ಹಂತದಿಂದ ಉನ್ನತ ಮಟ್ಟದ ಸಂಶೋಧನೆಗಳನ್ನು ಇಲ್ಲಿ ನಡೆಸಲಾಗುತ್ತಿದ್ದು, ರೋಗ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ವಿವರಿಸಿದರು. ನಂತರ ಸುಮಾರು ಅರ್ಧ ಗಂಟೆ ಕಾಲ ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತು ಅಧ್ಯಾ ಪಕರ ಜತೆ ಮೋದಿ ವಿಚಾರ ವಿನಿಮಯ ನಡೆಸಿದರು.
ಭಾರತೀಯ ಸಾಂಪ್ರದಾಯಿಕ ವೈದ್ಯಪದ್ಧತಿಯ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸುವಂತೆ ಹಾಗೂ ಜೀನ್ ಥೆರಪಿ ಮೂಲಕ ಕೆಂಪುರಕ್ತಗಳ ಅನಿಯಂತ್ರಿತ ಬೆಳವಣಿಗೆ ಸಮಸ್ಯೆಗೆ ಪರಿಹಾರ ಹುಡುಕುವಂತೆ ಪ್ರಧಾನಿ ಸೂಚಿಸಿದರು.
ಮೇಕ್ ಇನ್ ಇಂಡಿಯಾದ ಆಶಯವನ್ನು ಪ್ರಸ್ತಾಪಿಸಿದರಲ್ಲದೇ, ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸುವ ಕೆಲಸಗಳನ್ನು ವಿಜ್ಞಾನಿಗಳು ಮಾಡಬೇಕು ಎಂದು ಸಲಹೆ ನೀಡಿದರು. ಮೋದಿ ಯವರ ಆಶಯ ಈಡೇರಿಸುವ ಇಂಗಿತವನ್ನು ಯುವ ವಿಜ್ಞಾನಿಗಳು ವ್ಯಕ್ತಪಡಿಸಿದರು. ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಜಿ.ಎಂ. ಸಿದ್ದೇಶ್ವರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.