

ಬೆಂಗಳೂರು: ನಿಗದಿತ ಅವಧಿಗೆ ಬಿಬಿಎಂಪಿ ಚುನಾವಣೆ ನಡೆಸದಿದ್ದರೆ ಸದಸ್ಯರ ಅಧಿಕಾರ ಅವಧಿಯನ್ನಾದರೂ ವಿಸ್ತರಿಸಿ ಎಂದು ಬಿಬಿಎಂಪಿ ಸರ್ಕಾರವನ್ನು ವಿನಂತಿಸಿದೆ. ಏಪ್ರಿಲ್ 22ರಂದು ಬಿಬಿಎಂಪಿ ಸದಸ್ಯರ ಅವಧಿ ಪೂರ್ಣ ವಾಗುತ್ತಿದ್ದು, ನಂತರ ಸರ್ಕಾರ ಬಿಬಿಎಂಪಿಗೆ ಚುನಾವಣೆ ನಡೆಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಆದ್ದರಿಂದ ಬಿಬಿಎಂಪಿಗೆ
ಚುನಾವಣೆ ನಡೆದು ಹೊಸ ಸದಸ್ಯರು ಅಧಿಕಾರ ವಹಿಸಿಕೊಳ್ಳುವವರೆಗೂ ಈಗಿನ ಸದಸ್ಯರ ಅವಧಿಯನ್ನು ವಿಸ್ತರಿಸಬೇಕೆಂದು ಬಿಜೆಪಿಯ ಹಿರಿಯ ಸದಸ್ಯ ಪದ್ಮನಾಭ ರೆಡ್ಡಿ ನಿರ್ಣಯ ಮಂಡಿಸಿದರು. ಇದನ್ನು ಕಾಂಗ್ರೆಸ್ ಪ್ರಬಲವಾಗಿ ವಿರೋಧಿಸಿತು. ಆದರೂ ಬಿಜೆಪಿ ಈ ನಿರ್ಣಯವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡಿತು.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಅವಧಿ ವಿಸ್ತರಿಸಿರುವ ಉದಾಹರಣೆಗಳಿವೆ. 1988ರಲ್ಲಿ ಅಂದಿನ ಸರ್ಕಾರ ಪಾಲಿಕೆ ಸದಸ್ಯರ ಅವಧಿಯನ್ನು 4 ತಿಂಗಳು ಹೆಚ್ಚು
ವರಿಯಾಗಿ ವಿಸ್ತರಿಸಲು ನಿರ್ಧರಿಸಿತು. ಇದ ಕ್ಕಾಗಿ ಸುಗ್ರೀವಾಜ್ಞೆ ತಂದಿತ್ತು. 1993ರಲ್ಲಿ ಮೊಯ್ಲಿ ಸರ್ಕಾರ ಗ್ರಾ.ಪಂ. ಸದಸ್ಯರ ಅವಧಿಯನ್ನು ಒಂದು ವರ್ಷದ
ವರೆಗೂ ವಿಸ್ತರಿಸಿತ್ತು. ಆದ್ದರಿಂದ ಚುನಾವಣೆ ವಿಳಂಬ ಮಾಡುವ ಉದ್ದೇಶವಿದ್ದರೆ, ನಮ್ಮೆಲ್ಲರ ಅಧಿಕಾರ ಅವಧಿಯನ್ನು ವಿಸ್ತರಿಸಬೇಕು ಎಂದು ಪದ್ಮನಾಭ ರೆಡ್ಡಿ ಆಗ್ರಹಿಸಿದರು. ಇದನ್ನು ಕಾಂಗ್ರೆಸ್‍ನ ಹಿರಿಯ ಸದಸ್ಯ ಕೆ. ಚಂದ್ರಶೇಖರ್ ಆಕ್ಷೇಪಿಸಿದರು. ಕೆಎಂಸಿ ಕಾಯ್ದೆ ಪ್ರಕಾರ ಬಿಬಿಎಂಪಿಗೆ ಚುನಾವಣೆ ನಡೆಸಲು ಸಾಕಷ್ಟು ಕಾಲಾವಕಾಶವಿದೆ. ಚುನಾವಣೆ ಮುಂದೂಡಲಾಗುತ್ತದೆ ಎಂದು ಮುಖ್ಯಮಂತ್ರಿ ಅವರಾಗಲಿ, ಸಚಿವರಾಗಲಿ ಹೇಳಿಲ್ಲ ಎಂದರು. ಉದಯಶಂಕರ್, ಮಂಜುನಾಥ ರೆಡ್ಡಿ ಹಾಗೂ ಗುಣಶೇಖರ್ ಕೂಡ ಇದನ್ನೇ ವಾದಿಸಿ, ಬಿಜೆಪಿಯ ಪ್ರಸ್ತಾಪವನ್ನು ವಿರೋಧಿಸಿದರು. ಆದರೆ ನಿರ್ಣಯಕ್ಕೆ ಮೇಯರ್ ಹಾಗೂ ಜೆಡಿಎಸ್, ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ನಂತರ ಮೇಯರ್ ಸೂಚನೆಯಂತೆ ನಿರ್ಣಯ ಕೈಗೊಳ್ಳಲಾಯಿತು.
ಅರಣ್ಯ ವಿಭಾಗ ಏನಾಯ್ತು?
ಕೆಲವು ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಯತ್ನದಲ್ಲಿ ಬಿಬಿಎಂಪಿ ಆಡಳಿತ ಅರಣ್ಯ ವಿಭಾಗವೇ ಇಲ್ಲದಂತೆ ಮಾಡಿರುವ ಬಗ್ಗೆ ಆಡಳಿತ ಪಕ್ಷದವರೇ ಆದ ಎ.ಎಚ್.ಬಸವರಾಜು ಕೂಗಾಡಿದರು. ಅರಣ್ಯ ವಿಭಾಗದಲ್ಲಿ 15ಕ್ಕೂ ಹೆಚ್ಚಿನ ಸಿಬ್ಬಂದಿ ಇದ್ದರು. ಆದರೆ ಯಾರೋ ಇಬ್ಬರ ವಿರುದ್ಧ ಕ್ರಮಕೈಗೊಳ್ಳುತ್ತೇನೆಂದು ಎಲ್ಲರ ನ್ನೂ ಬಿಬಿಎಂಪಿಯಿಂದ ಹೊರ ಹಾಕಲಾಗಿದೆ.
ಹೀಗಾದರೆ ಬಿಬಿಎಂಪಿಯಲ್ಲಿರುವ ಮೇಯರ್ ನೇತೃತ್ವದ ಮರ ಪ್ರಾಧಿಕಾರಕ್ಕೆ ಏನು ಕೆಲಸ? ತೋಟಗಾರಿಕೆ ಸ್ಥಾಯಿ ಸಮಿತಿ ಏಕೆ ಇರಬೇಕು? ಎಲ್ಲವನ್ನು ರದ್ದು ಮಾಡಿ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆಗ ಆಯುಕ್ತ ಲಕ್ಷ್ಮೀ ನಾರಾಯಣ್, ಕೂಡಲೇ ಪಾಲಿಕೆಗೆ ಅರಣ್ಯ ಇಲಾಖೆ ಅಧಿ ಕಾರಿಗಳನ್ನು ನಿಯೋಜಿಸುವಂತೆ ಮನವಿಸಲ್ಲಿಸಲಾಗುವುದು ಎಂದು ಹೇಳಿದರು.
