ಕಬ್ಬು ರೈತ ಆತ್ಮಹತ್ಯೆ, ಪರಿಹಾರಕ್ಕೆ ಆಗ್ರಹ

ಸಾಲಬಾಧೆಯಿಂದ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವ ಕಬ್ಬು ಬೆಳೆಗಾರನ ಕುಟುಂಬಕ್ಕೆ ರು. 10 ಲಕ್ಷ ಪರಿಹಾರ ನೀಡಬೇಕು...
ರೈತರ ಪ್ರತಿಭಟನೆ (ಸಾಂದರ್ಭಿಕ ಚಿತ್ರ)
ರೈತರ ಪ್ರತಿಭಟನೆ (ಸಾಂದರ್ಭಿಕ ಚಿತ್ರ)
Updated on: 

ಬೆಳಗಾವಿ: ಸಾಲಬಾಧೆಯಿಂದ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿರುವ ಕಬ್ಬು ಬೆಳೆಗಾರನ ಕುಟುಂಬಕ್ಕೆ ರು. 10 ಲಕ್ಷ ಪರಿಹಾರ ನೀಡಬೇಕು, ಮತ್ತವರ ಮಗನಿಗೆ ಸರ್ಕಾರಿ ನೌಕರಿಕೊಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ  ಮಾಡುವುದಾಗಿ  ವಿವಿಧ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಇನ್ನೊಂದೆಡೆ ರೈತನಿಗೆ ಎಲ್ಲ ಹಣ ಕೊಟ್ಟಿದ್ದು, ಬಾಕಿ ಇಲ್ಲ. ಎಲ್ಲವನ್ನೂ ನೀಡಲಾಗಿದೆ ಎಂದು ಕಾರ್ಖಾನೆ ಹೇಳಿಕೆ ನೀಡಿದೆ. ಇದು ರೈತರನ್ನು ಮತ್ತಷ್ಟು ಕೆರಳಿಸಿದೆ. ಬೆಳಗಾವಿ ತಾ.ಬಡಾಳ ಅಂಕಲಗಿಯ ರೈತ ಗುರುನಾಥ ಮಲ್ಲಪ್ಪ ಚಾಪಗಾಂವಿ (51) ಸೋಮವಾರ ಸಂಜೆ ತಮ್ಮ ಹೊಲದಲ್ಲಿಯೇ ಆತ್ಮಹತ್ಯೆ ಮಾಡಿ ಕೊಂಡಿದ್ದರು. ಇದಕ್ಕೆ ಎಂ. ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯ ರೈತ ವಿರೋಧ ನೀತಿಯೇ ಕಾರಣ. ಪೂರೈಸಿದ್ದ 43 ಟನ್ ಕಬ್ಬಿಗೆ ಇನ್ನೂ ಹಣ ಪಾವತಿಸಿಲ್ಲ. ಇದರಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ಬರೆದ ಡೆತ್‍ನೋಟ್ ಅನ್ನು ಪೊಲೀಸರು ಮುಚ್ಚಿ ಟ್ಟಿದ್ದಾರೆ. ಬ್ಯಾಂಕ್, ಸಹಕಾರಿ ಸಂಘ ಗಳಿಂದ ಮಾಡಿರುವ ಲಕ್ಷಾಂತರ ರುಪಾಯಿ ಸಾಲ ತೀರಿಸಲು ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.

ದಾಖಲೆ ತಿರುಚುವ ಯತ್ನ: ಕಿತ್ತೂರಿನಲ್ಲಿ ಮಾತನಾಡಿದ ಕಾರ್ಖಾನೆಯ ನಿರ್ದೇಶಕ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ, ಚಾಪಗಾಂವಿ ಅವರ ಆತ್ಮಹತ್ಯೆಯ ಪ್ರಕರಣದ ದಾಖಲೆಗಳನ್ನು ತಿರುಚುವ ಕಾರ್ಯ ನಡೆಯುತ್ತಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಅವರು ಡೆತ್‍ನೋಟ್ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು ಅದನ್ನು ತಿರುಚುವ ಕೆಲಸಕ್ಕೆ ಕೈಹಾಕಿದ್ದಾರೆ. ಕಾರ್ಖಾನೆಯಲ್ಲೂ ಇದೇ ತರಹದ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಗುರುನಾಥ ಚಾಪಂಗಾವಿಗೆ ಕಾರ್ಖಾನೆಯ ಪರಿಹಾರದ ಜತೆಯಲ್ಲಿ ಕಾರ್ಖಾನೆಯ ಅಧ್ಯಕ್ಷರಾಗಿರುವ ಕಿತ್ತೂರಿನಶಾಸಕ ಡಿ.ಬಿ. ಇನಾಮದಾರ ಸಹ ವೈಯಕ್ತಿಕವಾಗಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ ಕಾರ್ಖಾನೆಯ ಅಧ್ಯಕ್ಷ, ಶಾಸಕ ಡಿ.ಬಿ. ಇನಾಮದಾರ ಮೃತರ ನಿವಾಸಕ್ಕೆ ಭೇಟಿ ನೀಡಿಲ್ಲ ಎಂದು ಆಪಾದಿಸಿದ್ದಾರೆ.
ಬಾಕಿ ಇಲ್ಲ- ಇನಾಮದಾರ: ಘಟನೆಯ ಕುರಿತು ಕನ್ನಡಪ್ರಭಕ್ಕೆ ಪ್ರತಿಕ್ರಿಯೆ  ನೀಡಿರುವ ಕಾರ್ಖಾನೆಯ ಅಧ್ಯಕ್ಷ, ಶಾಸಕ ಡಿ.ಬಿ. ಇನಾಮದಾರ, ಗುರುನಾಥ ಚಾಪಗಾಂವಿ ನಮ್ಮ ಕಾರ್ಖಾನೆಯ ಶೇರುದಾರರಲ್ಲ. ಆದರೆ, ಅವರು 43 ಟನ್  ಕಬ್ಬನ್ನು ಕಾರ್ಖಾನೆಗೆ ಪೂರೈಸಿದ್ದು, ಅದರ ಬಾಬ್ತು ರು. 78,000 ವನ್ನು ಈಗಾಗಲೇ ಪಾವತಿಸಲಾಗಿದೆ. ರೈತರ ಅಗತ್ಯಕ್ಕೆ ಅನುಗುಣವಾಗಿ ಅವರಿಗೆ ಹಣ ನೀಡಲಾಗುತ್ತಿದೆ. ಆದರೆ, ಎಂದೂ ಹಣದ ಬಗ್ಗೆ ಕೇಳಿಲ್ಲ. ಮಾನವೀಯತೆಯ ಆಧಾರದಲ್ಲಿ ಕಾರ್ಖಾನೆಯಿಂದಲೂ ಅವರಿಗೆ ಪರಿಹಾರ ನೀಡುವ ಉದ್ದೇಶವಿದೆ. ಈ ಕುರಿತಂತೆ ಮಂಡಳಿಯ ಸಭೆ ನಡೆಸಿ ತೀರ್ಮಾನಿಸಲಾಗುತ್ತದೆ ಎಂದರು.


