

ದೊಡ್ಡಬಳ್ಳಾಪುರ: ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿರುವ ತಾಲ್ಲೂಕಿನ ಟೆರ್ರಾಫಾರ್ಮ ಘಟಕವನ್ನು ಈ ಕೂಡಲೇ ನಿಲ್ಲಿಸಬೇಕು. ಇಲ್ಲಿನ ಜನರ ಬದುಕಿನ ಜೊತೆ ಚಲ್ಲಾಟವಾಡುತ್ತಿರುವ ಅಧಿಕಾರಿಗಳ ಧೋರಣೆ ಬದಲಾಗಬೇಕು. ನಮ್ಮ ಬದುಕನ್ನು ಕಂಗಾಲಾಗಿಸಿರುವ ಕಸ ನಮ್ಮೂರಿಗೆ ಬೇಡ ಎಂದು ಆಗ್ರಹಿಸಿ ನೂರಾರು ಮಹಿಳೆಯರು ಮಂಗಳವಾರ ಸಂಜೆ ಟೆರ್ರಾಫಾರ್ಮ ಕಸ ವಿಲೇವಾರಿ ಘಟಕದ ಬಳಿ ಚಪ್ಪಲಿ ಕೈಯಲ್ಲಿ ಹಿಡಿದು ಬೃಹತ್ ಪ್ರತಿಭಟನೆ ನಡೆಸಿದರು.
ಬಿಬಿಎಂಪಿ ಅವೈಜ್ಞಾನಿಕ ಕಸ ವಿಲೇವಾರಿಯಿಂದಾಗಿ ನಾವು ಬದುಕಿ ಬಾಳಿದ ಹಳ್ಳಿಗಳನ್ನು ಬಿಟ್ಟು ಹೋಗಬೇಕಾದ ದುಸ್ಥಿತಿ ಬಂದಿದೆ. ಹತ್ತಾರು ಹಳ್ಳಿಗಳಿಗೆ ಕಸದ ಕೆಟ್ಟವಾಸನೆ ಹರಡಿದ್ದು, ಅನೇಕ ಜನ ರೋಗಪೀಡಿತರಾಗಿದ್ದಾರೆ. ಅನೇಕ ಜನ ಹಳ್ಳಿಗಳಿಂದ ವಲಸೆ ಹೋಗಿದ್ದಾರೆ. ಮತ್ತೆ ಕೆಲವರು ನರಕಯಾತನೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ವರ್ಷಗಟ್ಟಲೆ ಹೋರಾಟಗಳು ನಡೆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಘಟಕ ಮುಚ್ಚುವ ಭರವಸೆ ಕೊಟ್ಟಿದ್ದ ಜನ ಈಗ ಮೌನವಾಗಿದ್ದಾರೆ. ಈ ಅನ್ಯಾಯ ಸಹಿಸಲು ಸಾಧ್ಯವಿಲ್ಲ. ನಮ್ಮ ಭವಿಷ್ಯ ರಕ್ಷಿಸಿಕೊಳ್ಳುವ ಅನಿವಾರ್ಯತೆ ಬಂದೊದರಿದ್ದು, ವ್ಯಾಪಕ ಹೋರಾಟಕ್ಕೆ ಸಜ್ಜುಗೊಂಡಿರುವುದಾಗಿ ಗುಂಡ್ಲಹಳ್ಳಿ ಸುತ್ತಮುತ್ತ ರೈತ ಮಹಿಳೆಯರು ಘೋಷಿಸಿದ್ದಾರೆ.
50ಕ್ಕೂ ಹೆಚ್ಚು ಲಾರಿಗಳಿಗೆ ತಡೆ:
ಬಿಬಿಎಂಪಿ ವ್ಯಾಪ್ತಿಯ ಕಸವನ್ನು ತುಂಬಿಕೊಂಡು ಟೆರ್ರಾಫಾರ್ಮ ಘಟಕಕ್ಕೆ ಬಂದ 50ಕ್ಕೂ ಹೆಚ್ಚು ಕಸದ ಲಾರಿಗಳನ್ನು ಘಟಕ ಪ್ರವೇಶಿಸಲು ಬಿಡದೆ ರಸ್ತೆಯಲ್ಲೇ ನಿಲ್ಲಿಸಿ ಪ್ರತಿಭಟಿಸಿದ ರೈತ ಮಹಿಳೆಯರು,ಯಾವುದೇ ಕಾರಣಕ್ಕೂ ಇಲ್ಲಿ ಕಸ ಹಾಕಲು ಬಿಡುವುದಿಲ್ಲ. ಬೇಕಿದ್ದರೆ ಬೆಂಗಳೂರು ಕಸವನ್ನು ಬೆಂಗಳೂರಿನಲ್ಲೇ ವಿಲೇವಾರಿ ಮಾಡಿಕೊಳ್ಳಿ. ನಿಮ್ಮ ದುರಾಸೆ ಮತ್ತು ಸ್ವಾರ್ಥಕ್ಕೆ ನಮ್ಮ ಬದುಕು ಬರಡಾಗಲು ಬಿಡುವುದಿಲ್ಲ ಎಂದು ಹೇಳಿ ಚಪ್ಪಲಿಗಳನ್ನು ಕಳಚಿ ಕೈಯಲ್ಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.