ಜನ ಯುಎಸ್‍ಪಿಗೆ ಛೀಮಾರಿ
ಜನಮಿತ್ರ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆ ಈಗ ಜನ ಯುಎಸ್‍ಪಿ ಎಂದು ಹೆಸರಿಟ್ಟುಕೊಂಡು ಟೆಂಡರ್ ಶ್ಯೂರ್ ಯೋಜನೆ ಅಕ್ರಮದಲ್ಲಿ ಭಾಗಿಯಾಗಿದೆ. ಆದ್ದರಿಂದ ಈಅಕ್ರಮಗಳ ಬಗ್ಗೆ ವಿಶೇಷ ಸಭೆ ನಡೆಸಲು ಬಿಬಿಎಂಪಿ ತೀರ್ಮಾನಿಸಿತು. ಟೆಂಡರ್ ಶ್ಯೂರ್ ಯೋಜನಾ ಸಾಧ್ಯತಾ ವರದಿ ನೀಡಿರುವ ಜನ ಯುಎಸ್‍ಪಿ ಸಂಸ್ಥೆ ಕಾನೂನು ಉಲ್ಲಂಘಿಸಿದೆ. ಆ ಸಂಸ್ಥೆಗೆ ಯೋಜನಾ ವರದಿ ನೀಡುವ ಅರ್ಹತೆಯೂ ಇಲ್ಲ. ಈ ಸಂಸ್ಥೆಯ ಮುಖ್ಯಸ್ಥರಾದ ಸ್ವಾತಿ ರಾಮನಾಥ್ ಬಿಬಿಎಂಪಿ ಸದಸ್ಯರನ್ನು ಅವಹೇಳನ ಮಾಡುವ ಲೇಖನವನ್ನು ಬರೆದಿದ್ದಾರೆ. ಆದ್ದರಿಂದ ಅವರಿಗೆ ಛೀಮಾರಿ ಹಾಕಬೇಕು. ಈ ಯೋಜನೆಯಲ್ಲಿ ರು. 200 ಕೋಟಿ ನಷ್ಟವಾಗುತ್ತಿರುವ ಶಂಕೆಯಿದ್ದು, ಈ ಬಗ್ಗೆ ಚರ್ಚೆಯಾಗಬೇಕೆಂದು ಸದಸ್ಯರು ಒತ್ತಾಯಿಸಿದರು. ಸದಸ್ಯರಾದ ಗುಣಶೇಖರ್, ಮಂಜುನಾಥ ರೆಡ್ಡಿ, ಪ್ರಕಾಶ್ ಹಾಗೂ ಉದಯಕುಮಾರ್ ಈ ಬಗ್ಗೆ ಸಭೆ ನಡೆಸಿ ಅನುಮಾನ ನಿವಾರಿಸಬೇಕು. ಹಾಗೆಯೇ ಜನ ಯುಎಸ್ ಪಿಯ ಕಲ್ಪನಾ ಕರ್ ಮತ್ತು ಸ್ವಾತಿ ಅವರನ್ನು ಕರೆಸಿ ಪ್ರಶ್ನಿಸಬೇಕೆಂದು ಆಗ್ರಹಿಸಿದರು. ಆಗ ಮೇಯರ್ ಶಾಂತಕುಮಾರಿ, ಸದ್ಯದಲ್ಲೇ ಈ ಬಗ್ಗೆ ಸಭೆ ನಡೆಸಲಾಗುವುದು ಎಂದರು. ಸಭೆಯ ಆರಂಭದಲ್ಲಿ ಎನ್.ಆರ್.ರಮೇಶ್ ಬಸ್ ನಿಲ್ದಾಣಗಳ ಜಾಹೀರಾತು ಗಳಿಂದ ಬಿಬಿಎಂಪಿಗೆ ಬರುತ್ತಿದ್ದ ಆದಾಯ ಕೈ ತಪ್ಪುತ್ತಿರುವ ಬಗ್ಗೆ ಪ್ರಸ್ತಾಪಿಸಿದರೆ, ಕಾಂಗ್ರೆಸ್‍ನ ಕೆ.ಚಂದ್ರಶೇಖರ್, ಇ-ಶೌಚಾ ಲಯ ಯೋಜನೆ ನೆಲ ಕಚ್ಚಿರುವ ಬಗ್ಗೆ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು.