

ಬೆಂಗಳೂರು: ಹಳೆಯ ವಸ್ತುಗಳ ಮಾರಾಟ ಮಾಡುವ ಆನ್ ಲೈನ್ ಸಂಸ್ಥೆ 'ಓಎಲ್ ಎಕ್ಸ್ ' ಹಾಗೂ ಕ್ವಿಕ್ಕರ್ ನಲ್ಲಿ 12 ಲಕ್ಷದಿಂದ 15 ಲಕ್ಷ ಬೆಲೆಬಾಳುವ ಕಾರುಗಳನ್ನು ಕೇವಲ 2-3 ಲಕ್ಷಕ್ಕೆ ಮಾರಾಟ ಮಾಡುತ್ತಿರುವುದಾಗಿ ಹೇಳಿ ಸಾರ್ವಜನಿಕರ ವಂಚಿಸುತ್ತಿದ್ದ ನೈಜೀರಿಯಾದ ಪ್ರಜೆಗಳ ಬೃಹತ್ ವಂಚನಾ ಜಾಲವನ್ನು ಚಿಕ್ಕಪೇಟೆ ಪೊಲೀಸರು ಪತ್ತೆ ಮಾಡಿದ್ದಾರೆ.
ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಜಾಲದ ಬಗ್ಗೆ ಮಾಹಿತಿ ನೀಡಿದರು.ಬಾಗಲಗುಂಟೆ ಸಮೀಪದ ಶೇಷಾದ್ರಿ ನಗರದಲ್ಲಿ ವಾಸವಿದ್ದ ನೈಜೀರಿಯಾಗ ಬೊಲಾಜಿ ಡೆಸ್ಮಂಡ್ (36), ಈತನ ಪತ್ಮಿ ತಮಿಳುನಾಡು ಮೂಲದ ಅವೆರಿಲ್ ಲವಲ್ ಡೆಸ್ಮಂಡ್ (24), ತಮಿಳುನಾಡಲ್ಲಿ ವಾಸವಿದ್ದ ಚುಕಾ ಓಕ್ಪಲಾ (30), ಓಜೆ ಕಾಲಿಂಗ್ (28), ಒಜ ಲವಲ್ (30), ಕ್ರಿಸ್ಟಿಯನ್ ಒಬಿನ್ನ(31) ಬಂಧಿತರು.
ಇವರಿಂದ 2 ಕಾರ್, ವಿವಿಧ ಕಂಪೆನಿಯ ಲ್ಯಾಪ್ ಟಾಪ್,ಮೊಬೈಲು ಫೋನ್, ಪೆನ್ ಡ್ರೈವ್, ಮೆಮೊರಿ ಕಾರ್ಡ್, ಸಿಮ್ ಕಾರ್ಡ್, ನಕಲಿ ದಾಖಲೆ ಸೃಷ್ಟಿಸಲು ಬಳಸುತ್ತಿದ್ದ ಸೀಲ್, ನಕಲಿ ಅಫಿಡವಿಟ್ ವಶಪಡಿಸಿಕೊಳ್ಳಲಾಗಿದೆ.