ಕಬ್ಬು ಬಾಕಿ ಮೊತ್ತ ಭೂ ಕಂದಾಯಕ್ಕೆ ಸೇರ್ಪಡೆ

ಬಾಗಲಕೋಟೆ: ಗುರುನಾಥ ಚಾಪಗಾಂವಿ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕಾರ್ಖಾನೆಗಳಿಂದ ಬಾಕಿ
ಮೊತ್ತ ವಸೂಲು ಮಾಡಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದರತ್ತ ದೃಷ್ಟಿ ಹಾಯಿಸಿದೆ. ಕಬ್ಬಿನ ಬಾಕಿ ಮೊತ್ತವನ್ನು ಭೂ ಕಂದಾಯ ಬಾಕಿ ವಸೂಲಿ ಎಂದು ಪರಿಗಣಿಸಿ ವಸೂಲಾದ ಮೊತ್ತವನ್ನು ರೈತರ ಖಾತೆಗೆ ಜಮೆ ಮಾಡುವಂತೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಸರ್ಕಾರದಿಂದ ಮೇ 21ರಂದೇ ಆದೇಶ ಹೊರಡಿಸಲಾಗಿದ್ದರೂ ಈ ಸಂಬಂಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿರಲಿಲ್ಲ. ಬೆಳಗಾವಿಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ತರುವಾಯ ಪರಿಸ್ಥಿತಿ ಗಂಭೀರತೆ ಅರಿತ ಜಿಲ್ಲಾಡಳಿತಗಳು ಏಳು ದಿನಗಳ ಗಡುವು ನೀಡಿ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ಜಾರಿಗೆ ಮುಂದಾಗಿವೆ. ಗಡುವು ಮುಗಿದ ನಂತರ ಸಕ್ಕರೆ ಮುಟ್ಟುಗೋಲು ಹಾಕಿಕೊಂಡು ರೈತರ ಖಾತೆಗೆ ಬಾಕಿ ಮೊತ್ತ ಜಮೆ ಮಾಡುವ ಉದ್ದೇಶ ಹೊಂದಲಾಗಿದೆ.

ಎರಡು ಎಕರೆ ಭೂಮಿ
ಗುರುನಾಥ ಚಾಪಗಾಂವಿ ಅವರಿಗಿದ್ದ ಎರಡು ಎಕರೆ ಭೂಮಿ ಕಬ್ಬು ಬೆಳೆ ಬೆಳೆದು ಜೀವನ ಸಾಗಿಸುತ್ತಿದ್ದರು. ಗುರುನಾಥಗೆ ಇಬ್ಬರು ಮಕ್ಕಳು, ಮಗಳಿಗೆ ವಿವಾಹವಾಗಿದ್ದರೆ, ಮಗ ಭರಮು ಚಾಪಗಾಂವಿ ಐಟಿಐ ಅಧ್ಯಯನ ಮಾಡುತ್ತಿದ್ದಾರೆ. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಕೆ.ಕೆ. ಕೊಪ್ಪ ಶಾಖೆಯಲ್ಲಿ  ರು. 1 ಲಕ್ಷ ಸಾಲ ಪಡೆದಿದ್ದರು. ಅಲ್ಲದೇ, ಖಾಸಗಿ ವ್ಯಕ್ತಿಗಳ ಬಳಿಯಿಂದಲೂ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.


ಆತ್ಮಹತ್ಯೆಗೀಡಾದ ರೈತ ಗುರುನಾಥ ಚಾಪಗಾಂವಿ ಅವರ ಕುಟುಂಬಕ್ಕೆ ಕೃಷಿ ಇಲಾಖೆಯ ವತಿಯಿಂದ ರು. 1 ಲಕ್ಷ ಪರಿಹಾರ ನೀಡಲಾಗುವುದು. ಅಲ್ಲದೆ, ಅವರು ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ 43 ಟನ್ ಕಬ್ಬು ಪೂರೈಸಿದ್ದರು. ಕಾರ್ಖಾನೆ ಎರಡ್ಮೂರು ದಿನದ ಹಿಂದೆಯೇ ಕಬ್ಬಿನ ಬಾಕಿ ಬಿಲ್ ಪಾವತಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
- ಎನ್. ಜಯರಾಂ,
ಜಿಲ್ಲಾಧಿಕಾರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com