

ಬೆಂಗಳೂರು: ರಾಜ್ಯದಲ್ಲಿ ಸಾಲಬಾಧೆಗೆ ಬೇಸತ್ತು ತುರುವೇಕೆರೆಯ ರೈತ ದಂಪತಿ ಸೇರಿದಂತೆ ಒಟ್ಟು 15 ರೈತರು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರು ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತುರುವೇಕೆರೆ ತಾಲೂಕಿನ ತಾಳಕೆರೆ ಗ್ರಾಮದ ಶ್ರೀನಿವಾಸ (35) ಮತ್ತು ಅವರ ಪತ್ನಿ ಕಲಾವತಿ(30), ಮುಂಡರಗಿ ತಾಲೂಕಿನ ಪೇಠಾಲೂರಿನ ರವೀಂದ್ರಶಿವಪ್ಪ ಕೊಪ್ಪದ (48), ಸಿಂಧನೂರು ತಾಲೂಕಿನ ಗುಂಡಾ ಗ್ರಾಮದ ಹನುಮಂತಪ್ಪ (38), ರೋಣ ತಾಲೂಕಿನ ಜಿಗಳೂರಿನ ಸಿದ್ದರಾಮಪ್ಪ ಹಂಡಿ (75), ಮಂಡ್ಯ ತಾಲೂಕು ಹುಲಿವಾನದ ರಾಮಯ್ಯ(50), ಮದ್ದೂರು ತಾಲೂಕಿನ ಕುದುರಗುಂಡಿಯ ಕೆ. ಮೂರ್ತಿ (55), ವಳಗೆರೆಹಳ್ಳಿಯ ಜಯರಾಮು (40), ಕೋಣಸಾಲೆಯ ರಮೇಶ್ (37) ಬೀರೂರುಸಮೀಪದ ಹುಲ್ಲೇಹಳ್ಳಿಯ ಜಿ. ತಿಮ್ಮಣ್ಣ(55), ಅಥಣಿ ತಾಲೂಕಿನ ಬಾಡಗಿಯ ಸತೀಶ ಅಣ್ಣಪ್ಪ ಮಮದಾಪುರೆ(35), ಹಿರೇಕೆರೂರು ತಾಲೂಕಿನ ಚಿಕ್ಕಯಡಚಿಯ ಪ್ರಭು ಶಿವಪ್ಪ ಕರಿಯಣ್ಣನವರ (29), ದೊಡ್ಡಬಳ್ಳಾಪುರದ ಗಂಡರಾಜಪುರದ ವೀರಣ್ಣ
(50), ಚಿಕ್ಕಮಗಳೂರು ತಾಲೂಕಿನ ಕುಂಬರಹಳ್ಳಿಯ ಭದ್ರಶೆಟ್ಟಿ (45) ಸಾವಿಗೀಡಾದವರು. ಸೊರಬ ತಾಲೂಕಿನ ಮೂಡಿ ದೊಡ್ಡಿಕೊಪ್ಪ ಗ್ರಾಮದ ಶಿವಪುತ್ರಪ್ಪ ಬಿನ್ ಮಲ್ಲಪ್ಪ (60) ಲಕ್ಷ ಸಾಲ ತೀರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೇಠಾಲೂರಿನ ರವೀಂದ್ರ ಶಿವಪ್ಪ ಕೊಪ್ಪದ ಬೆಳೆ ನಾಶದಿಂದ ಬೇಸತ್ತಿದ್ದರು. ಗುಂಡಾ ಗ್ರಾಮದ ಹನುಮಂತಪ್ಪ, ಸಾಲಕ್ಕೆ ಹೆದರಿ ಕ್ರಿಮಿನಾಶಕ ಕುಡಿದು ಪ್ರಾಣ ಬಿಟ್ಟಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗಿದ್ದ
ಜಿಗಳೂರಿನ ಸಿದ್ದರಾಮಪ್ಪ ಹಂಡಿ, ಬೆಳೆ ಹಾನಿಯಿಂದ ಬೇಸತ್ತಿದ್ದರು. ಮಂಡ್ಯ ಜಿಲ್ಲೆ ಹುಲಿವಾನದ ರಾಮಯ್ಯ ಹಾಗೂ ವಳಗೆರೆಹಳ್ಳಿಯ ಜಯರಾಮು ಅವರ ಕಬ್ಬು ಬೆಳೆ ಹಾಳಾಗಿತ್ತು. ಕುದುರಗುಂಡಿ ಗ್ರಾಮದ ಕೆ. ಮೂರ್ತಿ, ಕೋಣಸಾಲೆ ಗ್ರಾಮದ ರಮೇಶ್ ಅವರಿಗೆ ಬ್ಯಾಂಕ್, ಸಹಕಾರ ಸಂಘಗಳಲ್ಲಿ ಸಾಕಷ್ಟು ಸಾಲವಿತ್ತು.
