ಸಿಎಂ ದಿಢೀರ್ ನಗರ ಪ್ರದಕ್ಷಿಣೆ

ಆರು ತಿಂಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಮಹಾನಗರದಲ್ಲಿ ದಿಢೀರ್ ಮಿಂಚಿನ ಸಂಚಾರ ನಡೆಸಿ ವಿವಿಧ ಇಲಾಖೆಗಳಿಗೆ ಚುರುಕು ಮುಟ್ಟಿಸಿದರು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on: 

ಬೆಂಗಳೂರು: ಆರು ತಿಂಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ  ಮಹಾನಗರದಲ್ಲಿ ದಿಢೀರ್ ಮಿಂಚಿನ ಸಂಚಾರ ನಡೆಸಿ ವಿವಿಧ ಇಲಾಖೆಗಳಿಗೆ ಚುರುಕು ಮುಟ್ಟಿಸಿದರು.

ನಗರದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳು, ಮೇಲ್ಸೇತುವೆಗಳು ಮತ್ತು ರಾಜಕಾಲುವೆಗಳ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ, ಇದು ಚುನಾವಣೆ ಹಿನ್ನೆಲೆಯ ನಗರ ಸಂಚಾರ ಎಂಬ ಸುಳಿವನ್ನೂ ನೀಡಿದರು. ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ದತೆ ನಡೆಸುತ್ತಿದ್ದು, ಸದ್ಯದಲ್ಲೆ ಮೀಸಲು ಪಟ್ಟಿಯನ್ನೂ ಬಿಡುಗಡೆ ಮಾಡಲಾಗುವುದು. ಇನ್ನು ಮುಂದೆ ಬಿಬಿಎಂಪಿಗೆ ಹೊಸ ಆಡಳಿತ ಬರುವವರೆಗೂ ಪ್ರತಿ ವಾರ ನಗರ ಪ್ರದಕ್ಷಿಣೆ ನಡೆಸಲಾಗುವುದು. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಸರ್ಕಾರ ಒದಗಿಸಬೇಕಿದ್ದ ಹಿಂದಿನ ವರ್ಷದ ಬಾಕಿ ಸಾವಿರ ಕೋಟಿ ಹಾಗೂ ಪ್ರಸಕ್ತ ಸಾಲಿನಲ್ಲಿ 1500 ಕೋಟಿಗಳಲ್ಲಿ ರಸ್ತೆ, ಮೇಲ್ಸೇತುವೆ ಮತ್ತು ರಾಜಕಾಲುವೆ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ ಎಂದರು.

ನಗರದ ಇಬ್ಬರು ಸಚಿವರು ಹಾಗೂ 10 ಮಂದಿ ಶಾಸಕರೊಂದಿಗೆ ಬೆಳಗ್ಗೆ 10 ಗಂಟೆಯಿಂದ ಗೃಹ ಕಚೇರಿ ಕೃಷ್ಣಾದಿಂದ ಪ್ರದಕ್ಷಿಣೆ ಆರಂಭಿಸಿದರು. ಮೊದಲಿಗೆ ಸೇಂಟ್ ಮಾರ್ಕ್ ರಸ್ತೆಗೆ ಭೇಟಿ ನೀಡಿದ ಅವರು ಅಲ್ಲಿನ ಬಹುತೇಕ ರಸ್ತೆಗಳು ಫುಟ್ಪಾತ್ ಗಿಂತಲೂ ಕಿರಿದಾಗಿರುವುದನ್ನು ಕಂಡು ಬೇಸರಗೊಂಡರು. ಫುಟ್ ಪಾತ್ ರಸ್ತೆಗಿಂತಲೂ ದೊಡ್ಡದಾಗಿದ್ದರೆ ವಾಹನಗಳು ಹೋಗುವುದಾದರೂ ಹೇಗೆ ? ಆದ್ದರಿಂದ ಇನ್ನು ಮುಂದೆ ಟೆಂಡರ್ ಶ್ಯೂರ್ ಯೋಜನೆಯಡಿ ತೆಗೆದುಕೊಳ್ಳುವ ರಸ್ತೆಗಳಲ್ಲಿ ಫುಟ್ ಪಾತ್ ಅಗಲವನ್ನು ಕಡಿಮೆ ಮಾಡಬೇಕೆಂದು ಸೂಚಿಸಿದರು. ಅಲ್ಲಿಂದ ಅನಿರೀಕ್ಷಿತವಾಗಿ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಂದ ಯಶವಂತಪುರ ವೃತ್ತದವರೆಗೂ ನಿರ್ಮಾಣವಾಗಬೇಕಿರುವ 8 ಪಥ ಸಿಗ್ನಲ್ ಮುಕ್ತ ಕಾರಿಡಾರ್ ರಸ್ತೆ ಕಾಮಗಾರಿ ವೀಕ್ಷಿಸಿದರು. ಇದಕ್ಕೆ ಸಕಾಲಕ್ಕೆ ಅನುದಾನ ಬಿಡುಗಡೆಯಾಗದೆ ಕಾಮಗಾರಿ ವಿಳಂಬವಾಗಿರುವುದನ್ನು ಗಮನಿಸಿ ಅಗತ್ಯ ಅನುದಾನ ಬಿಡುಗಡೆ ಮಾಡಿ 15 ದಿನಗಳಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.

ರಾಜಾಜಿನಗರ 1ನೇ ಬ್ಲಾಕ್ ನಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ವೀಕ್ಷಿಸಿದರು. ಅಲ್ಲಿಗೆ ಭೇಟಿ ನೀಡಿದ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ರಾಜಾಜಿನಗರ 1ನೇ ಬ್ಲಾಕ್ ವೃತ್ತದಲ್ಲಿ ಮೇಲ್ಸೇತುವೆ ಹಾದು ಹೋದರೂ  ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ. ಆದ್ದರಿಂದ ಇಲ್ಲಿ ತುರ್ತಾಗಿ ಅಂಡರ್ ಪಾಸ್ ನಿರ್ಮಿಸುವ ಪ್ರಸ್ತಾಪ ಸಿದ್ದಪಡಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಆದೇಶಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com