

ಬೆಂಗಳೂರು: ವಿದ್ಯಾರ್ಥಿ ಅಕ್ಷತಾ ದೇವಾಡಿಗ (18) ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸುನೀಲ್ ಎಂಬಾತನನ್ನು ಉಡುಪಿ ಜಿಲ್ಲಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹತ್ಯೆ ಮಾಡುವುದಕ್ಕೂ ಮುನ್ನ ಸುನೀಲ್ (19) ಅಕ್ಷತಾಳನ್ನು ತನ್ನ ಆಸೆ ಪೂರೈಸುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ಒಪ್ಪದ ಅಕ್ಷತಾ ಸುನೀಲ್ ಗೆ ಬೈದಿದ್ದಾಳೆ. ಅಕ್ಷತಾಳ ಈ ಪ್ರತಿಕ್ರಿಯೆಗೆ ಕೋಪಗೊಂಡ ಸುನೀಲ್ ಅಕ್ಷತಾಳನ್ನು ಬಲವಂತದಿಂದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಕ್ಷತಾಳ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ.ಇದು ಸಾಧ್ಯವಾಗದೆ ಅಕ್ಷತಾಳ ವೇಲ್ ತೆಗೆದುಕೊಂಡು ಆಕೆಯ ಕುತ್ತಿಗೆಗೆ ಬಿಗಿದಿದ್ದಾನೆ. ಉಸಿರುಗಟ್ಟಿ ಸಾವನ್ನಪ್ಪಿದ ಅಕ್ಷತಾಳನ್ನು ಕಂಡ ಸುನೀಲ್ ಮತ್ತೆ ಶವದ ಮೇಲೆಯೇ ಅತ್ಯಾಚಾರ ಮಾಡಲು ಯತ್ನಿಸಿ ನಂತರ ಶವವನ್ನು ಬಿಸಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿ ಅಕ್ಷತಾ ಬೈಂದೂರು ಪಿಯುಸಿ ಕಾಲೇಜಿನಲ್ಲಿ ಮೊದಲನೇ ವರ್ಷದ ಪಿಯುಸಿ ಓದುತ್ತಿದ್ದಳು. ಬುಧವಾರ ಬೆಳಿಗ್ಗೆ ಕಾಲೇಜಿಗೆ ಹೋದ ಅಕ್ಷತಾ ಸಂಜೆ 7 ಗಂಟೆಯಾದರೂ ಮನೆಗೆ ಹಿಂದುರಿಗಿರಲಿಲ್ಲ. ಹೀಗಾಗಿ ಗಾಬರಿಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಹೆನಬೇರು ಗ್ರಾಮ ಪ್ರದೇಶದಲ್ಲಿ ಅಕ್ಷತಾಳ ಶವಪತ್ತೆಯಾಗಿದೆ. ಈ ಪ್ರಕರಣ ಉಡುಪಿಯಾದ್ಯಂತ ಆತಂಕದ ವಾತಾವರಣವನ್ನು ಸೃಷ್ಟಿಸತ್ತಲ್ಲದೇ, ಅಕ್ಷತಾಳ ಸಾವು ಪ್ರಕರಣ ವಿರೋಧಿಸಿ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು.
ಪ್ರಕರಣದ ಸಂಬಂಧ ತನಿಖೆ ಚುರುಕುಗೊಳಿಸಿದ್ದ ಉಡುಪಿ ಜಿಲ್ಲಾ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಬೈಂದೂರಿನ ಯೋಜನಾ ನಗರದ ನಿವಾಸಿಯಾಗಿದ್ದು, ಐಟಿಐ ವಿದ್ಯಾಭ್ಯಾಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.