ಬೀರೂರು ಸಮೀಪದ ಹುಲ್ಲೇಹಳ್ಳಿಯ ಜಿ. ತಿಮ್ಮಣ್ಣ, ಕೃಷಿಗಾಗಿ ಬೋರ್ ಕೊರೆಸಿದ್ದರು. ಆದರೆ ನೀರು ಸಿಕ್ಕಿರಲಿಲ್ಲ. ಅಥಣಿ ತಾಲೂಕಿನ ಬಾಡಗಿಯ ಸತೀಶ ಅಣ್ಣಪ್ಪ ಮಮದಾಪುರೆ 6 ದಿನ ಹಿಂದೆ ವಿಷ ಕುಡಿದಿದ್ದರು, ಆಸ್ಪತ್ರೆಯಲ್ಲಿದ್ದ ಅವರು ಭಾನುವಾರ ಮೃತಪಟ್ಟಿದ್ದಾರೆ. ರಟ್ಟೀಹಳ್ಳಿ ಸಮೀಪದ ಚಿಕ್ಕಯಡಚಿಯ ಪ್ರಭು ಶಿವಪ್ಪ ಕರಿಯಣ್ಣ ಶುಂಠಿ ಬೆಳೆಯಲ್ಲಿ ನಷ್ಟ ಅನುಭವಿಸಿದ್ದರು. ದೊಡ್ಡಬಳ್ಳಾಪುರದ ಗಂಡರಾಜಪುರದ ವೀರಣ್ಣ ಮೂರು ಎಕರೆಯಲ್ಲಿ ಬೆಳೆದಿದ್ದ ದ್ರಾಕ್ಷಿ ಬೆಳೆ ಆಲಿಕಲ್ಲಿನಿಂದ ಹಾನಿಯಾಗಿತ್ತು.
ಚಿಕ್ಕಮಗಳೂರು ತಾಲೂಕಿನ ಕುಂಬರಹಳ್ಳಿಯ ಭದ್ರಶೆಟ್ಟಿ (45) ಕೈಸಾಲಕ್ಕೆ ಬೇಸತ್ತು ಮನೆ ಬಿಟ್ಟಿದ್ದರು. ಭಾನುವಾರ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದಂಪತಿ ಆತ್ಮಹತ್ಯೆ: ತುರುವೇಕೆರೆ ತಾಲೂಕಿನ ತಾಳಕೆರೆ ಗ್ರಾಮದ ಶ್ರೀನಿವಾಸ್ ಮತ್ತು ಕಲಾವತಿ ದಂಪತಿ ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ್‍ಗಳಲ್ಲಿ ರು. 1.50 ಲಕ್ಷ ಸಾಲ ಮಾಡಿದ್ದರು. ಶ್ರೀನಿವಾಸ್ ತಮ್ಮ ತೋಟದಲ್ಲಿ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದರು. ಅವರನ್ನು ಹುಡುಕಿಕೊಂಡು ತೋಟಕ್ಕೆ ಹೋದ ಕಲಾವತಿ, ಪತಿಯ ಸಾವು ಕಂಡು ತಾವೂ ನೇಣು ಹಾಕಿಕೊಂಡಿದ್ದಾರೆ.
ಆತ್ಮಹತ್ಯೆ ಯತ್ನ: ಕೃಷಿಗಾಗಿ ಮಾಡಿದ್ದ ರು. 1.65 ಲಕ್ಷ ಸಾಲ ತೀರಿಸಲು ಹೆಣಗಾಡುತ್ತಿದ್ದ ಮುಂಡಗೋಡ ತಾಲೂಕಿನ ರೈತ ಫಕ್ಕೀರಪ್ಪ ರಾಮಣ್ಣ ಶಿರಗೇರಿ ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿಗಾಹುತಿಯಾಗಲು ಪ್ರಯತ್ನಿಸಿದ್ದಾರೆ. ಅವರಿಗೆ ಸುಟ್ಟು ಗಾಯಗಳಾಗಿದ್ದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದಾರೆ. ಬೆಳೆಹಾನಿ ಆಘಾತ ಸಹಿಸದೇ ಹಿರೇಕೆರೂರು ತಾಲೂಕಿನ ಗಂಗಾಪುರ ಗ್ರಾಮದ ನಜೀರ್‍ಸಾಬ್ ಬುಡನ್‍ಸಾಬ್ ದೊಡ್ಮನಿ
(50) ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಮ್ಮ 4 ಎಕರೆ ಜಮೀನು ಪೈಕಿ ಒಂದೂವರೆ ಎಕರೆಯಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದರು. ಅದು ತೆನೆಬರುವ ಹಂತದಲ್ಲಿದ್ದಾಗ ದಾಯಾದಿಗಳು ಹಾನಿಮಾಡಿದ್ದರು.