

ಬೆಂಗಳೂರು: ಸದಾ ವಾಹನ ದಟ್ಟಣೆಯಿಂದ ಕೂಡಿರುವ ಸುಬ್ಬಣ್ಣ ವೃತ್ತದಿಂದ ಆನಂದರಾವ್ ವೃತ್ತದವರೆಗಿನ ಮಾರ್ಗವನ್ನು ಏಕಮುಖ ಸಂಚಾರ ಮಾರ್ಗವಾಗಿ ಪರಿವರ್ತಿಸಿರುವ ಕಾರಣ ಆನಂದ್‍ರಾವ್ ವೃತ್ತದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿತ್ತು.
ಬುಧವಾರದಿಂದ ತಾತ್ಕಾಲಿಕವಾಗಿ ಗಾಂಧಿನಗರ 5ನೇ ಮುಖ್ಯರಸ್ತೆಯಿಂದ ಬರುವ ವಾಹನಗಳು ನೇರವಾಗಿ ಶಿವಾನಂದ ವೃತ್ತದ ಕಡೆ ತೆರಳಲು ನಿಷೇಧಿಸಲಾಗಿತ್ತು. ಬಲ ತಿರುವು ಪಡೆದು ಶೇಷಾದ್ರಿ ರಸ್ತೆಯಲ್ಲಿ ತೆರಳಲು ಅವಕಾಶ ಇರಲಿಲ್ಲ. ಹೀಗಾಗಿ, ಎಲ್ಲ ವಾಹನಗಳು ಶಿವಾನಂದ ವೃತ್ತದ ಕಡೆ ತೆರಳಿ ಅಲ್ಲಿಂದ ಎಡ ತಿರುವು ಪಡೆದು ಸುಬೇದಾರ್ ಛತ್ರಂ ರಸ್ತೆ, ಬಲ ಪಥದಲ್ಲಿ ಸಂಚರಿಸುವ ವಾಹನಗಳು ಬಲ ತಿರುವು ಪಡೆದು ಕಿನೋ ಚಿತ್ರಮಂದಿರ ಹಾಗೂ ಹಳೇ ಜೆಡಿಎಸ್ ಕಚೇರಿ ಮೂಲಕ ತಾವು ಹೊರಡುವ ಸ್ಥಳಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗಿತ್ತು.
ಮೊದಲ ದಿನ ವಾಹನ ಸವಾರರು ಗೊಂದಲಕ್ಕೆ ಒಳಗಾದರು. ಅಲ್ಲದೇ, ಸುಬ್ಬಣ್ಣ ವೃತ್ತದ ಮೇಲೆ ಬಿದ್ದಿರುವ ಕಾರಣ ಈ ರಸ್ತೆಯಲ್ಲಿ ಬೆಳಗ್ಗೆಯಿಂದಲೂ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ದಟ್ಟಣೆ ಉಂಟಾಗಿತ್ತು. ಕಿನೋ ಚಿತ್ರಮಂದಿರ, ಖೋಡೆ ವೃತ್ತದ ಕಡೆಯಿಂದ ಬರುವ ವಾಹನಗಳು ಹಳೇ ಜೆಡಿಎಸ್ ಕಚೇರಿ ಕಡೆಯಿಂದಲೇ ಶೇಷಾದ್ರಿ ರಸ್ತೆ, ಶಿವಾನಂದ ವೃತ್ತ ಹಾಗೂ ರೇಸ್ ಕೋರ್ಸ್ ರಸ್ತೆಗೆ ತೆರಳಲು ಅವಕಾಶ ಕಲ್ಪಿಸಿರುವುದರಿಂದ ಎಲ್ಲ ವಾಹನಗಳ ಒತ್ತಡ ಶಿವಾನಂದ ವೃತ್ತದ ಮೇಲೆ ಬಿದ್ದಿದೆ.